ADVERTISEMENT

ನಿಮ್ಮ ಶೌಚಾಲಯ ಶುಚಿಗೊಳಿಸುವುದಕ್ಕೆ ನಮ್ಮನ್ನು ಆಯ್ಕೆ ಮಾಡಿಲ್ಲ: ಪ್ರಜ್ಞಾ ಠಾಕೂರ್

​ಪ್ರಜಾವಾಣಿ ವಾರ್ತೆ
Published 22 ಜುಲೈ 2019, 16:26 IST
Last Updated 22 ಜುಲೈ 2019, 16:26 IST
   

ನವದೆಹಲಿ: ನಾವು ಚರಂಡಿ ಶುಚಿಗೊಳಿಸುವುದಕ್ಕಾಗಿ ಇರುವವರಲ್ಲ, ನಿಮ್ಮ ಶೌಚಾಲಯವನ್ನು ಶುಚಿಗೊಳಿಸುವುದಕ್ಕಾಗಿಯೂ ನಮ್ಮನ್ನು ಸಂಸದರನ್ನಾಗಿ ಆಯ್ಕೆ ಮಾಡಿಲ್ಲ. ಯಾವ ಕೆಲಸ ಮಾಡಲು ನಮ್ಮನ್ನು ಆಯ್ಕೆ ಮಾಡಲಾಗಿದೆಯೋ ಅದನ್ನು ನಾವು ಪ್ರಾಮಾಣಿಕವಾಗಿ ಮಾಡುತ್ತೇವೆ ಎಂದು ಭೋಪಾಲದ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಹೇಳಿರುವುದಾಗಿ ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಮಾಲೇಗಾಂವ್ ಬಾಂಬ್ ಸ್ಫೋಟದ ಆರೋಪಿಯಾಗಿರುವ ಬಿಜೆಪಿ ಸಂಸದೆ ಪ್ರಜ್ಞಾ, ಸೆಹೋರ್‌ನಲ್ಲಿ ಭಾನುವಾರ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಈ ರೀತಿ ಹೇಳಿದ್ದರು.ಪ್ರಜ್ಞಾ ಅವರ ಹೇಳಿಕೆಯಿಂದ ಬಿಜೆಪಿಗೆ ಇರಿಸುಮುರಿಸು ಉಂಟಾಗಿದ್ದು ಬಿಜೆಪಿ ಕಾರ್ಯಾಧ್ಯಕ್ಷ ಜೆ.ಪಿ ನಡ್ಡಾ ಕೂಡಾ ಸಂಸದೆಯನ್ನು ಟೀಕಿಸಿದ್ದಾರೆ.

ನರೇಂದ್ರ ಮೋದಿ ಸರ್ಕಾರದ ಸ್ವಚ್ಛ ಭಾರತ್ ಅಭಿಯಾನದ ಬಗ್ಗೆ ಟೀಕಿಸಿದ ಪ್ರಜ್ಞಾ ವಿರುದ್ಧ ಬಿಜೆಪಿ ಪ್ರಧಾನ ಕಚೇರಿ ಸಮನ್ಸ್ ನೀಡಿದೆ.ಪ್ರಜ್ಞಾ ಅವರು ಪಕ್ಷದ ಅಭಿಯಾನ ಮತ್ತು ವಿಚಾರಧಾರೆಗಳ ವಿರುದ್ಧ ಈ ರೀತಿ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು ಎಂದು ನಡ್ಡಾ ಹೇಳಿದ್ದಾರೆ.

ADVERTISEMENT

ಪ್ರಜ್ಞಾ ಈ ರೀತಿಯ ಹೇಳಿಕೆ ನೀಡಿರುವುದು ಇದು ಮೊದಲೇನೂ ಅಲ್ಲ.ಲೋಕಸಭಾ ಚುನಾವಣಾ ಪ್ರಚಾರ ವೇಳೆ ಮಹಾತ್ಮ ಗಾಂಧಿಯ ಹಂತಕ ನಾಥೂರಾಮ್ ಗೋಡ್ಸೆಯನ್ನು ದೇಶ ಪ್ರೇಮಿ ಎಂದಿದ್ದರು ಇವರು.

ಮಾಲೆಗಾಂವ್‌ ಪ್ರಕರಣ : ತನಿಖೆಯ ಅವಧಿ ಕೇಳಿದ ಕೋರ್ಟ್‌

ಮುಂಬೈ (ಪಿಟಿಐ): 2008ರಲ್ಲಿ ನಡೆದ ಮಾಲೇಗಾಂವ್‌ ಬಾಂಬ್‌ ಸ್ಫೋಟದ ತನಿಖೆ ಪೂರ್ಣಗೊಳಿಸಲು ಎಷ್ಟು ಸಮಯಬೇಕಾಗಬಹುದು ಎಂದು ತಿಳಿಸುವಂತೆ ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್ಐಎ) ಬಾಂಬ್‌ ಹೈಕೋರ್ಟ್ ಸೋಮವಾರ ಸೂಚಿಸಿದೆ.

ವಿಚಾರಣೆಯನ್ನು ವಿಡಿಯೊ ರೆಕಾರ್ಡ್ ಮಾಡಬೇಕು ಹಾಗೂ ಆರು ತಿಂಗಳೊಳಗೆ ಪೂರ್ಣಗೊಳಿಸಲು ನಿರ್ದೇಶನ ನೀಡಬೇಕು ಎಂದು ಆರೋಪಿಗಳಲ್ಲಿ ಒಬ್ಬರಾದ ಸಮೀರ್ ಕುಲಕರ್ಣಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ರಂಜಿತ್ ಮೋರೆ ಮತ್ತು ಭಾರತಿ ಡಾಂಗ್ರೆ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.