ಬಾರಾಮತಿ: ಪವಾರ್ ಕುಟುಂಬದ ನಡುವಿನ ವಾಕ್ಸಮರಕ್ಕೆ ಬಾರಾಮತಿ ವಿಧಾನಸಭಾ ಕ್ಷೇತ್ರ ಸಾಕ್ಷಿಯಾಗುತ್ತಿದೆ. ಎನ್‌ಸಿಪಿ ಪಕ್ಷವು ಎರಡು ಭಾಗಗಳಾದ ಬಳಿಕ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ.
1991ರಿಂದ ಅಜಿತ್ ಪವಾರ್ (ಅವಿಭಜಿತ ಎನ್‌ಸಿಪಿ) ಅವರು ಬಾರಾಮತಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗುತ್ತಾ ಬಂದಿದ್ದಾರೆ. ಈಗ ಎನ್‌ಸಿಪಿ (ಅಜಿತ್ ಬಣ) ಮುಖ್ಯಸ್ಥ ಅಜಿತ್ ವಿರುದ್ಧ ಅವರ ಸಹೋದರನ ಮಗ ಯೋಗೇಂದ್ರ ಪವಾರ್ ಅವರನ್ನು ಶರದ್ ಪವಾರ್ ಅವರು ತಮ್ಮ ಪಕ್ಷದಿಂದ ಕಣಕ್ಕಿಳಿಸಿದ್ದಾರೆ.
ಬಾರಾಮತಿ ಕ್ಷೇತ್ರದಲ್ಲಿ ಶನಿವಾರ ಚುನಾವಣಾ ಪ್ರಚಾರ ನಡೆಸಿದ ಅಜಿತ್ ಅವರು ತಮ್ಮ ಚಿಕ್ಕಮ್ಮ ಪ್ರತಿಭಾ ಪವಾರ್ ಅವರನ್ನು ಕುರಿತು ಮಾತನಾಡಿದ್ದಾರೆ. ‘ಇಷ್ಟು ವರ್ಷಗಳಿಂದ ನಾನು ಇದೇ ಕ್ಷೇತ್ರದಿಂದ ಆಯ್ಕೆ ಆಗುತ್ತಾ ಬಂದಿದ್ದೇನೆ. ನೀವು ಎಂದಾದರೂ ನನ್ನ ಚಿಕ್ಕಮ್ಮ ಚುನಾವಣಾ ಪ್ರಚಾರ ಮಾಡಿದ್ದನ್ನು ನೋಡಿದ್ದೀರಾ’ ಎಂದು ಅಜಿತ್ ಅವರು ಜನರನ್ನು ಪ್ರಶ್ನಿದರು.
‘ಮೊಮ್ಮಗ ಯೋಗೇಂದ್ರನ ಕುರಿತು ಅವರಿಗೆ ಅದು ಹೇಗೆ ಒಮ್ಮೆಲೆ ಪ್ರೇಮ ಉಕ್ಕುತ್ತಿದೆ. ಚುನಾವಣೆ ಮುಗಿದ ಬಳಿಕ ಚಿಕ್ಕಮ್ಮನಲ್ಲಿ ಈ ಬಗ್ಗೆ ನಾನು ಕೇಳುತ್ತೇನೆ’ ಎಂದರು. ಸಂಸದೆ ಸುಪ್ರಿಯಾ ಸುಳೆ ಅವರ ಪುತ್ರಿ ರೇವತಿ ಅವರೂ ಯೋಗೇಂದ್ರ ಅವರ ಪರ ಪ್ರಚಾರ ನಡೆಸುತ್ತಿದ್ದಾರೆ.
ಅಜಿತ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಎನ್‌ಸಿಪಿ (ಶರದ್ ಬಣ) ಮುಖ್ಯಸ್ಥ ಶರದ್ ಪವಾರ್, ‘ಈ ಹಿಂದೆಯೂ ಹಲವು ಬಾರಿ ನನ್ನ ಪತ್ನಿ (ಪ್ರತಿಭಾ ಪವಾರ್) ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಳು. ನಮ್ಮ ಕುಟುಂಬದ ಎಲ್ಲರೂ ಚುನಾವಣಾ ಸಮಯದಲ್ಲಿ ಪ್ರಚಾರ ಮಾಡುತ್ತಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.