ADVERTISEMENT

ನಿರ್ಭೀತ, ಪಕ್ಷಪಾತ ಮಾಡದ ಕೇಂದ್ರ ಸರ್ಕಾರ: ರಾಷ್ಟ್ರಪತಿ ದ್ರೌಪದಿ ಮುರ್ಮು

ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ

ಪಿಟಿಐ
Published 31 ಜನವರಿ 2023, 11:27 IST
Last Updated 31 ಜನವರಿ 2023, 11:27 IST
ಮಂಗಳವಾರ ಸಂಸತ್‌ನ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿದ ನಂತರ ನಿರ್ಗಮಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಇತರ ಸಂಸದರಿಗೆ ವಂದಿಸಿದರು. ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ ಇದ್ದರು –ಪಿಟಿಐ ಚಿತ್ರ
ಮಂಗಳವಾರ ಸಂಸತ್‌ನ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿದ ನಂತರ ನಿರ್ಗಮಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಇತರ ಸಂಸದರಿಗೆ ವಂದಿಸಿದರು. ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ ಇದ್ದರು –ಪಿಟಿಐ ಚಿತ್ರ   

ನವದೆಹಲಿ: ‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ನಿರ್ಭೀತವಾಗಿ ಕಾರ್ಯನಿರ್ವಹಿಸುತ್ತಿದ್ದು, ಖಚಿತ ನಿರ್ಧಾರ ತೆಗೆದುಕೊಳ್ಳುತ್ತಿದೆ. ಪಕ್ಷಪಾತ ಮಾಡದೇ ಎಲ್ಲ ವರ್ಗಗಳ ಅಭಿವೃದ್ಧಿಗೆ ಶ್ರಮಿಸುತ್ತಿದೆ’ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಮಂಗಳವಾರ ಹೇಳಿದರು.

ಬಜೆಟ್ ಅಧಿವೇಶನದ ಮೊದಲ ದಿನ, ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಚೊಚ್ಚಲ ಭಾಷಣ ಮಾಡಿದ ಅವರು, ‘ಕೇಂದ್ರ ಸರ್ಕಾರವು ಅಭಿವೃದ್ಧಿಯ ಜೊತೆಗೆ ದೇಶದ ಭವ್ಯ ಪರಂಪರೆಗೂ ಮಹತ್ವ ನೀಡುತ್ತಿದೆ’ ಎಂದು ವಿವರಿಸಿದರು.

‘ಭ್ರಷ್ಟಾಚಾರ ಎಂಬುದು ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಸಾಮಾಜಿಕ ನ್ಯಾಯದ ದೊಡ್ಡ ಶತ್ರು. ಇದರ ವಿರುದ್ಧ ಸರ್ಕಾರವು ನಿರಂತರ ಹೋರಾಟ ನಡೆಸುತ್ತಿದೆ. 2047ರ ವೇಳೆಗೆ ಭಾರತವು ಸ್ವಾವಲಂಬಿ ಹಾಗೂ ತನ್ನ ಜವಾಬ್ದಾರಿಯನ್ನು ಪೂರೈಸುವ ದೇಶವಾಗಿ ಹೊರಹೊಮ್ಮಬೇಕಿದೆ’ ಎಂದು ಹೇಳಿದರು.

ADVERTISEMENT

‘2047ರ ಭಾರತವು ಬಡತನದಿಂದ ಮುಕ್ತವಾಗಿರಬೇಕು. ದೇಶದ ಮಧ್ಯಮ ವರ್ಗದ ಜನರ ಅಭಿವೃದ್ಧಿಯೂ ಆಗಿರಬೇಕು’ ಎಂಬ ಆಶಯವನ್ನು ಮುರ್ಮು ವ್ಯಕ್ತಪಡಿಸಿದರು.

ಒಂದು ಗಂಟೆಗೂ ಹೆಚ್ಚು ಅವಧಿಯ ತಮ್ಮ ಭಾಷಣದಲ್ಲಿ ರಾಷ್ಟ್ರಪತಿ ಮುರ್ಮು ಅವರು ಪ್ರಧಾನಿ ಮೋದಿ ನೇತೃತ್ವದ ಸರ್ಕಾರದ ಸಾಧನೆಗಳನ್ನು ಬಿಚ್ಚಿಟ್ಟರು.

ರಾಷ್ಟ್ರಪತಿ ಮುರ್ಮು ಅವರ ಭಾಷಣದ ಪ್ರಮುಖ ಅಂಶಗಳು ಹೀಗಿವೆ

* ಭಯೋತ್ಪಾದನೆ ವಿರುದ್ಧ ಕಠಿಣ ಕ್ರಮ. ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ವಾಸ್ತವ ನಿಯಂತ್ರಣ ರೇಖೆ (ಎಲ್‌ಎಸಿ) ಬಳಿಯ ದುಸ್ಸಾಹಸಗಳಿಗೆ ತಕ್ಕ ಪ್ರತ್ಯುತ್ತರ ನೀಡಲಾಗಿದೆ

* ಜಮ್ಮು–ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿಯ ರದ್ದತಿಯಂತಹ ದಿಟ್ಟ ಕ್ರಮಗಳ ಮೂಲಕ ದೃಢ ನಿರ್ಧಾರ ಕೈಗೊಳ್ಳುವ ಸರ್ಕಾರ ಎಂಬುದನ್ನು ಸಾಬೀತುಪಡಿಸಲಾಗಿದೆ

* ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಕೆಲ ಸೌಲಭ್ಯಗಳು ಜನರಿಗೆ ನೂರಕ್ಕೆ ನೂರರಷ್ಟು ಜನರಿಗೆ ತಲುಪಿವೆ ಇಲ್ಲವೇ ಗುರಿ ತಲುಪುವ ಹಂತದಲ್ಲಿವೆ

* ನೀತಿ ನಿರೂಪಣೆ ಹಾಗೂ ಅನುಷ್ಠಾನದಲ್ಲಿ ವಿಳಂಬ ಇಲ್ಲ. ದೂರದೃಷ್ಟಿವುಳ್ಳ ನಿರ್ಧಾರಗಳು ಹಾಗೂ ಅಭಿವೃದ್ಧಿಯಲ್ಲಿನ ವೇಗದಿಂದ ಭಾರತವನ್ನು ಗುರುತಿಸಲಾಗುತ್ತಿದೆ. ಈ ಕಾರಣಗಳಿಂದಾಗಿಯೇ, 10ನೇ ಸ್ಥಾನದಲ್ಲಿದ್ದ ಭಾರತ 5ನೇ ಬೃಹತ್ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ.

* ಬಡವರು ಹಾಗೂ ಮಹಿಳೆಯರ ಅಭಿವೃದ್ಧಿಗೂ ಒತ್ತು ನೀಡಲಾಗಿದೆ. ಸಮಾಜದಲ್ಲಿನ ದುರ್ಬಲರ ಏಳಿಗೆಗೂ ಕ್ರಮ ಕೈಗೊಂಡಿದೆ.

* ದೇಶದ ಸಂಸ್ಕೃತಿ ಹಾಗೂ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ರಾಮ ಮಂದಿರ, ಕೇದಾರನಾಥ ಧಾಮ ನಿರ್ಮಾಣ ಕಾರ್ಯ ಒಂದೆಡೆಯಾದರೆ, ವೈದ್ಯಕೀಯ ಕಾಲೇಜುಗಳು, ವಿಶ್ವವಿದ್ಯಾಲಯಗಳ ಸ್ಥಾಪನೆಗೂ ಕ್ರಮಕೈಗೊಳ್ಳಲಾಗಿದೆ.

* ಮುಂದಿನ 25 ವರ್ಷಗಳ ಅವಧಿಯನ್ನು ಸರ್ಕಾರ ‘ಅಮೃತ ಕಾಲ’ ಎಂದು ಬಣ್ಣಿಸುತ್ತದೆ. ಈ ಅವಧಿಯಲ್ಲಿ ದೇಶವು ‘ಆತ್ಮನಿರ್ಭರ’ವಾಗಬೇಕು. ಈ ಕನಸು ಈಡೇರಿಕೆಗೆ ದೇಶದ ಪ್ರತಿಯೊಬ್ಬರ ಪ್ರಜೆಯೂ ಕೈಜೋಡಿಸಬೇಕು.

* ಜಗತ್ತು ಎದುರಿಸುತ್ತಿರುವ ಸಮಸ್ಯೆಗಳಿಗೆ ಭಾರತವು ಜಿ–20 ಸದಸ್ಯ ರಾಷ್ಟ್ರಗಳ ನೆರವಿನೊಂದಿಗೆ ಸಾಮೂಹಿಕ ನೆಲೆಗಟ್ಟಿನಲ್ಲಿ ಪರಿಹಾರ ಕಂಡುಹಿಡಿಯುವ ಪ್ರಯತ್ನ ಮಾಡುತ್ತಿದೆ.

* 2070ರ ವೇಳೆಗೆ ಪರಿಸರಕ್ಕೆ ಇಂಗಾಲ ಸೇರುವ ಪ್ರಮಾಣವನ್ನು ಶೂನ್ಯಕ್ಕೆ ಇಳಿಸುವ ಸಂಕಲ್ಪ ಮಾಡಿದ್ದು, ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. ಒಟ್ಟು ಸಾಮರ್ಥ್ಯದ ಪೈಕಿ ಶೇ 40ರಷ್ಟು ವಿದ್ಯುತ್‌ಅನ್ನು ಪಳೆಯುಳಿಕೆಯೇತರ ಇಂಧನ ಮೂಲಗಳಿಂದ ಉತ್ಪಾದಿಸುವ ಗುರಿಯನ್ನು ಸಾಧಿಸಲಾಗಿದೆ.

* ಸೌರಶಕ್ತಿ ಬಳಸಿ ವಿದ್ಯುತ್‌ ಉತ್ಪಾದನೆಯನ್ನು ಹೆಚ್ಚಿಸಲಾಗಿದೆ. ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಭಾರತ ನಾಲ್ಕನೇ ಸ್ಥಾನದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.