ಚೆನ್ನೈ: ತಮಿಳುನಾಡಿನ ರಾಜ್ಯಪಾಲ ಆರ್.ಎನ್. ರವಿ ಭಾಗವಹಿಸಿದ್ದ ದೂರದರ್ಶನ ತಮಿಳು ಸುವರ್ಣ ಮಹೋತ್ಸವದಲ್ಲಿ ಹಿಂದಿ ಮಾಸಾಚರಣೆ ಸಮಾರೋಪ ಆಯೋಜನೆ, ರಾಜ್ಯದ ನಾಡಗೀತೆಯಿಂದ ‘ದ್ರಾವಿಡ’ ಪದ ಕೈ ಬಿಟ್ಟು ಹಾಡಿದ್ದು ವಿವಾದಕ್ಕೆ ಕಾರಣವಾಗಿದೆ.
ಈ ಬೆಳವಣಿಗೆಯಿಂದ ಆಕ್ರೋಶಗೊಂಡಿರುವ ಡಿಎಂಕೆ ಮಾತೃಪಕ್ಷ ‘ದ್ರಾವಿಡರ್ ಕಳಗಂ’ ಕಾರ್ಯಕರ್ತರು ‘ಸರಿಯಾಗಿ ನಡೆದುಕೊಳ್ಳಿ’– ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಜತೆಗೆ ಸಂಘರ್ಷ ಬೇಡ’ ಎಂದು ಸಂದೇಶ ಹೊಂದಿದ ಪೋಸ್ಟರ್, ಗೋಡೆ ಬರಹಗಳನ್ನು ನಗರದ ವಿವಿಧೆಡೆಗಳಲ್ಲಿ ಶನಿವಾರ ಅಳವಡಿಸಿದ್ದಾರೆ.
‘ನರಿಯಂತೆ ವರ್ತಿಸಬೇಡಿ, ಆರ್ಯನ್ ರವಿ ಅವರೇ, ದ್ರಾವಿಡ ಹಿರೋ ಸ್ಟಾಲಿನ್ ಜತೆ ಸಂಘರ್ಷ ಬೇಡ’ ಎಂದು ಸಂದೇಶವನ್ನೂ ಪ್ರಕಟಿಸಲಾಗಿದೆ. ಆದರೆ ಬರಹ ಬರೆದವರ ಹೆಸರು ಉಲ್ಲೇಖಿಸಿಲ್ಲ.
ಅಲ್ಲದೇ, ಪ್ರತಿಭಟನಾರ್ಥವಾಗಿ 100ಕ್ಕೂ ಅಧಿಕ ಪೋಸ್ಟ್ ಕಾರ್ಡ್‌ಗಳನ್ನು ರಾಜಭವನಕ್ಕೆ ಕಳುಹಿಸಿದ್ದಾರೆ.
‘ರಾಜ್ಯಪಾಲರ ನಡವಳಿಕೆಯನ್ನು ಖಂಡಿಸಿ ಎಲ್ಲರೂ ಇಲ್ಲಿ ಒಟ್ಟಿಗೆ ಸೇರಿದ್ದೇವೆ. ನಾವು ಕಳುಹಿಸಿರುವ ಪೋಸ್ಟ್ ಕಾರ್ಡ್‌ಗಳು ರಾಜ್ಯಪಾಲರಿಗೆ ತಲುಪುವ ವಿಶ್ವಾಸವಿದೆ’ ಎಂದು ಪ್ರತಿಭಟನಕಾರರು ತಿಳಿಸಿದರು.
ಆರೋಪ–ಪ್ರತ್ಯಾರೋಪ
ಚೆನ್ನೈ: ‘ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ಅವರು ತಮ್ಮ ಹುದ್ದೆಯಲ್ಲಿ ಮುಂದುವರಿಯಬೇಕಾದರೆ ವಿಭಜನಕಾರಿ ಶಕ್ತಿಗಳಿಂದ ದೂರವಿರಬೇಕು. ಸಂವಿಧಾನದ ಪ್ರಕಾರ ಕರ್ತವ್ಯಗಳನ್ನು ನಿರ್ವಹಿಸಬೇಕು’ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಪ್ರತಿಕ್ರಿಯಿಸಿದ್ದಾರೆ. ರಾಜಭವನವನ್ನು ರಾಜಕೀಯ ಪಕ್ಷದ ಕಚೇರಿಯನ್ನಾಗಿ ಮಾಡುವ ಪ್ರಯತ್ನವನ್ನೂ ಕೂಡಲೇ ನಿಲ್ಲಿಸಬೇಕು ಎಂದು ಈ ವೇಳೆ ಒತ್ತಾಯಿಸಿದ್ದಾರೆ. ನಾಡಗೀತೆಯಿಂದ ‘ದ್ರಾವಿಡ’ ಪದ ಕೈ ಬಿಟ್ಟ ವಿಚಾರ ತಮಿಳುನಾಡು ಮುಖ್ಯಮಂತ್ರಿ– ರಾಜ್ಯಪಾಲರ ನಡುವೆ ತಿಕ್ಕಾಟಕ್ಕೆ ಕಾರಣವಾಗಿದೆ. ‘ತಮಿಳು ನಾಡಗೀತೆಯನ್ನು ಅತ್ಯಂತ ಭಕ್ತಿಯಿಂದ ಹಾಡಿರುವುದಾಗಿ ತಿಳಿಸಿದ್ದೀರಿ. ಹಾಗಿದ್ದರೆ ದ್ರಾವಿಡ ಪದ ಕೈ ಬಿಟ್ಟ ಕುರಿತು ಸ್ಥಳದಲ್ಲೇ ಏಕೆ ಖಂಡಿಸಿಲ್ಲ’ ಎಂದು ಸ್ಟಾಲಿನ್ ಪ್ರಶ್ನಿಸಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ರಾಜ್ಯಪಾಲ ಆರ್.ಎನ್.ರವಿ ‘ಆಧಾರರಹಿತ ಅತ್ಯಂತ ಕೀಳುಮಟ್ಟದ ಆರೋಪ’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.