ಬೆಂಗಳೂರು: #justasking ಎನ್ನುವ ಹ್ಯಾಷ್ ಟ್ಯಾಗ್ ಮೂಲಕ ಸರ್ಕಾರ, ರಾಜಕೀಯ ಪಕ್ಷ, ನಾಯಕರನ್ನು ನಿರಂತರವಾಗಿ ವಿಮರ್ಶೆಗೆ ಒಳಪಡಿಸುವ ನಟ ಪ್ರಕಾಶ್ ರಾಜ್ ಅವರು ಸದ್ಯ ಅದೇ ಹ್ಯಾಷ್‌ಟ್ಯಾಗ್ ಮೂಲಕ ಪ್ರಶ್ನೆಯೊಂದನ್ನು ಕೇಳಿದ್ದಾರೆ.
‘ಪ್ರ+ಅದಾನಿ…. ಯಾವ ಸಂಧಿ’ ಎಂಬುದು ಅವರ ಪ್ರಶ್ನೆ. ಇದಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಅದಾನಿ ನೆರಳುಳ್ಳ ಚಿತ್ರವೊಂದನ್ನು ಟ್ವಿಟರ್‌ನಲ್ಲಿ ಅವರು ಹಂಚಿಕೊಂಡಿದ್ದಾರೆ. ಈ ಮೂಲಕ ಅವರು ಪ್ರಧಾನಿ ಮತ್ತು ಉದ್ಯಮಿ ಗೌತಮ್ ಅದಾನಿ ಅವರ ನಡುವಿನ ಸಂಬಂಧವನ್ನು ಪ್ರಸ್ತಾಪಿಸಿ ತಿವಿದಿದ್ದಾರೆ.
ಇದರ ಜೊತೆಗೇ, ‘Catch me if you can–ನಿನ್ನಿಂದ ಆದರೆ ನನ್ನನ್ನು ಹಿಡಿ’ ಎಂಬ ಸಾಲನ್ನೂ ಅವರು ಮಾರ್ಮಿಕವಾಗಿ ಬಳಸಿದ್ದಾರೆ.
ಅದಾನಿ ಸಮೂಹದ ಷೇರು ಅಕ್ರಮದ ಕುರಿತು ಇತ್ತೀಚೆಗೆ ಹಿಂಡನ್ ಬರ್ಗ್ ಎಂಬ ಸಂಶೋಧನಾ ಸಂಸ್ಥೆ ವರದಿಯೊಂದನ್ನು ಬಿಡುಗಡೆ ಮಾಡಿತ್ತು.
ಅದಾನಿ ಸಮೂಹವು ‘ಷೇರು ಮೌಲ್ಯದ ಮೇಲೆ ಕೃತಕವಾಗಿ ಪ್ರಭಾವ ಬೀರಬಲ್ಲ ಕೃತ್ಯಗಳಲ್ಲಿ ಲಜ್ಜೆಯಿಲ್ಲದೆ ತೊಡಗಿಸಿಕೊಂಡಿದೆ ಹಾಗೂ ಲೆಕ್ಕಪತ್ರ ವಂಚನೆ ಎಸಗಿದೆ’ ಎಂದು ಹಿಂಡನ್‌ಬರ್ಗ್ ಆರೋಪಿಸಿತ್ತು.
ತೆರಿಗೆ ವಂಚಕರ ಪಾಲಿಗೆ ಸ್ವರ್ಗವೆಂದು ಕರೆಸಿಕೊಂಡಿರುವ ಸಾಗರದಾಚೆಯ ನಾಡುಗಳನ್ನು ಸಮೂಹವು ಶೆಲ್ ಕಂಪನಿಗಳ ಮೂಲಕ ‘ಸರಿಯಲ್ಲದ ರೀತಿಯಲ್ಲಿ’ ಬಳಸಿಕೊಂಡಿದೆ ಎಂದು ಕೂಡ ಅದು ಆರೋಪಿಸಿದೆ.
ಅದಾನಿ ಸಮೂಹಕ್ಕೆ ಸೇರಿದ, ಷೇರುಪೇಟೆ ನೋಂದಾಯಿತ ಕಂಪನಿಗಳ ಸಾಲದ ಪ್ರಮಾಣವು ಗಣನೀಯ ಪ್ರಮಾಣದಲ್ಲಿ ಇದೆ. ಇದರಿಂದಾಗಿ ಇಡೀ ಸಮೂಹದ ಹಣಕಾಸಿನ ಸ್ಥಿತಿ ಅಪಾಯದಲ್ಲಿದೆ ಎಂದು ಕೂಡ ವರದಿಯಲ್ಲಿ ಹೇಳಲಾಗಿದೆ.
ವರದಿ ಬಹಿರಂಗವಾಗುತ್ತಲೇ ಅದಾನಿ ಸಮೂಹ ಸಂಸ್ಥೆಗಳ ಷೇರು ಮೌಲ್ಯ ಭಾರಿ ಪ್ರಮಾಣದಲ್ಲಿ ಕುಸಿದಿದೆ.
ಈ ಹಿನ್ನೆಲೆಯಲ್ಲಿ, ಅದಾನಿ ಸಮೂಹದ ಅಕ್ರಮವನ್ನು ತನಿಖೆಗೆ ಒಳಪಡಿಸಬೇಕು ಎಂದು ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷಗಳು ಒತ್ತಾಯಿಸಿವೆ. ಲೋಕಸಭೆಯಲ್ಲಿ ಈ ವಿಚಾರ ಕೋಲಾಹಲವನ್ನೇ ಸೃಷ್ಟಿ ಮಾಡಿದೆ. ಆದರೆ, ಈ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಇನ್ನೊಂದೆಡೆ, ಪ್ರಧಾನಿ ನರೇಂದ್ರ ಮೋದಿ ಅವರು ಅದಾನಿ ಅವರ ಬೆನ್ನಿಗೆ ನಿಂತಿದ್ದಾರೆ, ಅವರ ರಕ್ಷಣೆಯಲ್ಲಿ ತೊಡಗಿದ್ದಾರೆ ಎಂಬ ಆರೋಪಗನ್ನೂ ರಾಜಕೀಯ ಪಕ್ಷಗಳು ಮಾಡಿವೆ. ಈ ನಡುವೇ ಪ್ರಕಾಶ್ ರಾಜ್ ಅವರು ‘ಪ್ರ+ಅದಾನಿ…. ಯಾವ ಸಂಧಿ?’ ಎಂದು ಕೇಳುವ ಮೂಲಕ ಚರ್ಚೆಯ ಅನಲಿಗೆ ತುಪ್ಪ ಸುರಿದಿದ್ದಾರೆ.
ಇವುಗಳನ್ನೂ ಓದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.