ADVERTISEMENT

ಜಮ್ಮು ಮತ್ತು ಕಾಶ್ಮೀರದ ಕಿಶ್ತ್‌ವಾರದ ರಾಷ್ಟ್ರೀಯ ಉದ್ಯಾನದಲ್ಲಿ ಹಿಮ ಚಿರತೆ ಪತ್ತೆ

ಪಿಟಿಐ
Published 16 ಮೇ 2023, 15:51 IST
Last Updated 16 ಮೇ 2023, 15:51 IST
   

ಜಮ್ಮು: ಜಮ್ಮು ಮತ್ತು ಕಾಶ್ಮೀರದ ವನ್ಯಜೀವಿ ಸಂರಕ್ಷಣಾ ಇಲಾಖೆಯ ಸಂಶೋಧನಾ ತಂಡವು ಕಿಶ್ತ್‌ವಾರದ ರಾಷ್ಟ್ರೀಯ ಉದ್ಯಾನದಲ್ಲಿ ಹಿಮ ಚಿರತೆ ಉಪಸ್ಥಿತಿಯನ್ನು ಪತ್ತೆ ಮಾಡಿದೆ.

ರಾಷ್ಟ್ರೀಯ ಉದ್ಯಾನದಲ್ಲಿ ಅಳವಡಿಸಲಾಗಿದ್ದ ಕ್ಯಾಮರಾಗಳಲ್ಲಿ ಚಿರತೆ ಚಿತ್ರ ಸೆರೆಯಾಗಿದೆ. ಈ ಬೆಳವಣಿಗೆಯಿಂದ ಅಳಿವಿನಂಚಿರುವ ಹಿಮ ಚಿರತೆಯ ರಕ್ಷಣೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಿಮಪಾತ ಆರಂಭಕ್ಕೂ ಮುನ್ನ 2,195 ಚದರ ಕಿ.ಮೀ ವಿಸ್ತೀರ್ಣದ ಉದ್ಯಾನದಲ್ಲಿ ಅಳವಡಿಸಲಾಗಿದ್ದ ಕ್ಯಾಮರಾಗಳಲ್ಲಿ ಹಿಮ ಚಿರತೆಗಳ ಹಲವು ಚಿತ್ರಗಳು ಸೆರೆಯಾಗಿವೆ ಎಂದು ಅಧಿಕಾರಿ ಅರುಣ್ ಗುಪ್ತಾ ತಿಳಿಸಿದ್ದಾರೆ.

ADVERTISEMENT

ಪರಿಸರ ಸಂರಕ್ಷಣೆಯ ಅಂತರರಾಷ್ಟ್ರೀಯ ಒಕ್ಕೂಟ(ಐಯುಸಿಎನ್‌) ಹಿಮಚಿರತೆಯನ್ನು ಅಳಿವಿನಂಚಿನಲ್ಲಿರುವ ಪ್ರಾಣಿಗಳ ಪಟ್ಟಿಯಲ್ಲಿ ಸೇರಿಸಿದೆ. ಹಿಮ ಚಿರತೆಗಳು ಹೆಚ್ಚಾಗಿ ಸಮುದ್ರ ಮಟ್ಟದಿಂದ 3,000 ಮತ್ತು 4,500 ಮೀಟರ್ ಎತ್ತರದ ಪ್ರದೇಶದಲ್ಲಿ ಕಂಡುಬರುತ್ತವೆ. ಕಿಶ್ತ್‌ವಾರ ರಾಷ್ಟ್ರೀಯ ಉದ್ಯಾನವನ ಮತ್ತು ಜಮ್ಮುವಿನ ಪಕ್ಕದ ಹಿಮದಿಂದ ಆವೃತ್ತವಾದ ಪ್ರದೇಶಗಳಾದ ಮಧ್ಯ ಮತ್ತು ಉತ್ತರ ಕಾಶ್ಮೀರದ ಭಾಗಗಳು ಹಾಗೂ ಲಡಾಖ್ ಪ್ರದೇಶಗಳಲ್ಲಿ ಹಿಮ ಚರತೆ ಪತ್ತೆಯಾಗಿವೆ.

'ಒಂದು ಕ್ಯಾಮೆರಾ ಟ್ರ್ಯಾಪ್ ಫ್ರೇಮ್‌ನಲ್ಲಿ, ಕಿಶ್ತ್‌ವಾರ್‌ನ ರಾಷ್ಟ್ರೀಯ ಉದ್ಯಾನದ ರೆನೈ ಕ್ಯಾಚ್‌ಮೆಂಟ್‌ನಲ್ಲಿ ಹಿಮದಿಂದ ಆವೃತವಾದ ಭೂಪ್ರದೇಶಗಳ ನಡುವೆ ಮೂರು ಹಿಮ ಚಿರತೆಗಳು ತಿರುಗಾಡುತ್ತಿರುವುದನ್ನು ಸೆರೆಹಿಡಿಯಲಾಗಿದೆ. ಆದರೆ, ಈ ಮೊದಲು ಹೊರಗುತ್ತಿಗೆ ವೈಜ್ಞಾನಿಕ ಅಧ್ಯಯನದ ಮೂಲಕ ಇಲಾಖೆಯು ನಂತ್ ನಲ್ಲಾದಲ್ಲಿ ಎರಡು ಚಿರತೆಗಳನ್ನು ಸೆರೆಹಿಡಿದಿದೆ’ ಎಂದು ಗುಪ್ತಾ ಹೇಳಿದರು.

ಈ ಅಧ್ಯಯನವು ಹಿಮ ಚಿರತೆ ಜನಸಂಖ್ಯೆಯ ಮೌಲ್ಯಮಾಪನ ಮತ್ತು ಸಂರಕ್ಷಿತ ಪ್ರದೇಶಗಳ ಜೀವವೈವಿಧ್ಯ ದಾಖಲಾತಿಗಳ ಭಾಗವಾಗಿದೆ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.