ಕೇರಳ: ರೈತರೊಬ್ಬರ ತೋಟದಲ್ಲಿ ಕೊಯ್ಲಿಗೆ ಬಂದಿದ್ದ 400ಕ್ಕೂ ಹೆಚ್ಚು ಬಾಳೆ ಗಿಡಗಳನ್ನು ರಾಜ್ಯ ವಿದ್ಯುತ್ ಇಲಾಖೆ ಅಧಿಕಾರಿಗಳು ಕಡಿದು ಹಾಕಿದ್ದಾರೆ. ಆ ಪ್ರದೇಶದಲ್ಲಿ ಹಾದು ಹೋಗುವ ಹೈಟೆನ್ಷನ್ ವಿದ್ಯುತ್ ತಂತಿಗೆ ಬಾಳೆ ಎಲೆಗಳು ತಾಗುತ್ತಿವೆ ಎಂದು ಬಾಳೆ ಗಿಡಗಳನ್ನು ಕತ್ತರಿಸಿದ್ದು, ಆಘಾತವುಂಟುಮಾಡಿದೆ.
ಎರ್ನಾಕುಲಂ ಜಿಲ್ಲೆಯ ಉಪನಗರದಲ್ಲಿರುವ ಕೋತಮಂಗಲ ನಿವಾಸಿ ಥಾಮಸ್ ಎನ್ನುವವರ ಬಾಳೆತೋಟದಲ್ಲಿ ಶುಕ್ರವಾರ ಈ ಘಟನೆ ನಡೆದಿದೆ.
ಕೆಲವು ಗಿಡಗಳ ಎಲೆಗಳು ಮೇಲೆ ಹಾದು ಹೋಗುತ್ತಿದ್ದ 220 ಕೆ.ವಿ ವಿದ್ಯುತ್ ಲೈನ್‌ಗೆ ತಾಗುತ್ತಿದ್ದವು, ಇದರಿಂದ ವಿದ್ಯುತ್ ಲೈನ್‌ಗೆ ಹಾನಿಯಾಗಲಿದೆ. ಅಲ್ಲದೆ ಈ ಪ್ರದೇಶದಲ್ಲಿ ಮಹಿಳೆಯೊಬ್ಬರಿಗೆ ವಿದ್ಯುತ್ ಪ್ರವಹಿಸಿದ ಪ್ರಕರಣ ಉಲ್ಲೇಖಿಸಿ ಅಧಿಕಾರಿಗಳು ಬೆಳೆದ ಗಿಡಗಳನ್ನು ಕಡಿದು ಹಾಕಿದ್ದಾರೆ ಎನ್ನುವುದು ಪ್ರಾಥಮಿಕ ತನಿಖೆಯ ವರದಿಯಿಂದ ತಿಳಿದುಬಂದಿದೆ ಎಂದು ಕೇರಳ ಇಂಧನ ಸಚಿವರು ತಿಳಿಸಿದ್ದಾರೆ.
ಯಾವುದೇ ಮುನ್ಸೂಚನೆ ನೀಡದೆ ಗಿಡಗಳನ್ನು ಕಡಿಯಲಾಗಿದೆ. ಬಾಳೆಗೆ ಉತ್ತಮ ಬೇಡಿಕೆ ಬರುವ ಓಣಂ ಹಬ್ಬದ ಮಾರುಕಟ್ಟೆಯನ್ನು ಗುರಿಯಾಗಿಟ್ಟುಕೊಂಡು ಒಂದೆರಡು ವಾರಗಳಲ್ಲಿ ಕಟಾವು ಮಾಡಲು ನಿರ್ಧರಿಸಲಾಗಿತ್ತು. ಅಧಿಕಾರಿಗಳು ಸಂಪೂರ್ಣ ಗಿಡಗಳನ್ನು ಕಡಿಯುವ ಬದಲು ಉದ್ದನೆಯ ಎಲೆಗಳನ್ನು ಕತ್ತರಿಸಿದರೆ ಬೆಳೆಯನ್ನು ಉಳಿಸಬಹುದಿತ್ತು ಎಂದು ಥಾಮಸ್ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಘಟನೆ ರೈತರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಇತ್ತ ಇಂಧನ ಸಚಿವ ಕೆ. ಕೃಷ್ಣನ್‌ಕುಟ್ಟಿ ಅವರು ಘಟನೆಯ ಬಗ್ಗೆ ವಿಸ್ತ್ರತ ತನಿಖೆಗೆ ಆದೇಶಿಸಿ ಸೂಕ್ತ ಪರಿಹಾರದ ಭರವಸೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.