ADVERTISEMENT

ಗರ್ಭಿಣಿಯರು ರಾಮಾಯಣ ಓದಬೇಕು: ತಮಿಳಿಸೈ ಸೌಂದರರಾಜನ್

ಪಿಟಿಐ
Published 11 ಜೂನ್ 2023, 15:44 IST
Last Updated 11 ಜೂನ್ 2023, 15:44 IST
ತಮಿಳಿಸೈ ಸೌಂದರರಾಜನ್
ತಮಿಳಿಸೈ ಸೌಂದರರಾಜನ್   

ನವದೆಹಲಿ: ಮಾನಸಿಕ ಮತ್ತು ದೈಹಿಕ ಸದೃಢತೆಯ ಶಿಶುಗಳನ್ನು ಪಡೆಯಲು ಗರ್ಭಿಣಿಯರು ‘ಸುಂದರಕಾಂಡ’ವನ್ನು (ರಾಮಾಯಣದ ಅಧ್ಯಾಯ) ಪಠಿಸಬೇಕು ಮತ್ತು ರಾಮಾಯಣದಂಥ ಮಹಾಕಾವ್ಯಗಳನ್ನು ಓದಬೇಕು ಎಂದು ತೆಲಂಗಾಣ ರಾಜ್ಯಪಾಲರಾದ ತಮಿಳಿಸೈ ಸೌಂದರರಾಜನ್ ಭಾನುವಾರ ಹೇಳಿದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಅಂಗಸಂಸ್ಥೆ ಸಂವರ್ಧಿನಿ ನ್ಯಾಸ್‌ ಆರಂಭಿಸಿರುವ ‘ಗರ್ಭ ಸಂಸ್ಕಾರ’ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಂತರ ಅವರು ಈ ಹೇಳಿಕೆ ನೀಡಿದರು.

ಸ್ತ್ರೀರೋಗ ತಜ್ಞರೂ ಆಗಿರುವ ಸುಂದರರಾಜನ್‌  ವರ್ಚುವಲ್ ಮೂಲಕ ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.  ‘ವೈಜ್ಞಾನಿಕ ಮತ್ತು ಸಮಗ್ರ ದೃಷ್ಟಿಕೋನದ ಈ ಕಾರ್ಯಕ್ರಮದ ಅನುಷ್ಠಾನವು ಖಂಡಿತವಾಗಿ ಧನಾತ್ಮಕ ಫಲಿತಾಂಶವನ್ನು ನೀಡುತ್ತದೆ’ ಎಂದು ಹೇಳಿದರು.

ADVERTISEMENT

‘ಗ್ರಾಮೀಣ ಭಾಗಗಳಲ್ಲಿ ಗರ್ಭಿಣಿಯರು ರಾಮಾಯಣ, ಮಹಾಭಾರತ ಮತ್ತಿತರ ಮಹಾಕಾವ್ಯಗಳನ್ನು ಪುರಾಣಗಳನ್ನು ಓದುವುದನ್ನು ನೋಡಿದ್ದೇವೆ. ಅದರಲ್ಲೂ ತಮಿಳಿನಾಡಿನಲ್ಲಿ ಕುಂಭ ರಾಮಾಯಣದ ‘ಸುಂದರಕಾಂಡ’ ಓದಬೇಕು ಎನ್ನುವ ನಂಬಿಕೆ ಇದೆ’ ಎಂದು ತಿಳಿಸಿದರು.

ಗರ್ಭ ಸಂಸ್ಕಾರ ಕಾರ್ಯಕ್ರಮದಡಿ ಗರ್ಭಿಣಿಯರಿಗೆ ಧಾರ್ಮಿಕ ಗ್ರಂಥಗಳಾದ ಭಗವದ್ಗೀತೆ ಮತ್ತು ರಾಮಾಯಣ ಓದಲು ಪ್ರೋತ್ಸಾಹಿಸಲಾಗುತ್ತದೆ. ಸಂಸ್ಕೃತ ಮಂತ್ರಗಳ ಉಚ್ಚಾರ ಹಾಗೂ ಯೋಗಾಭ್ಯಾಸ ಸಹ ಮಾಡಿಸಲಾಗುತ್ತದೆ. ಇದರಿಂದ ಗರ್ಭಿಣಿಯರಿಗೆ ಸಹಜ ಹೆರಿಗೆ ಆಗಲಿದೆ ಮತ್ತು ಸಂಸ್ಕಾರವಂತ ಹಾಗೂ ದೇಶಭಕ್ತ ಮಕ್ಕಳು ಜನಿಸುತ್ತವೆ. ಗರ್ಭಾವಸ್ಥೆಯಿಂದ ಹೆರಿಗೆಯವರೆಗೆ ಮತ್ತು ಮಗುವಿಗೆ ಎರಡು ವರ್ಷ ತುಂಬುವವರೆಗೆ ಈ ಪ್ರಕ್ರಿಯೆ ಮುಂದುವರಿಯಲಿದೆ ಎಂದು ಸಂವರ್ಧಿನಿ ನ್ಯಾಸ್‌ ಹೇಳಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.