ADVERTISEMENT

ಚುನಾವಣಾ ಪಯಣ | ರಾಜಸ್ಥಾನ: ‘ಸರ್ಕಾರ ಬದಲಾಗಬೇಕು. ಆದರೆ...’

ಜಯಸಿಂಹ ಆರ್.
Published 25 ನವೆಂಬರ್ 2023, 0:30 IST
Last Updated 25 ನವೆಂಬರ್ 2023, 0:30 IST
<div class="paragraphs"><p>ಬವಡಾ ಮಂಡಿಯ ಹೇಮಲತಾ ಪಾಂಚಾಲ್‌ ಮತ್ತು ದಿವ್ಯಾ ಪಾಂಚಾಲ್‌&nbsp; &nbsp;</p></div>

ಬವಡಾ ಮಂಡಿಯ ಹೇಮಲತಾ ಪಾಂಚಾಲ್‌ ಮತ್ತು ದಿವ್ಯಾ ಪಾಂಚಾಲ್‌   

   

–ಪ್ರಜಾವಾಣಿ ಚಿತ್ರ

ರಾಜಸ್ಥಾನದ ಈಶಾನ್ಯದ ಮೂಲೆಯಿಂದ ನೈರುತ್ಯದ ಮೂಲೆಯವರೆಗೆ ಒಂದು ಗೆರೆ ಎಳೆದಂತಿರುವ ಅರಾವಳಿ ಪರ್ವತ ಪ್ರದೇಶವು ರಾಜ್ಯವನ್ನು ಎರಡು ಭಾಗಗಳನ್ನಾಗಿ ಮಾಡುತ್ತದೆ. ಈ ಪರ್ವತಸಾಲಿನಿಂದ ಪೂರ್ವಕ್ಕಿರುವ ಪ್ರಾಂತಗಳು ಅಭಿವೃದ್ಧಿಯಲ್ಲಿ ಮುಂದಿದ್ದರೆ, ಪಶ್ಚಿಮಕ್ಕಿರುವ ಪ್ರಾಂತಗಳು ಹಿಂದುಳಿದಿವೆ. ಅಭಿವೃದ್ಧಿಯಲ್ಲಿ ಈ ವಿಭಜನೆ ಇದ್ದರೂ, ಪ್ರತಿ ಬಾರಿ ಸರ್ಕಾರ ಬದಲಾಗಬೇಕು ಎಂಬುದರಲ್ಲಿ ಎರಡೂ ಕಡೆಯ ಜನರದ್ದು ಒಂದೇ ದನಿ. ಆದರೆ, ಈ ಬಾರಿಯೂ ಸರ್ಕಾರ ಬದಲಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸುವಲ್ಲಿ ಎರಡೂ ಕಡೆಯ ಜನರ ಅಭಿಪ್ರಾಯ ಬೇರೆ–ಬೇರೆ

ADVERTISEMENT

ಜೈಪುರ: ರಾಜಸ್ಥಾನದಲ್ಲಿ ಪ್ರತಿ ಐದು ವರ್ಷಗಳಿಗೆ ಒಮ್ಮೆ ಸರ್ಕಾರ ಬದಲಾಗುತ್ತದೆ. ಒಮ್ಮೆ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ, ನಂತರದ ಅವಧಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಹೀಗೆ ಸರ್ಕಾರ ಬದಲಿಸುವ ಪರಂಪರೆಯನ್ನು 30 ವರ್ಷಗಳಿಂದ ರಾಜಸ್ಥಾನದ ಮತದಾರರು ರೂಢಿಸಿಕೊಂಡು ಬಂದಿದ್ದಾರೆ. ಮತದಾರರು ಹೀಗೆ ಸರ್ಕಾರವನ್ನು ಬದಲಿಸುವುದು ಏಕೆ? ಚುನಾವಣಾ ಪಯಣದ ಎದುರು ಇದ್ದ ಬಹಳ ಮುಖ್ಯ ಪ್ರಶ್ನೆ ಇದು. ಸರ್ಕಾರ ಬದಲಾಗುತ್ತಿದ್ದರೆ, ಎಲ್ಲಾ ರೀತಿಯ ಕೆಲಸಗಳು ನಿರಂತರವಾಗಿ ನಡೆಯುತ್ತಿರುತ್ತವೆ: ಜನರು ಥಟ್ಟನೆ ನೀಡುವ ಉತ್ತರವಿದು. 

‘10 ವರ್ಷಗಳ ಹಿಂದೆ ಕಾಂಗ್ರೆಸ್‌ ಶಾಸಕ ಇದ್ದರು. ನಂತರದ ಚುನಾವಣೆಯಲ್ಲಿ ಬಿಜೆಪಿ ಶಾಸಕನನ್ನು ನಮ್ಮ ಜನ ಗೆಲ್ಲಿಸಿದರು. ಅವರು ನಮ್ಮೂರಿಗೆ ಆಸ್ಪತ್ರೆ ಕಟ್ಟಿಸಿಕೊಟ್ಟರು. ತುಂಬಾ ಚೆನ್ನಾಗೇ ಕೆಲಸ ಮಾಡಿದ್ದಾರೆಂದು ಐದು ವರ್ಷದ ಹಿಂದೆ ಅವರನ್ನೇ ಮರುಆಯ್ಕೆ ಮಾಡಿದ್ದೆವು. ಆ ಮನುಷ್ಯ ಕೆಲಸ ಮಾಡುವುದನ್ನೇ ಬಿಟ್ಟ. ಈಗ ಆಸ್ಪತ್ರೆಗೆ ವೈದ್ಯರೇ ಇಲ್ಲ. ಈಗ ಮನವಿ ಕೊಡಲೂ ಅವರು ಸಿಗುತ್ತಿಲ್ಲ. ಊರಿಗೆ ಬಂದರೆ ಕಾರಿನಿಂದ ಇಳಿಯುವುದೇ ಇಲ್ಲ. ಹೀಗಾಗಬಾರದೆಂದೇ ಐದು ವರ್ಷಗಳಿಗೊಮ್ಮೆ ಶಾಸಕರನ್ನು ಬದಲಿಸುತ್ತೇವೆ’ ಎಂದು ದೃಢವಾಗಿ ಹೇಳಿದ್ದು ಉದಯಪುರ ಹೊರವಲಯದಲ್ಲಿರುವ ಬೇಕಡಿಯಾ ಗ್ರಾಮದ ಗೋವಿಂದ್‌. 

ಉದ್ಯಮಿಗಳಿರಲಿ, ಕೂಲಿ ಕಾರ್ಮಿಕರಿರಲಿ, ವ್ಯಾಪಾರಿಗಳಿರಲಿ, ಕಾಲೇಜು ವಿದ್ಯಾರ್ಥಿಗಳಿರಲಿ... ರಾಜಸ್ಥಾನದ ಎಲ್ಲಾ ಪ್ರಾಂತಗಳಲ್ಲೂ ಜನರು ಸರ್ಕಾರ ಬದಲಾಗುತ್ತಿರಬೇಕು ಎಂದೇ ಹೇಳುತ್ತಾರೆ ಮತ್ತು ಹೀಗೆ ಸರ್ಕಾರವನ್ನು ಬದಲಿಸುವ ತಮ್ಮ ಪರಂಪರೆ ಬಗ್ಗೆ ಹೆಮ್ಮೆ ವ್ಯಕ್ತಪಡಿಸುತ್ತಾರೆ. 

ಆದರೆ, ‘ಈ ಬಾರಿಯೂ ಸರ್ಕಾರ ಬದಲಾಗುತ್ತದೆಯೇ’ ಎಂಬ ಪ್ರಶ್ನೆಗೆ ಉತ್ತರ ಸುಲಭಕ್ಕೆ ಸಿಗುವುದಿಲ್ಲ.

ಈ ಪ್ರಶ್ನೆ ಮುಂದಿಟ್ಟಾಗ ಜೈಪುರದ ರವಿಕಾಂತ್ ಶರ್ಮಾ, ‘2018ರಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದೇ ಬರುತ್ತದೆ ಎಂದು ಹೇಳಬಹುದಿತ್ತು. ಆದರೆ ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದೇ ಬರುತ್ತದೆ ಎಂದು ಹೇಳುವುದು ಕಷ್ಟ. ಒಳಜಗಳ, ಸರ್ಕಾರಿ ನೇಮಕಾತಿ ಪ್ರಶ್ನೆಪತ್ರಿಕೆಗಳ ಸೋರಿಕೆ ಮತ್ತು ಮುಸ್ಲಿಮರ ಓಲೈಕೆ ಈ ಸರ್ಕಾರದ ಎದುರು ಇರುವ ಅತ್ಯಂತ ದೊಡ್ಡ ಸವಾಲುಗಳು. ಆದರೆ, ಈ ಸರ್ಕಾರದ ಉಚಿತ ಕೊಡುಗೆಗಳು ಜನರಿಗೆ ತಲುಪಿವೆ. ಹೀಗಾಗಿ ಸರ್ಕಾರ ಬದಲಿಸುವ ಪರಂಪರೆ ಮುಂದುವರಿಯುವ ಸಾಧ್ಯತೆ 50:50 ಎಂದು ಹೇಳಬಹುದು’ ಎಂದರು.

‘ವಸುಂಧರಾ ರಾಜೇ ಬಡಜನರಿಗಾಗಿ ಕೆಲಸ ಮಾಡಿರಲಿಲ್ಲ. ಹೀಗಾಗಿ ಕಾಂಗ್ರೆಸ್‌ ಬರುತ್ತದೆ ಎಂದು ಆಗ ಹೇಳಬಹುದಿತ್ತು. ಆದರೆ ಈ ಬಾರಿ ಕಾಂಗ್ರೆಸ್‌ ಸರ್ಕಾರ ಕೆಲಸ ಮಾಡಿದೆ. ಬಿಜೆಪಿ ಸರ್ಕಾರದಲ್ಲಿ ₹5 ಲಕ್ಷ ಆರೋಗ್ಯ ವಿಮೆ ಇತ್ತು, ಅದು ಯಾರಿಗೂ ಸಿಗುತ್ತಿರಲಿಲ್ಲ. ಆಶೋಕ್‌ ಜೀ ಅವರ ಸರ್ಕಾರ ₹25 ಲಕ್ಷ ಆರೋಗ್ಯ ವಿಮೆ ನೀಡಿದೆ. ನನ್ನ ಗೆಳೆಯನ ಅಮ್ಮನಿಗೇ ಆ ವಿಮೆಯಿಂದ ಕ್ಯಾನ್ಸರ್‌ಗೆ ಉಚಿತ ಚಿಕಿತ್ಸೆ ಸಿಗುತ್ತಿದೆ. ಅವನು ಬಿಜೆಪಿಗೇ ಮತ ಹಾಕುತ್ತಿದ್ದ, ಈ ಬಾರಿ ಕಾಂಗ್ರೆಸ್‌ಗೆ ಹಾಕುತ್ತಾನೆ. ನಾನು ಬಿಜೆಪಿಗೇ ಹಾಕುತ್ತೇನೆ. ಬಿಜೆಪಿ ಸರ್ಕಾರವೂ ಬರಬಹುದು, ಕಾಂಗ್ರೆಸ್‌ ಸರ್ಕಾರವೂ ಬರಬಹುದು. ಆದರೆ ಈ ಬಾರಿ ಬಿಜೆಪಿ ಬರಬೇಕು’ ಎಂಬುದು ಚಿತ್ತೋರಗಡದ ದೀಪಕ್‌ ಕುಮಾರ್‌ ಕರ್ಣಿಯ ವಿವರಣೆ.

‘ನೋಡಿ ಮೊದಲೇ ಹೇಳಿಬಿಡುತ್ತೇನೆ, ನಾನು ಕಾಂಗ್ರೆಸ್‌ ಅಭಿಮಾನಿ. ಹಾಗೆಂದು ಈ ಬಾರಿ ಕಾಂಗ್ರೆಸ್‌ ಸರ್ಕಾರವೇ ಬರುತ್ತದೆ ಎಂದು ಹೇಳಿದರೆ ಅದು ನನಗೆ ನಾನು ಮಾಡಿಕೊಳ್ಳುವ ಮೋಸ. ಜನ ಶಾಸಕರನ್ನು ಬದಲಿಸಿಯೇ ಬದಲಿಸುತ್ತಾರೆ. ಹೀಗಾಗಿ ಬಿಜೆಪಿ ಸರ್ಕಾರ ಬರುವ ಸಾಧ್ಯತೆಯೇ ಹೆಚ್ಚು. ಕಾಂಗ್ರೆಸ್‌ ಮರಳಿ ಅಧಿಕಾರ ಹಿಡಿಯುವ ಸಾಧ್ಯತೆ ಕಡಿಮೆ. ಆದರೆ ಇಲ್ಲವೇ ಇಲ್ಲ ಎಂದು ಹೇಳಲಾಗುವುದಿಲ್ಲ’ ಎಂದು ಉತ್ತರಿಸಿದ್ದು ಉದಯಪುರದ ಹೋಟೆಲ್‌ ಉದ್ಯಮಿ ಪ್ರತೀಕ್‌ ಜೈನ್‌. 

ಅರಾವಳಿ ಬೆಟ್ಟಸಾಲಿನ ಪೂರ್ವಕ್ಕಿರುವ ಹಡೋತಿ, ಧೂಂದರ್, ಅಜ್ಮೀರ್, ಮೆವಾಡ ಪ್ರಾಂತಗಳು ಬಿಜೆಪಿಯ ಭದ್ರಕೋಟೆ. 2018ರಲ್ಲಿ ಕಾಂಗ್ರೆಸ್‌ ಇಲ್ಲಿ ಹೆಚ್ಚಿನ ಸ್ಥಾನ ಗೆದ್ದಕಾರಣ ಅಧಿಕಾರ ಹಿಡಿದಿತ್ತು. ಇಲ್ಲಿನ ಜನರು ಸರ್ಕಾರ ಬದಲಾಗಬೇಕು ಎಂದು ಬಯಸುತ್ತಾರಾದರೂ, ಬದಲಾಗದೇ ಇರುವ ಸಾಧ್ಯತೆಯೂ ಇದೆ ಎನ್ನುತ್ತಾರೆ. ಬೆಟ್ಟಸಾಲಿನ ಪಶ್ಚಿಮಕ್ಕಿರುವ ಮಾರ್ವಾಡ, ಶೆಖಾವತಿ, ಗಾಡ್ವಾಡ್‌ ಪ್ರಾಂತಗಳು ಯಾವ ಪಕ್ಷದ ಭದ್ರಕೋಟೆಯೂ ಅಲ್ಲ. ಇಲ್ಲಿನ ಶಾಸಕರು ಬದಲಾಗುತ್ತಲೇ ಇರುತ್ತಾರೆ. ಈ ಭಾಗದ ಜನರು ಕಾಂಗ್ರೆಸ್‌ ಅಧಿಕಾರಕ್ಕೆ ಬಂದೇ ಬರುತ್ತದೆ ಎಂದು ಹೇಳುವುದಿಲ್ಲವಾದರೂ, ಕಾಂಗ್ರೆಸ್‌ ಬರಬೇಕು ಎಂದೇ ಹೇಳುತ್ತಾರೆ. ಸರ್ಕಾರ ಏಕೆ ಬರಬೇಕು ಎಂಬುದಕ್ಕೂ ಈ ಜನರು ಹಲವಾರು ಕಾರಣಗಳನ್ನು ಮುಂದಿಡುತ್ತಾರೆ.

‘ನನ್ನ ಗಂಡ ಕುಡುಕ. ಈಗ ದುಡಿಯುತ್ತಿಲ್ಲ. ನಾನು ಅಪ್ಪನ ಮನೆಗೆ ಬಂದಿದ್ದೇನೆ. ಉಚಿತ ರೇಷನ್‌, ಪಿಂಚಣಿ ಬರುತ್ತಿರುವ ಕಾರಣಕ್ಕೆ ಜೀವನ ನಡೆಯುತ್ತಿದೆ. ಈ ಸರ್ಕಾರವೇ ಇದ್ದರೆ ಚೆನ್ನಾಗಿರುತ್ತದೆ ಅಲ್ಲವೇ’ ಎಂಬುದು ಬವಾಡಾ ಮಂಡಿಯ ಹೇಮಲತಾ ಪಾಂಚಾಲ್ ಅವರ ವಿವರಣೆ. ಅವರ ಪಕ್ಕವೇ ನಿಂತಿದ್ದ ಮಗಳು ದಿವ್ಯಾ ಪಾಂಚಾಲ್‌, ‘ನಾನು ಮೊದಲು ಖಾಸಗಿ ಇಂಗ್ಲಿಷ್‌ ಶಾಲೆಗೆ ಹೋಗುತ್ತಿದ್ದೆ. ಅಪ್ಪ ದುಡಿಯುತ್ತಿಲ್ಲ ಎಂದು ಸರ್ಕಾರಿ ಶಾಲೆಗೆ ಹಾಕಿದರು. ಅಲ್ಲಿ ಹಿಂದಿ ಮಾಧ್ಯಮ ಇತ್ತು. ಈಗ ಎರಡು ವರ್ಷದಿಂದ ನಮ್ಮ ಶಾಲೆಯಲ್ಲೂ ಇಂಗ್ಲಿಷ್‌ನಲ್ಲಿ ಪಾಠ ಮಾಡುತ್ತಿದ್ದಾರೆ. ಇದು ಒಳ್ಳೆ ಸರ್ಕಾರ’ ಎಂದಳು.

ಸರ್ಕಾರಿ ನೇಮಕಾತಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಮತ್ತು ಇದರಿಂದ ಯುವಕರಿಗೆ ಉದ್ಯೋಗಾವಕಾಶ ಕಡಿಮೆಯಾಯಿತು ಎಂಬುದನ್ನು ಈ ಭಾಗದ ಜನ ಒಪ್ಪಿಕೊಳ್ಳುತ್ತಾರೆ. ಆದರೂ, ಈ ಸರ್ಕಾರದ ಅವಧಿಯಲ್ಲಿ ಹಲವರಿಗೆ ಉದ್ಯೋಗ ಸಿಕ್ಕಿದೆ. ಜೀವನ ನಡೆಸಲು ಅನುಕೂಲಗಳೂ ಸಿಕ್ಕಿದೆ. ಈ ಕಾರಣಕ್ಕೆ ಕಾಂಗ್ರೆಸ್‌ ಸರ್ಕಾರ ಬರಬೇಕು ಎನ್ನುತ್ತಾರೆ.

ಮೋಗ್ಡಾದ ಹನುಮಾನ್‌ ಘಾರ್ಸಿ, ‘ಐದು ವರ್ಷದಲ್ಲಿ ನನ್ನ ನಾಲ್ವರು ಗೆಳೆಯರಿಗೆ ಸರ್ಕಾರಿ ಕೆಲಸ ಸಿಕ್ಕಿದೆ. ಅವರೆಲ್ಲಾ ಕಾಂಗ್ರೆಸ್‌ಗೇ ಮತ ಹಾಕುತ್ತಾರೆ. ನಾನು ಡಿಪ್ಲೊಮಾ ಮಾಡಿದ್ದು, ಸ್ವಂತ ಗ್ಯಾರೇಜ್‌ ನಡೆಸುತ್ತಿದ್ದೇನೆ. ನಮಗೇನೂ ತೊಂದರೆಯಾಗಿಲ್ಲ. ಇದೇ ಸರ್ಕಾರ ಮತ್ತೊಮ್ಮೆ ಬರಲಿ’ ಎಂದರು. ಜೈಸಲ್ಮೇರ್, ಬಿಕಾನೇರ್‌, ಸಿರ್ಕಾ, ನಾಗೌರ್‌ನಲ್ಲೂ ಜನರು ಇಂಥದ್ದೇ ಅನುಕೂಲಗಳ ಪಟ್ಟಿ ನೀಡುತ್ತಾರೆ. ಈ ಸರ್ಕಾರವೇ ಬರಲಿ ಎನ್ನುತ್ತಾರೆ.

ಆದರೆ, ಅರಾವಳಿ ಬೆಟ್ಟಸಾಲಿನುದ್ದಕ್ಕೂ ಇರುವ ಪರಿಶಿಷ್ಟ ಪಂಗಡಗಳ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ಭಾರತೀಯ ಆದಿವಾಸಿ ಪಕ್ಷವು ದೊಡ್ಡಮಟ್ಟದಲ್ಲಿ ಪ್ರಚಾರ ನಡೆಸುತ್ತಿದೆ. ಪ್ರತಿ ಹಳ್ಳಿಗೂ ಹೋಗಿ ಬ್ಯಾನರ್ ಕಟ್ಟಿದೆ. ನಿಮಗಾಗಿ ದುಡಿಯುತ್ತೇವೆ ನಮಗೆ ಮತ ನೀಡಿ ಎಂದು ಕೇಳುತ್ತಿದೆ. ಇನ್ನೊಂದೆಡೆ ಜಾಟರ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ಆರ್‌ಎಲ್‌ಪಿ ಸಹ ಇದೇ ರೀತಿ ಪ್ರಚಾರ ಮಾಡುತ್ತಿದೆ. ಹಳ್ಳಿಗಳ ಪ್ರತಿ ಮತದಾರನನ್ನೂ ಭೇಟಿ ಮಾಡಿ ಮತ ಕೇಳುತ್ತಿದೆ. ಈ ಎರಡೂ ಪಕ್ಷಗಳು ಅಧಿಕಾರಕ್ಕೆ ಬರುತ್ತವೆ ಎಂದು ಹೇಳಲಾಗದು. ಆದರೆ, ಕಾಂಗ್ರೆಸ್‌ ಮತ್ತು ಬಿಜೆಪಿಯ ಮತಗಳನ್ನು ಸೆಳೆಯುತ್ತವೆ. ಪ್ರತಿ ಬಾರಿ ಸರ್ಕಾರ ಬದಲಿಸುವ ಪರಂಪರೆ ಮುಂದುವರಿಯುವದರಲ್ಲಿ ಅಥವಾ ಪರಂಪರೆ ಮುರಿಯುವುದರಲ್ಲಿ ಇದು ಸಣ್ಣ ಪಾತ್ರವಹಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.