ADVERTISEMENT

ಬಿಜೆಪಿಯನ್ನು ಟೀಕಿಸುತ್ತಿರುವ ಕೆಸಿಆರ್‌ಗೆ ಪ್ರಧಾನಿ ಮೋದಿಯಿಂದ ಜನ್ಮದಿನದ ಶುಭಾಶಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಫೆಬ್ರುವರಿ 2022, 10:15 IST
Last Updated 17 ಫೆಬ್ರುವರಿ 2022, 10:15 IST
ಕೆ.ಚಂದ್ರಶೇಖರ ರಾವ್ ಮತ್ತು ನರೇಂದ್ರ ಮೋದಿ –ಪಿಟಿಐ ಚಿತ್ರ
ಕೆ.ಚಂದ್ರಶೇಖರ ರಾವ್ ಮತ್ತು ನರೇಂದ್ರ ಮೋದಿ –ಪಿಟಿಐ ಚಿತ್ರ   

ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರು ಇಂದು (ಗುರುವಾರ) ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.

ಹುಟ್ಟುಹಬ್ಬದ ಅಂಗವಾಗಿ ಕೆಸಿಆರ್‌ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ದೂರವಾಣಿ ಕರೆ ಮಾಡಿ ಶುಭ ಹಾರೈಸಿದ್ದಾರೆ. ಇದೇ ವೇಳೆ ಕುಶಲೋಪರಿ ವಿಚಾರಿಸಿದ ಮೋದಿ, ಕೆಸಿಆರ್‌ ಅವರೊಂದಿಗೆ ಯಾವುದೇ ರಾಜಕೀಯ ಚರ್ಚೆ ನಡೆಸಿಲ್ಲ ಎಂದು ಮುಖ್ಯಮಂತ್ರಿ ಕಚೇರಿ ಮೂಲಗಳು ತಿಳಿಸಿವೆ ಎಂದು ‘ಎನ್‌ಡಿಟಿವಿ’ ವರದಿ ಮಾಡಿದೆ.

ಫೆ. 5ರಂದು ಹೈದರಾಬಾದ್‌ನಲ್ಲಿ ರಾಮಾನುಜಾಚಾರ್ಯರ ಪ್ರತಿಮೆಯನ್ನು (ಸಮಾನತೆಯ ಪ್ರತಿಮೆ) ಪ್ರಧಾನಿ ನರೇಂದ್ರ ಮೋದಿ ಅವರು ದೇಶಕ್ಕೆ ಸಮರ್ಪಿಸಿದ್ದರು. ಅಂದು ಉಭಯ ನಾಯಕರು ಮುಖಾಮುಖಿಯಾಗಿದ್ದು, ಹೊರತುಪಡಿಸಿ ಮತ್ತೆ ಭೇಟಿಯಾಗಿರಲಿಲ್ಲ.

ADVERTISEMENT

2024ರ ಲೋಕಸಭೆ ಚುನಾವಣೆಗೂ ಮುನ್ನ ಬಿಜೆಪಿಯೇತರ ಪಕ್ಷಗಳನ್ನು ಒಟ್ಟುಗೂಡಿಸಲು ಮುಂದಾಗಿರುವ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರು ಇತ್ತೀಚೆಗೆ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿ ‌ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ.

‘ಬಿಜೆಪಿಯನ್ನು ಬಂಗಾಳ ಕೊಲ್ಲಿಗೆ ಎಸೆಯಿರಿ, ಮೋದಿಯವರು ಚುನಾವಣೆಗಾಗಿ ಹೊಸ ವೇಷ ಧರಿಸಿದ್ದಾರೆ’ ಎಂದೂ ಕೆಸಿಆರ್‌ ಟೀಕಿಸಿದ್ದರು.

ಕೆಸಿಆರ್‌ ಅವರು ಇತ್ತೀಚೆಗೆ ಕೇಂದ್ರ ವಿರೋಧ ಪಕ್ಷಗಳ ನಾಯಕರನ್ನು ಭೇಟಿಯಾಗುವ ಮೂಲಕ ‘ತೃತೀಯ ರಂಗ’ ರಚನೆ ಬಗ್ಗೆ ಊಹಾಪೋಹಗಳನ್ನು ಹುಟ್ಟುಹಾಕಿದ್ದಾರೆ.

2019ರ ಲೋಕಸಭೆ ಚುನಾವಣೆಗೂ ಮುನ್ನ ಕೆಸಿಆರ್‌ ಅವರು, ಕೇರಳ ಸಿಎಂ ಪಿಣರಾಯಿ ವಿಜಯನ್, ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಮತ್ತು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ, ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಸೇರಿದಂತೆ ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಿ ಕೇಂದ್ರದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ತೃತೀಯ ರಂಗ ರಚಿಸುವಂತೆ ಒತ್ತಾಯಿಸಿದ್ದರು.

ಕೆಸಿಆರ್‌ಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಸೇರಿದಂತೆ ಗಣ್ಯರು ದೂರವಾಣಿ ಕರೆ ಮಾಡಿ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.