ಲಖನೌ: ಅಯೋಧ್ಯೆಯ ರಾಮ ಮಂದಿರದಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಗೆ ಮೊದಲು ನಡೆಯುತ್ತಿರುವ ಪೂರ್ವಭಾವಿ ಆಚರಣೆಗಳು ಮಂಗಳವಾರ ರಾಮಮಂದಿರ ಸಂಕೀರ್ಣಕ್ಕೆ ಸ್ಥಳಾಂತರಗೊಂಡವು.
ಇದಕ್ಕೂ ಮೊದಲು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸದಸ್ಯ ಅನಿಲ್ ಮಿಶ್ರಾ, ಅವರ ಪತ್ನಿ ಮತ್ತು ಇತರರು ಸರಯೂ ನದಿ ತೀರದಲ್ಲಿ ‘ಕಳಶ ಪೂಜೆ’ ನೆರವೇರಿಸಿದರು. ಪೂಜೆ ಬಳಿಕ ಕುಂಭಗಳಲ್ಲಿ ಸರಯೂ ನದಿ ನೀರು ತುಂಬಿಸಿ ಮಹಿಳೆಯರು ‘ಕಳಶ ಯಾತ್ರೆ’ ಕೈಗೊಂಡರು. ಪೂರ್ವಭಾವಿ ಆಚರಣೆಗಳು ನಡೆಯುತ್ತಿರುವ ರಾಮಮಂದಿರ ಆವರಣಕ್ಕೆ ಕುಂಭಗಳನ್ನು ಒಯ್ಯಲಾಯಿತು ಎಂದು ಟ್ರಸ್ಟ್ ತಿಳಿಸಿದೆ
121 ಆಚಾರ್ಯರು ವಿಧಿವಿಧಾನಗಳನ್ನು ನೆರವೇರಿಸಿದರು. ಕಾಶಿಯ ಲಕ್ಷ್ಮಿಕಾಂತ ದೀಕ್ಷಿತ್ ಅವರು ಮುಖ್ಯ ಅರ್ಚಕರಾಗಿದ್ದರು. ವಾರಾಣಸಿಯ ಗಣೇಶ್ವರ ಶಾಸ್ತ್ರಿ ದ್ರಾವಿಡ್ ಅವರು ಧಾರ್ಮಿಕ ವಿಧಿಗಳ ಮೇಲ್ವಿಚಾರಣೆ ವಹಿಸಿದ್ದರು.
ಜನವರಿ 21ರ ವರೆಗೂ ಈ ಪೂರ್ವಭಾವಿ ಧಾರ್ಮಿಕ ಆಚರಣೆಗಳು ನೆರವೇರಲಿವೆ. ಜ.22ರಂದು ಮೂರ್ತಿ ಪ್ರತಿಷ್ಠಾಪನೆ ಸಮಾರಂಭ ನೆರವೇರಲಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಸಮಾರಂಭದ ಮುಖ್ಯ ಯಜಮಾನರಾಗಿರುತ್ತಾರೆ. ಅವರೂ ಕೂಡಾ ಮೂರು ದಿವಸಗಳ ಕಾಲ ಕಠಿಣ ವ್ರತಗಳನ್ನು ಕೈಗೊಳ್ಳಬೇಕು. ಶುಕ್ರವಾರದಿಂದಲೇ ಅವರು ಮರದ ಮಂಚದಲ್ಲಿ ಮಲಗಬೇಕು. ಹಾಸಿಗೆ ಬದಲು ಕೇವಲ ಚಾದರ ಬಳಸಬೇಕು.
ಈ ಮೂರು ದಿನಗಳೂ ಅವರು ಹಣ್ಣುಗಳನ್ನು ಮಾತ್ರ ತಿನ್ನಬೇಕು. ರಾವಣನ ವಿರುದ್ಧ ಹೋರಾಡಿದ ‘ಜಟಾಯು’ವಿನ ಮೂರ್ತಿಯನ್ನು ಅವರು ಪೂಜಿಸಬೇಕು ಎಂದು ಅರ್ಚಕರು ತಿಳಿಸಿದ್ದಾರೆ.
* ಭಕ್ತರಿಗೆ ಅನುಕೂಲವಾಗಲೆಂದು ಓಯೊ ಕಂಪನಿಯು ಅಯೋಧ್ಯೆಯಲ್ಲಿ 51 ಹೋಂ ಸ್ಟೇಗಳನ್ನು ಮತ್ತು 14 ಹೋಟೆಲ್‌ಗಳನ್ನು ಆರಂಭಿಸಿದೆ.
* ನಾನು ಜ. 22ರ ಬಳಿಕ ಪತ್ನಿ, ಮಕ್ಕಳು ಮತ್ತು ಪೋಷಕರ ಜತೆ ಅಯೋಧ್ಯೆಗೆ ಭೇಟಿ ನೀಡಲು ಬಯಸಿದ್ದೇನೆ. ನನಗೆ ಆಹ್ವಾನ ಪತ್ರಿಕೆ ದೊರಕಿದೆ. ಅದರಲ್ಲಿ ಒಬ್ಬರಿಗೆ ಮಾತ್ರ ಅವಕಾಶವಿದೆ ಎಂದು ಹೇಳಲಾಗಿದೆ.
ಕಾಂಗ್ರೆಸ್ ಮತ್ತು ಇಂಡಿಯಾ ಮೈತ್ರಿಕೂಟದ ಪಕ್ಷಗಳು ಪ್ರಾಣ ಪ್ರತಿಷ್ಠಾಪನೆ ಸಮಾರಂಭವನ್ನು ಬಹಿಷ್ಕರಿಸಿವೆ. ಜನರು ಅವರನ್ನು ಬಹಿಷ್ಕರಿಸಲಿದ್ದಾರೆಅನುರಾಗ್ ಠಾಕೂರ್ ಕೇಂದ್ರ ಸಚಿವ
ಪ್ರಾಣ ಪ್ರತಿಷ್ಠಾಪನೆಗೆ ಅತಿಥಿಗಳನ್ನು ಆಹ್ವಾನಿಸುವಲ್ಲಿ ಜಾತಿ ತಾರತಮ್ಯ ಮಾಡಲಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಸಮಾರಂಭಕ್ಕೆ ಆಹ್ವಾನಿಸಲಾಗಿಲ್ಲಜಿತೇಂದ್ರ ಆಹ್ವಾಡ್ ಎನ್‌ಸಿಪಿ (ಶರದ್ ಪವಾರ್ ಬಣ) ಶಾಸಕ
ದೇವಸ್ಥಾನ ನಿರ್ಮಾಣ ಪೂರ್ಣವಾಗುವ ಮೊದಲು ಪ್ರಾಣ ಪ್ರತಿಷ್ಠಾಪನೆ ಮಾಡಿದ ಹಲವು ಉದಾಹರಣಗಳಿವೆ. ರಾಮೇಶ್ವರದಲ್ಲಿ ದೇವಾಲಯ ನಿರ್ಮಾಣಕ್ಕೂ ಮೊದಲು ಶ್ರೀರಾಮನು ಶಿವಲಿಂಗದ ಪ್ರಾಣ ಪ್ರತಿಷ್ಠಾಪನೆ ಮಾಡಿದ್ದನುಶ್ರೀ ಶ್ರೀ ರವಿಶಂಕರ್ ಗುರೂಜಿ ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ
ಸಮಾರಂಭದಲ್ಲಿ ಭಾಗಿಯಾಗುವುದಿಲ್ಲ:
ಶರದ್ ಪತ್ರ ಮುಂಬೈ: ಜನವರಿ 22ರಂದು ನಡೆಯಲಿರುವ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ತಾವು ಭಾಗಿಯಾಗುವುದಿಲ್ಲ ಎಂದು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ತಿಳಿಸಿದ್ದಾರೆ. ರಾಮಮಂದಿರ ನಿರ್ಮಾಣ ಕಾಮಗಾರಿ ಸಂಪೂರ್ಣವಾದ ಬಳಿಕ ಮಂದಿರಕ್ಕೆ ಭೇಟಿ ನೀಡುವುದಾಗಿ ಅವರು ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರಿಗೆ ಬರೆದಿರುವ ಪತ್ರದಲ್ಲಿ ಹೇಳಿದ್ದಾರೆ. ಚಂಪತ್ ರಾಯ್ ಅವರು ಶರದ್ ಅವರನ್ನು ಆಹ್ವಾನಿಸಿದ್ದರು. ಶರದ್ ಅವರು ಪತ್ರದ ಮೂಲಕ ವಿನಮ್ರವಾಗಿ ಪ್ರತಿಕ್ರಿಯೆ ನೀಡಿದ್ದಾರೆ ಮತ್ತು ಆಹ್ವಾನಿಸಿದ್ದಕ್ಕೆ ಧನ್ಯವಾದ ಹೇಳಿದ್ದಾರೆ. ‘ಶ್ರೀರಾಮನನ್ನು ಭಾರತದಲ್ಲಿ ಮಾತ್ರವಲ್ಲ ವಿಶ್ವದಾದ್ಯಂತ ಲಕ್ಷಾಂತರ ಜನರು ಭಕ್ತಿಭಾವದಿಂದ ಸ್ಮರಿಸುತ್ತಾರೆ. ಅಯೋಧ್ಯೆ ಸಮಾರಂಭವು ರಾಮಭಕ್ತರಲ್ಲಿ ಹುರುಪು ತಂದಿದೆ. ಭಕ್ತರ ಬೃಹತ್ ಸಮೂಹವು ಪ್ರಾಣ ಪ್ರತಿಷ್ಠಾಪನೆ ಸಮಾರಂಭದಲ್ಲಿ ಪಾಲ್ಗೊಳ್ಳಲಿದೆ ನಾನೂ ಕೂಡಾ ಆ ಐತಿಹಾಸಿಕ ಸಂದರ್ಭಕ್ಕಾಗಿ ಹರ್ಷಿಸುತ್ತೇನೆ’ ಎಂದು ಬರೆದಿದ್ದಾರೆ. ‘ಕೆಲಸದ ನಿಮಿತ್ತ ಅಯೋಧ್ಯೆಗೆ ಭೇಟಿ ನೀಡುವ ಯೋಜನೆ ಇದೆ. ಆಗ ರಾಮಮಂದಿರಕ್ಕೆ ಬಂದು ಸಾಕಷ್ಟು ಸಮಯ ವ್ಯಯಿಸಿ ಶ್ರೀರಾಮನ ದರ್ಶನ ಪಡೆಯುತ್ತೇನೆ. ಆ ವೇಳೆಗೆ ಮಂದಿರ ನಿರ್ಮಾಣ ಕಾಮಗಾರಿಯೂ ಸಂಪೂರ್ಣವಾಗಿರುತ್ತದೆ’ ಎಂದು ಪವಾರ್ ಹೇಳಿದ್ದಾರೆ. ಸಮಾರಂಭದಲ್ಲಿ ಭಾಗಿ ಆಗುವುದಿಲ್ಲ ಎಂದು ಕಾಂಗ್ರೆಸ್ ನಾಯಕತ್ವ ಸ್ಪಷ್ಟಪಡಿಸಿದ ಬೆನ್ನಲ್ಲೇ ಶರದ್ ಈ ಪತ್ರ ಬರೆದಿದ್ದಾರೆ.
ದಾವೋಸ್‌ನಲ್ಲೂ ಸಂಭ್ರಮ ದಾವೋಸ್ (ಪಿಟಿಐ): ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಸಮಾರಂಭದ ಸಂಭ್ರಮವು ಇಲ್ಲಿಯೂ ಪ್ರತಿಫಲಿಸಿದೆ. ಪ್ರಾಣ ಪ್ರತಿಷ್ಠಾಪನೆ ಸಮಾರಂಭದ ಅಂಗವಾಗಿ ಜನವರಿ 22ರಂದು ಕಾರ್ಯಕ್ರಮ ಹಮ್ಮಿಕೊಳ್ಳಲು ರಾಮಭಕ್ತರು ನಿರ್ಧರಿಸಿದ್ದಾರೆ. ವಿಶ್ವ ಆರ್ಥಿಕ ವೇದಿಕೆಯ (ಡಬ್ಲ್ಯುಇಎಫ್) ವಾರ್ಷಿಕ ಸಭೆ ಸಂದರ್ಭದಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಆ ದಿನ ದೀಪಗಳನ್ನು ಬೆಳಗಿಸಿ ರಾಮ ಭಜನೆ ಹಮ್ಮಿಕೊಳ್ಳಲು ನಿರ್ಧರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.