ಭೋಪಾಲ್:ಬಿಜೆಪಿಯಿಂದ ಸ್ಪರ್ಧಿಸಿರುವ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ವಿರುದ್ಧ ಪೊಲೀಸ್ ಅಧಿಕಾರಿ ಹೇಮಂತ್ ಕರ್ಕರೆ ಶಿಷ್ಯ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.
ಸಾಧ್ವಿ ಪ್ರಜ್ಞಾ ಹೇಳಿಕೆಯಿಂದ ನನ್ನ ಮನಸ್ಸಿಗೆ ತುಂಬಾ ನೋವಾಗಿದೆ. ಕರ್ಕರೆ ಶಿಷ್ಯನಾಗಿ ನಾನು ಸೇವೆ ಸಲ್ಲಿಸಿದ್ದೇನೆ. ಆದ್ದರಿಂದಲೇ ನಾನು ಪ್ರಜ್ಞಾ ವಿರುದ್ಧ ಸ್ಪರ್ಧಿಸುತ್ತಿದ್ದೇನೆ ಎಂದು 60 ವರ್ಷದ ರಿಯಾಜುದ್ದೀನ್ ದೇಶಮುಖ್ ತಿಳಿಸಿದ್ದಾರೆ.1998ರಲ್ಲಿ ಅಕೋಲಾದಲ್ಲಿ ಎಸ್ಪಿಯಾಗಿದ್ದ ಹೇಮಂತ್ ಕರ್ಕರೆ ಅವರ ಜೊತೆ ನಾನು ಸಬ್ ಇನ್ಸ್‌ಪೆಕ್ಟರ್ ಆಗಿ ಸೇವೆಸಲ್ಲಿಸಿರುವೆ. ನನಗೆ ಅವರು ಗುರುಗಳಾಗಿದ್ದರು. ನಾನು ಅವರ ನಿಕಟವರ್ತಿಯಾಗಿದ್ದೆ, ಅವರಿಂದ ನಾನು ಸಾಕಷ್ಟು ಕಲಿತಿದ್ದೇನೆ. ಇಂತಹವರ ವಿರುದ್ಧ ಹೇಳಿಕೆ ನೀಡಿದ್ದು ನಾನು ಚುನಾವಣೆಯಲ್ಲಿ ನಿಲ್ಲುವಂತೆ ಮಾಡಿತು ಎಂದು ದೇಶಮುಖ್ ಹೇಳಿದರು.
ನಾನು ಶಾಪ ಕೊಟ್ಟಿದ್ದರಿಂದಲೇ ಮುಂಬೈ ಎಟಿಎಸ್ ವಿಭಾಗದ ಅಧಿಕಾರಿಹೇಮಂತ್ ಕರ್ಕರೆಗೆ ಸಾವು ಬಂತು ಎಂದು ಸಾಧ್ವಿ ಪ್ರಜ್ಞಾ ಹೇಳಿಕೆ ನೀಡಿದ್ದರು. ಈ ಹೇಳಿಕೆಯಿಂದಾಗಿ ದೇಶದ ನಾಗರೀಕರಿಂದ ಟೀಕೆಗೆ ಗುರಿಯಾಗಿದ್ದರು.
ಇತ್ತೀಚೆಗೆಚುನಾವಣಾ ರ‌್ಯಾಲಿಯೊಂದರಲ್ಲಿ ಮಾತನಾಡುತ್ತಿದ್ದ ಸಾಧ್ವಿ ಪ್ರಜ್ಞಾಕಾಂಗ್ರೆಸ್‌ನ ಅಭ್ಯರ್ಥಿ ದಿಗ್ವಿಜಯ್ ಸಿಂಗ್ ಒಬ್ಬ ಉಗ್ರ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದಲ್ಲದೆ, 16 ವರ್ಷಗಳ ಹಿಂದೆ ಇಲ್ಲಿ ದಿಗ್ವಿಜಯ ಸಿಂಗ್ ಅವರನ್ನು ಸನ್ಯಾಸಿನಿ ಉಮಾ ಭಾರತಿ ಸೋಲಿಸಿದ್ದರು. ಈಗ ನಾನು ಬಂದಿದ್ದೇನೆ. ಈ ಬಾರಿ ಸಿಂಗ್ರಾಜಕೀಯ ಬದುಕನ್ನು ಅಂತ್ಯಗೊಳಿಸುತ್ತೇನೆ ಎಂದಿದ್ದಾರೆ.
ಈ ಮಧ್ಯೆ ಬಿಜೆಪಿ ಮುಖಂಡರಾದ ಫಾತಿಮಾ ರಸೂಲ್ ಸಿದ್ದಿಕಿ ಪ್ರಜ್ಞಾ ಠಾಕೂರ್ ಪರ ಪ್ರಚಾರ ನಡೆಸಲು ನಿರಾಕರಿಸಿದ್ದಾರೆ. ಬಿಜೆಪಿಯಲ್ಲಿ ಸಾಧ್ವಿಗಿಂತ ಉತ್ತಮ ಅಭ್ಯರ್ಥಿಗೆ ಟಿಕೆಟ್ ಕೊಡಬಹುದಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.