ADVERTISEMENT

ಕಾಂಗ್ರೆಸ್ ಸಂಸದರ ಅಮಾನತು ಸರಿಯಾದ ನಿರ್ಧಾರ, ಬೆಲೆ ಏರಿಕೆ ಚರ್ಚೆಗೆ ಸಿದ್ಧ: ಜೋಶಿ

ಪಿಟಿಐ
Published 25 ಜುಲೈ 2022, 17:22 IST
Last Updated 25 ಜುಲೈ 2022, 17:22 IST
ಪ್ರಲ್ಹಾದ ಜೋಶಿ
ಪ್ರಲ್ಹಾದ ಜೋಶಿ   

ನವದೆಹಲಿ: ಲೋಕಸಭೆ ಕಲಾಪಕ್ಕೆ ಅಡ್ಡಿಪಡಿಸಿದ ನಾಲ್ವರು ಕಾಂಗ್ರೆಸ್ ಸಂಸದರನ್ನು ಮುಂಗಾರು ಅಧಿವೇಶನದ ಉಳಿದ ಅವಧಿಗೆ ಅಮಾನತು ಮಾಡಿರುವ ನಿರ್ಧಾರವನ್ನು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಸಮರ್ಥಿಸಿಕೊಂಡಿದ್ದಾರೆ.

ಸರ್ಕಾರವು ಬೆಲೆ ಏರಿಕೆ ಬಗ್ಗೆ ಚರ್ಚೆಗೆ ಖಂಡಿತಾ ಸಿದ್ಧವಿದೆ. ಆದರೆ, ಸಂಸದರು ಸ್ಪೀಕರ್ ಅವರ ಪೀಠಕ್ಕೆ ಗೌರವ ನೀಡದಿರುವುದು ಮತ್ತು ನಿಯಮಗಳನ್ನು ಉಲ್ಲಂಘಿಸಿ ಗದ್ದಲ ಸೃಷ್ಟಿಸಿರುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್ ಸಂಸದರ ಅಮಾನತಿಗೆ ಸಂಬಂಧಿಸಿ ವರದಿಗಾರರ ಬಳಿ ಪ್ರತಿಕ್ರಿಯೆ ನೀಡಿದ ಜೋಶಿ, ‘ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೋವಿಡ್‌ನಿಂದ ಚೇತರಿಸಿಕೊಂಡ ಕೂಡಲೇ ಬೆಲೆ ಏರಿಕೆ ಬಗ್ಗೆ ಚರ್ಚಿಸಲು ಸರ್ಕಾರ ಸಿದ್ಧವಿದೆ ಎಂದು ತಿಳಿಸಲಾಗಿತ್ತು’ ಎಂದರು.

ADVERTISEMENT

ಅಮಾನತುಗೊಂಡ ಸಂಸದರ ನಡವಳಿಕೆ ಖಂಡಿತವಾಗಿಯೂ ಸ್ವೀಕಾರಾರ್ಹವಲ್ಲ. ಸ್ಪೀಕರ್ ಅವರ ಪೀಠದ ಎದುರು ಕರಪತ್ರಗಳನ್ನು ಪ್ರದರ್ಶಿಸುವುದು ಪ್ರತಿಭಟಿಸುವ ವಿಧಾನವಲ್ಲ ಎಂದು ಅವರು ಹೇಳಿದರು.

‘ಸ್ಪೀಕರ್ ಅವರು ಮತ್ತೆ ಮತ್ತೆ ಎಚ್ಚರಿಕೆ ನೀಡಿದ ಮೇಲೂ ಅವರು (ಕಾಂಗ್ರೆಸ್ ಸಂಸದರು) ಪ್ರತಿಭಟನೆ ಮುಂದುವರಿಸಿದರು’ ಎಂದರು.

ಬೆಲೆ ಏರಿಕೆ ಬಗ್ಗೆ ಚರ್ಚಿಸುವುದಾಗಿ ವೈಯಕ್ತಿಕವಾಗಿಯೂ ಕಾಂಗ್ರೆಸ್ ನಾಯಕರ ಬಳಿ ಹೇಳಿದ್ದೆ. ಆದರೆ ಕಾಂಗ್ರೆಸ್ ಸಂಸದರ ನಡವಳಿಕೆಯು ಅವರಿಗೆ ಸ್ಪೀಕರ್ ಪೀಠದ ಮೇಲೆ ಗೌರವ ಇಲ್ಲದಿರುವುದನ್ನು ತೋರಿಸಿಕೊಟ್ಟಿದೆ. ಅವರ ವಿರುದ್ಧ ಕೈಗೊಂಡ ಕ್ರಮ ಸರಿಯಾಗಿಯೇ ಇದೆ ಎಂದು ಜೋಶಿ ಹೇಳಿದರು.

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರ ಎಚ್ಚರಿಕೆಯ ಹೊರತಾಗಿಯೂ ಕರಪತ್ರಗಳನ್ನು ಪ್ರದರ್ಶಿಸಿದ, ಕಲಾಪಕ್ಕೆ ಅಡ್ಡಿಪಡಿಸಿದ ಕಾಂಗ್ರೆಸ್ ಶಾಸಕರಾದ ಮಾಣಿಕ್ಕಂ ಟಾಗೋರ್, ಟಿ.ಎನ್. ಪ್ರತಾಪನ್, ಜ್ಯೋತಿಮಣಿ ಹಾಗೂ ರಮ್ಯಾ ಹರಿದಾಸ್ ಅವರನ್ನು ಅಮಾನತು ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.