ಲಖನೌ/ಅಲಿಗಡ: ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಅವರ ನಿಧನಕ್ಕೆ ಸಂತಾಪ ಸೂಚಿಸಿರುವ ಅಲಿಗಡ ಮುಸ್ಲಿಂ ವಿಶ್ವವಿದ್ಯಾಲಯದ ಕುಲಪತಿ ಅವರ ವಿರುದ್ಧ ವಿಶ್ವವಿದ್ಯಾಲಯದ ಕ್ಯಾಂಪಸ್ಸಿನಲ್ಲೇ ಆಕ್ಷೇಪಾರ್ಹ ಪೋಸ್ಟರ್‌ಗಳು ಕಾಣಿಸಿಕೊಂಡಿವೆ.
ಈ ಕುರಿತು ತನಿಖೆಗೆ ಆದೇಶಿಸಿರುವ ಉತ್ತರಪ್ರದೇಶ ಸರ್ಕಾರವು, ‘ತಾಲಿಬಾನಿ ಚಿಂತನೆ’ ಹೊಂದಿರುವಂಥವರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದೆ.
ಕ್ಯಾಂಪಸ್ಸಿನ ಗೋಡೆಗಳ ಮೇಲೆ ಕುಲಪತಿ ಅವರ ಕ್ರಮವನ್ನು ಖಂಡಿಸಿ ಬರೆದಿರುವ ಪೋಸ್ಟರ್‌ಗಳಲ್ಲಿ ‘ಅಲಿಗಡ ಮುಸ್ಲಿಂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು’ ಎಂದು ಬರೆಯಲಾಗಿದೆ. ‘ಅಪರಾಧಿಗಾಗಿ ಪ್ರಾರ್ಥಿಸುವುದು ಕ್ಷಮಿಸಲಾಗದ ಅಪರಾಧ’ ಎಂದೂ ಹೇಳಲಾಗಿದೆ.
‘ಕಲ್ಯಾಣ್ ಸಿಂಗ್ ಅವರ ನಿಧನಕ್ಕೆ ಕುಲಪತಿ ಸಂತಾಪದ ಮಾತುಗಳು ನಾಚಿಕೆಗೇಡಿನ ಸಂಗತಿ. ಇದು ನಮ್ಮ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ. ಕಲ್ಯಾಣ್ ಸಿಂಗ್ ಬಾಬರಿ ಮಸೀದಿ ಧ್ವಂಸದ ಮುಖ್ಯ ಆರೋಪಿ ಮಾತ್ರವಲ್ಲದೆ ಸುಪ್ರೀಂಕೋರ್ಟ್ ಆದೇಶವನ್ನು ಪಾಲಿಸದ ಅಪರಾಧಿ ಕೂಡ’ ಎಂದೂ ಪೋಸ್ಟರ್‌ನಲ್ಲಿ ಬರೆಯಲಾಗಿದೆ.
ಅಲಿಗಡ ಮುಸ್ಲಿಂ ವಿಶ್ವವಿದ್ಯಾಲಯದ ಕುಲಪತಿಗಳಾಗಿ ತಾರೀಖ್ ಮನ್ಸೂರ್ ಕಾರ್ಯ ನಿರ್ವಹಿಸುತ್ತಿದ್ದಾರೆ.
ಈ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಉತ್ತರಪ್ರದೇಶದ ಅಲ್ಪಸಂಖ್ಯಾತರ ಕಲ್ಯಾಣ, ಮುಸ್ಲಿಂ ವಕ್ಫ್ ಮತ್ತು ಹಜ್ ಸಚಿವ ಮೊಹ್ಸಿನ್ ರಜಾ ಅವರು, ‘ಕುಲಪತಿ ಅವರು ನಮ್ಮ ಸಂಸ್ಕೃತಿಗೆ ತಕ್ಕಂತೆ ನಡೆದುಕೊಂಡಿದ್ದಾರೆ. ಅವರ ವಿರುದ್ಧ ಪೋಸ್ಟರ್‌ಗಳನ್ನು ಹಾಕುವುದು ವಾತಾವರಣವನ್ನು ಹಾಳುಮಾಡುವ ಪ್ರಯತ್ನ. ಈ ವಿಶ್ವವಿದ್ಯಾಲಯವು ಹಿಂದೂಸ್ತಾನದ್ದು. ಇಲ್ಲಿ ತಾಲಿಬಾನ್ ಇಲ್ಲ. ತಾಲಿಬಾನಿ ಮನಸ್ಥಿತಿಯ ವ್ಯಕ್ತಿಗಳಿದ್ದರೆ ಅವರಿಗೆ ನಾವು ಸೂಕ್ತ ಚಿಕಿತ್ಸೆ ನೀಡುತ್ತೇವೆ. ಘಟನೆಯ ಕುರಿತು ತನಿಖೆಗೆ ಅದೇಶಿಸಲಾಗಿದೆ’ ಎಂದು ಹೇಳಿದ್ದಾರೆ.
ಈ ಬಗ್ಗೆ ವಿಶ್ವವಿದ್ಯಾಲಯದ ಕುಲಪತಿ ಪ್ರತಿಕ್ರಿಯೆಗೆ ಲಭ್ಯರಾಗಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.