ನವದೆಹಲಿ: ಚುನಾವಣಾ ಕಾರ್ಯತಂತ್ರ ನಿಪುಣ ಪ್ರಶಾಂತ್ ಕಿಶೋರ್ ಅವರು ಕಾಂಗ್ರೆಸ್ ಪಕ್ಷವನ್ನು ಸೇರುವ ಮತ್ತೊಂದು ಯತ್ನ ವಿಫಲವಾಗಿದೆ. ಪಕ್ಷವನ್ನು ಸೇರುವಂತೆ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ನೀಡಿದ್ದ ಆಹ್ವಾನವನ್ನು ಪ್ರಶಾಂತ್ ಕಿಶೋರ್ ತಿರಸ್ಕರಿಸಿದ್ದಾರೆ ಎಂದು ಪಕ್ಷ ಮಂಗಳವಾರ ಪ್ರಕಟಿಸಿದೆ.
ಕಿಶೋರ್ ಸೇರ್ಪಡೆ ಕುರಿತಂತೆ ಸೋನಿಯಾ ನಿವಾಸದಲ್ಲಿ ಹಲವು ದಿನಗಳಿಂದ ನಡೆಯುತ್ತಿದ್ದ ಸುದೀರ್ಘ ಮಾತುಕತೆಗೆ ಈ ಪ್ರಕಟಣೆ ಮೂಲಕ ತೆರೆಬಿದ್ದಿದೆ. ಪ್ರಶಾಂತ್ ಅವರು ಪಕ್ಷದೊಳಗಿದ್ದುಕೊಂಡು ಕೆಲಸ ಮಾಡಬೇಕೇ ಅಥವಾ ಅವರು ಹೊರಗಡೆಯಿಂದ ಸಲಹೆಗಾರರಾಗಿ ಕೆಲಸ ಮಾಡಬೇಕೇ ಎಂಬುದರ ಬಗ್ಗೆ ಕಾಂಗ್ರೆಸ್‌ನ ಹಿರಿಯ ಮುಖಂಡರು ಸಾಕಷ್ಟು ಚರ್ಚೆ ನಡೆಸಿದರು.
ಪ್ರಶಾಂತ್ ಮುಂದಿಟ್ಟಿದ್ದ ಸಲಹೆಗಳು ಹಾಗೂ ಪಕ್ಷದಲ್ಲಿ ಅವರು ನಿರ್ವಹಿಸಲಿರುವ ಪಾತ್ರದ ಬಗ್ಗೆ ವಿಸ್ತೃತ ಚರ್ಚೆ ನಡೆದಿತ್ತು. ಈ ಬಳಿಕ ಅವರಿಗೆ ಆಹ್ವಾನ ನೀಡಲಾಗಿತ್ತು.ಪ್ರಶಾಂತ್ ಸೇರ್ಪಡೆ ಬಗ್ಗೆ ಪಕ್ಷದೊಳಗೆ ಭಿನ್ನ ಅಭಿಪ್ರಾಯಗಳೂ ವ್ಯಕ್ತವಾಗಿದ್ದವು.
ಟ್ವೀಟ್ ಮಾಡಿರುವ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ, ‘ಪ್ರಶಾಂತ್ ಕಿಶೋರ್ ಅವರ ಜತೆಗಿನ ಚರ್ಚೆಯ ಬಳಿಕ ಕಾಂಗ್ರೆಸ್ ಅಧ್ಯಕ್ಷರು ‘ಉನ್ನತಾಧಿಕಾರ ಕಾರ್ಯಪಡೆ 2024 ಅನ್ನು ರಚಿಸಿದ್ದರು. ಅದರ ಭಾಗವಾಗಿ ಇರುವಂತೆ ಕಿಶೋರ್ ಅವರನ್ನು ಕೇಳಿಕೊಳ್ಳಲಾಗಿತ್ತು. ಆದರೆ ಅದನ್ನು ಅವರು ಒಪ್ಪಲಿಲ್ಲ. ಪಕ್ಷಕ್ಕೆ ಅವರು ನೀಡಿದ ಸಲಹೆ ಹಾಗೂ ಪ್ರಯತ್ನಗಳನ್ನು ಪಕ್ಷ ಶ್ಲಾಘಿಸುತ್ತದೆ’ ಎಂದು ಉಲ್ಲೇಖಿಸಿದ್ದಾರೆ.
‘ಉನ್ನತಾಧಿಕಾರ ಕಾರ್ಯಪಡೆಯ ಭಾಗವಾಗಿ ಪಕ್ಷವನ್ನು ಸೇರುವಂತೆ ಹಾಗೂ ಚುನಾವಣೆಯ ಜವಾಬ್ದಾರಿ ವಹಿಸಿಕೊಳ್ಳುವಂತೆ ಕಾಂಗ್ರೆಸ್ ನೀಡಿದ್ದ ಆಹ್ವಾನವನ್ನು ತಿರಸ್ಕರಿಸಿದ್ದೇನೆ.ಪಕ್ಷದ ಮೂಲ ಸಂಘಟನಾತ್ಮಕ ಸಮಸ್ಯೆಗಳಿಗೆ ಪರಿಹಾರ ಸಿಗಬೇಕಾದರೆ, ಪಕ್ಷಕ್ಕೆ ನಾಯಕತ್ವ ಹಾಗೂ ಸಾಮೂಹಿಕ ಇಚ್ಚಾಶಕ್ತಿ ಅಗತ್ಯ’ ಎಂದು ಪ್ರಶಾಂತ್ ಅಭಿಪ್ರಾಯಪಟ್ಟಿದ್ದಾರೆ.
ಪಕ್ಷ ಸೇರುವ ಕಿಶೋರ್ ಅವರ ಯತ್ನಕಳೆದ ಜುಲೈನಲ್ಲಿ ಸಫಲವಾಗಿರಲಿಲ್ಲ. ಚುನಾವಣಾ ಉಸ್ತುವಾರಿಯ ಜೊತೆಗೆ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಇಟ್ಟಿದ್ದ ಬೇಡಿಕೆಯನ್ನು ಪಕ್ಷ ತಿರಸ್ಕರಿಸಿತ್ತು.
ಜಾಖಡ್, ಥಾಮಸ್ ವಿರುದ್ಧ ಕ್ರಮ?
ಪಂಜಾಬ್ ಕಾಂಗ್ರೆಸ್ ಘಟಕದ ಮಾಜಿ ಅಧ್ಯಕ್ಷ ಸುನಿಲ್ ಜಾಖಡ್ ಅವರನ್ನು ಪಕ್ಷದಿಂದಎರಡು ವರ್ಷ ಅಮಾನತು ಮಾಡಲುಕಾಂಗ್ರೆಸ್‌ನ ಶಿಸ್ತು ಸಮಿತಿಯು ಮಂಗಳವಾರ ಶಿಫಾರಸು ಮಾಡಿದೆ. ಹಾಗೆಯೇ, ಕೇರಳದ ಮುಖಂಡ ಕೆ.ವಿ. ಥಾಮಸ್ ಅವರನ್ನು ಪಕ್ಷದ ಎಲ್ಲ ಹುದ್ದೆಗಳಿಂದ ವಜಾ ಮಾಡಲು ಹಾಗೂ ಮೇಘಾಲಯದ ಐವರು ಶಾಸಕರನ್ನು ಪಕ್ಷದಿಂದ ಅಮಾನತು ಮಾಡಲು ಶಿಫಾರಸು ಮಾಡಲಾಗಿದೆ.
ಎ.ಕೆ. ಆ್ಯಂಟನಿ ನೇತೃತ್ವದ ಐವರು ಸದಸ್ಯರ ಸಮಿತಿಯು ಮಂಗಳವಾರ ಸಭೆ ಸೇರಿ ಮುಖಂಡರ ವಿರುದ್ಧ ಶಿಸ್ತುಕ್ರಮಕ್ಕೆ ಶಿಫಾರಸು ಮಾಡಿತು. ಸೋನಿಯಾ ಗಾಂಧಿ ಅವರು ಈ ಬಗ್ಗೆ ಅಂತಿಮ ನಿರ್ಧಾರ ತೆಗೆದು
ಕೊಳ್ಳಲಿದ್ದಾರೆ.
ಮೇಘಾಲಯ, ಪಂಜಾಬ್ ಹಾಗೂ ಕೇರಳ ರಾಜ್ಯಗಳಿಂದ ಸಲ್ಲಿಕೆಯಾದ ದೂರುಗಳನ್ನು ಸಮಿತಿ ಚರ್ಚಿಸಿತು ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಹಾಗೂ ಶಿಸ್ತು ಸಮಿತಿ ಸದಸ್ಯ ತಾರಿಕ್ ಅನ್ವರ್ ಹೇಳಿದ್ದಾರೆ. ಮುಖಂಡರ ವಿರುದ್ಧ ಶಿಸ್ತುಕ್ರಮ ಜರುಗಿಸಲು ಸಮಿತಿ ಸರ್ವಾನುಮತದ ನಿರ್ಣಯ ತೆಗೆದುಕೊಂಡಿತು ಎಂದು ಅವರು ತಿಳಿಸಿದ್ದಾರೆ.
ಸಮಿತಿ ಶಿಫಾರಸಿನ ಬಗ್ಗೆ ಪ್ರತಿಕ್ರಿಯಿಸಿರುವ ಜಾಖಡ್, ‘ಪಕ್ಷಕ್ಕೆ ಒಳ್ಳೆಯದಾಗಲಿ ಎಂದು ನಾನು ಹಾರೈಸುತ್ತೇನೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.