ADVERTISEMENT

ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸುವಂತೆ ಕೇಳಿಕೊಂಡಿದ್ದ ನಿತೀಶ್‌: ರಾಬ್ರಿ ದೇವಿ 

ಏಜೆನ್ಸೀಸ್
Published 13 ಏಪ್ರಿಲ್ 2019, 6:46 IST
Last Updated 13 ಏಪ್ರಿಲ್ 2019, 6:46 IST
   

ಪಟ್ನಾ: ಬಿಹಾರದಲ್ಲಿ ಆರ್‌ಜೆಡಿಯೊಂದಿಗಿನ ಮೈತ್ರಿ ಮುರಿದುಕೊಂಡ ನಂತರದ ಕೆಲವೇ ತಿಂಗಳುಗಳಲ್ಲಿ ಮರಳಿ ಮೈತ್ರಿ ಸಾಧಿಸಲುನಿತೀಶ್‌ ಕುಮಾರ್‌ ಅವರುಪ್ರಶಾಂತ್‌ ಕಿಶೋರ್‌ ಮೂಲಕ ಪ್ರಯತ್ನಿಸಿದ್ದರು ಎಂಬ ಲಾಲು ಪ್ರಸಾದ್‌ ಯಾದವ್‌ ಅವರ ಆತ್ಮಚರಿತ್ರೆಯಲ್ಲಿನ ಸಂಗತಿ ಬಿಹಾರ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಭಾರಿ ಸದ್ದು ಮಾಡುತ್ತಿರುವ ನಡುವೆಯೇ, ಲಾಲು ಪತ್ನಿ ರಾಬ್ಡಿ ದೇವಿ ಮತ್ತೊಂದು ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ. ‘ನನ್ನನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡುವಂತೆ ನಿತೀಶ್‌ ಕುಮಾರ್‌ ಕೇಳಿಕೊಂಡಿದ್ದರು,’ ಎಂದು ಹೇಳಿದ್ದಾರೆ.

ಲಾಲು ಆತ್ಮಚರಿತ್ರೆಯಲ್ಲಿನ ಈ ಸಂಗತಿ ಬಿಹಾರದಲ್ಲಿ ಕೋಲಾಹಲಕ್ಕೆ ಕಾರಣವಾಗಿದೆ. ಆದರೆ, ಜೆಡಿಯುನ ರಾಷ್ಟ್ರೀಯ ಉಪಾಧ್ಯಕ್ಷ, ಚುನಾವಣಾ ತಂತ್ರಗಾರ ಪ್ರಶಾಂತ್‌ ಕಿಶೋರ್‌ ಈ ಆರೋಪ ನಿರಾಕರಿಸಿದ್ದಾರೆ. ಇದೇ ಹಿನ್ನೆಲೆಯಲ್ಲಿ ರಾಬ್ಡಿ ದೇವಿ ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ‘ಲಾಲು ಯಾದವ್‌ ಅವರೊಂದಿಗಿನ ಭೇಟಿ, ಮಾತುಕತೆಯನ್ನು ಪ್ರಶಾಂತ್‌ ಕಿಶೋರ್‌ ನಿರಾಕರಿಸುವುದೇ ಆದರೆ ಅವರು 'ಹಸಿ ಸುಳ್ಳು’ ನುಡಿಯುತ್ತಿದ್ದಾರೆ,’ ಎಂದರ್ಥ ಎಂದಿದ್ದಾರೆ.

‘ನಿತೀಶ್‌ ಮತ್ತೊಮ್ಮೆ ನಮ್ಮ ಬಳಿ ಮೈತ್ರಿ ಬಯಸಿದ್ದರು. ತೇಜಸ್ವಿ ಯಾದವ್‌ನನ್ನು 2020ಕ್ಕೆ ಮುಖ್ಯಮಂತ್ರಿ ಮಾಡೋಣ. ನನ್ನನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆ ಮಾಡಿ ಎಂದು ಪ್ರಶಾಂತ್‌ ಕಿಶೋರ್‌ ಮೂಲಕ ಮನವಿ ಮಾಡಿಕೊಂಡಿದ್ದರು. ಆದರೆ, ಕಿಶೋರ್‌ ಮೈತ್ರಿ ಮಾತುಕತೆಗೆ ಬಂದಾಗ ನನಗೆ ಕೋಪ ಬಂತು. ನಿತೀಶ್‌ ಕುಮಾರ್‌ ಅವರ ಮೇಲೆ ನಮಗೆ ಯಾವುದೇ ವಿಶ್ವಾಸ ಉಳಿದಿಲ್ಲ. ನಮ್ಮಿಂದ ದೂರ ಇರಿ ಎಂದು ಕಿಶೋರ್‌ಗೆ ತಿಳಿಸಿದೆ,‘ ಎಂದು ಅವರು ಹೇಳಿಕೊಂಡಿದ್ದಾರೆ.

ADVERTISEMENT

2015ರ ನವೆಂಬರ್‌ನಲ್ಲಿ ನಡೆದ ಬಿಹಾರ ವಿಧಾನಸಭೆ ಚುನಾವಣೆಗೆ ಜೆಡಿಯು, ಆರ್‌ಜೆಡಿ ಮತ್ತು ಕಾಂಗ್ರೆಸ್‌ ಮಹಾಘಟಬಂಧನ ರಚಿಸಿಕೊಂಡಿದ್ದವು. ಚುನಾವಣೆಯಲ್ಲಿ ಮೈತ್ರಿಕೂಟಕ್ಕೆ ಗೆಲುವಾಗಿ ನಿತೀಶ್‌ ಮುಖ್ಯಮಂತ್ರಿಯಾಗಿದ್ದರು. ಆರ್‌ಜೆಡಿಯ ತೇಜಸ್ವಿ ಯಾದವ್‌ ಉಪ ಮುಖ್ಯಮಂತ್ರಿಯಾಗಿದ್ದರು. 2017 ಜುಲೈನಲ್ಲಿ ನಿತೀಶ್‌ ಮೈತ್ರಿ ಮುರಿದುಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.