ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಹಾಗೂ ಇತರೆ ಚುನಾವಣಾ ಆಯುಕ್ತರನ್ನು ನೇಮಕ ಮಾಡುವ ಮಸೂದೆಗೆ ರಾಷ್ಟ್ರಪತಿ ಸಹಿ ಹಾಕಿದ್ದಾರೆ ಎಂದು ಕೇಂದ್ರ ಸರ್ಕಾರ ಶುಕ್ರವಾರ ಅಧಿಸೂಚನೆಯಲ್ಲಿ ತಿಳಿಸಿದೆ.
ಮುಖ್ಯ ಚುನಾವಣಾ ಆಯುಕ್ತರು ಹಾಗೂ ಇತರೆ ಚುನಾವಣಾ ಆಯುಕ್ತರು (ನೇಮಕಾತಿ ಹಾಗೂ ಸೇವೆಯ ನಿಯಮಗಳು ಮತ್ತು ಅಧಿಕಾರಾವಧಿ) ಮಸೂದೆ 2023ಕ್ಕೆ ರಾಷ್ಟ್ರಪತಿಗಳ ಅಂಕಿತ ಬಿದ್ದಿದೆ.
ಮುಖ್ಯ ಚುನಾವಣಾ ಆಯುಕ್ತರು ಹಾಗೂ ಇತರೆ ಚುನಾವಣಾ ಆಯುಕ್ತರನ್ನು ಆಯ್ಕೆ ಮಾಡಲು, ಆಯ್ಕೆ ಸಮಿತಿಯ ರಚನೆಗೆ ಐದು ಮಂದಿಯ ಸಮಿತಿಯನ್ನು ರಚಿಸಲು ಕೇಂದ್ರ ಕಾನೂನು ಸಚಿವರ ಅಧ್ಯಕ್ಷತೆಯಲ್ಲಿ ಕಾರ್ಯದರ್ಶಿ ಶ್ರೇಣಿಗಿಂತ ಕಡಿಮೆಯಿಲ್ಲದ ಇನ್ನಿಬ್ಬರು ವ್ಯಕ್ತಿಗಳ ಸಮಿತಿಯನ್ನು ರಚಿಸಲು ಈ ಕಾನೂನಿನಲ್ಲಿ ಅವಕಾಶ ಇದೆ.
ಜತೆಗೆ ಪ್ರಧಾನಿಯವರ ಅಧ್ಯಕ್ಷತೆಯಲ್ಲಿ ವಿರೋಧ ಪಕ್ಷದ ನಾಯಕ ಹಾಗೂ ಓರ್ವ ಕೇಂದ್ರ ಸಚಿವರ ಸಮಿತಿಯು ಮುಖ್ಯ ಚುನಾವಣಾ ಆಯುಕ್ತರು ಹಾಗೂ ಇತರೆ ಚುನಾವಣಾ ಆಯುಕ್ತರನ್ನು ನೇಮಕ ಮಾಡಲು ರಾಷ್ಟ್ರಪತಿಗಳಿಗೆ ಶಿಫಾರಸು ಮಾಡುವ ಅವಕಾಶವೂ ಈ ಹೊಸ ಕಾನೂನಿನಲ್ಲಿದೆ.
‘ಮಾಧ್ಯಮ ಹಾಗೂ ನಿಯತಕಾಲಿಕೆಗಳ ನೋಂದಣಿ ಮಸೂದೆ‘ಗೂ ರಾಷ್ಟ್ರಪತಿ ಅಂಕಿ ಹಾಕಿದ್ದಾರೆ. ಈ ಮಸೂದೆಗೆ ಆಗಸ್ಟ್ 3ರಂದು ರಾಜ್ಯಸಭೆ ಒಪ್ಪಿಗೆ ನೀಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.