ಅಮರಾವತಿ: ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಅವರು ಶನಿವಾರ ಇಲ್ಲಿ ಟಿಡಿಪಿ ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು ಅವರನ್ನು ಭೇಟಿಯಾದರು. ಈ ಭೇಟಿ ಹಿಂದಿನ ಕಾರ್ಯಸೂಚಿ ಸ್ಪಷ್ಟವಾಗಿಲ್ಲವಾದರೂ ಇದು ಆಂಧ್ರ ಪ್ರದೇಶದ ರಾಜಕೀಯದಲ್ಲಿ ಕುತೂಹಲ ಮೂಡಿಸಿದೆ.
ಕಿಶೋರ್ ಅವರು ಟಿಡಿಪಿ ಪ್ರಧಾನ ಕಾರ್ಯದರ್ಶಿ ಲೋಕೇಶ್ ಮತ್ತು ಇನ್ನೂ ಮೂವರ ಜತೆಗೆ ಖಾಸಗಿ ಜೆಟ್‌ನಲ್ಲಿ ಮಧ್ಯಾಹ್ನ 3 ಗಂಟೆ ಸುಮಾರಿಗೆ ವಿಜಯವಾಡ ಬಳಿಯ ಗನ್ನವರಂ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಲೋಕೇಶ್ ಮತ್ತು ಕಿಶೋರ್ ಅವರು ವಿಮಾನ ನಿಲ್ದಾಣದಿಂದ ಆಗಮಿಸಿ ಕಪ್ಪು ಬಣ್ಣದ ಎಸ್‌ಯುವಿ ಕಾರು ಹತ್ತಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
ಇದೇ ವೇಳೆ ಅವರು ಆಂಧ್ರಪ್ರದೇಶದ ವಿರೋಧ ಪಕ್ಷದ ನಾಯಕ ಚಂದ್ರಬಾಬು ನಾಯ್ಡು ಅವರನ್ನು ಅವರ ನಿವಾಸದಲ್ಲಿ ಪ್ರಶಾಂತ್ ಕಿಶೋರ್ ಭೇಟಿಯಾದರು ಎಂದು ಮೂಲವೊಂದು ಖಚಿತಪಡಿಸಿದೆ.
ಇದರ ಬೆನ್ನಲ್ಲೇ ಆಂಧ್ರಪ್ರದೇಶದ ನೀರಾವರಿ ಸಚಿವ ಎ. ರಾಮಬಾಬು ಅವರು ನಾಯ್ಡು, ಲೋಕೇಶ್ ಮತ್ತು ಕಿಶೋರ್ ಅವರ ನಡುವಿನ ರಾಜಕೀಯ ಕೂಟವನ್ನು ಲೇವಡಿ ಮಾಡಿದ್ದಾರೆ.
ಟಿಡಿಪಿಯ ರಾಜಕೀಯ ವ್ಯವಹಾರಗಳನ್ನು ಉಲ್ಲೇಖಿಸಿ ರಾಮಬಾಬು ಅವರು ‘ಕಟ್ಟಡದ ಸಾಮಗ್ರಿಗಳೇ ದೋಷಪೂರಿತವಾಗಿರುವಾಗ ಇನ್ನು ಯಾವ ರೀತಿಯ ಕಟ್ಟಡ ನಿರ್ಮಾಣವಾಗಬಹುದು?’ ಎಂದು ಟೀಕಿಸಿ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
2019ರ ವಿಧಾನಸಭೆ ಚುನಾವಣೆ ಮತ್ತು ಲೋಕಸಭೆ ಚುನಾವಣೆ ಪೂರ್ವದಲ್ಲಿ ವೈಎಸ್‌ಆರ್‌ಸಿಪಿ ಮುಖಸ್ಥ ವೈ.ಎಸ್. ಜಗನ್ ಮೋಹನರೆಡ್ಡಿ ಅವರು ಪ್ರಶಾಂತ್ ಕೀಶೋರ್ ಅವರ ನೆರವು ಪಡೆದಿದ್ದರು. ಅಂತಿಮವಾಗಿ ಆ ಚುನಾವಣೆಯಲ್ಲಿ ಅವರ ಪಕ್ಷ ಗೆಲುವು ಸಾಧಿಸಿತ್ತು. ರೆಡ್ಡಿ ಅವರ ಜತೆಗೆ ಕಿಶೋರ್ ಕೈಜೊಡಿಸಿದ್ದಕ್ಕೆ ಟಿಡಿಪಿ ನಾಯಕರು ಟೀಕಾಪ್ರಹಾರ ನಡೆಸಿದ್ದರು. ಆದರೆ, ಈಗ ಈ ಭೇಟಿಯು ಆಂಧ್ರ ರಾಜಕಾರಣದಲ್ಲಿ ಮತ್ತೊಂದು ತಿರುವು ಪಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.