ನವದೆಹಲಿ: ರಾಷ್ಟ್ರಪತಿ ಭವನದಲ್ಲಿ ನಿರ್ಮಿಸಲಾದ ‘ಅಮೃತ ಉದ್ಯಾನ’ವನ್ನು ನಾಳೆ (ಆ.14) ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಉದ್ಘಾಟಿಸಲಿದ್ದು, ಆ.16ರಿಂದ ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಲಿದೆ.
ಆ. 16 ರಿಂದ ಸೆ.15ರವರೆಗೆ ಈ ಉದ್ಯಾನಕ್ಕೆ ಸಾರ್ವಜನಿಕರು ಭೇಟಿ ನೀಡಬಹುದು. ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ವೀಕ್ಷಣೆಗೆ ತೆರೆದಿರಲಿದೆ.
ಅಮೃತ ಉದ್ಯಾನಕ್ಕೆ ಭೇಟಿ ನೀಡುವವರಿಗೆ ತುಳಸಿ ಬೀಜವಿರುವ ಪೇಪರ್ ಅನ್ನು ನೀಡಲಾಗುತ್ತದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
‘ಹೊಸ ಜೀವನ ಮತ್ತು ಬೆಳವಣಿಗೆಯ ಸಂಕೇತವಾಗಿ ಉದ್ಯಾನಕ್ಕೆ ಭೇಟಿ ನೀಡಿದವರಿಗೆ ತುಳಸಿ ಬೀಜಗಳಿರುವ ಪೇಪರ್‌ಅನ್ನು ನೀಡಲಾಗುವುದು. ಈ ಪೇಪರ್ ಅನ್ನು ಮಣ್ಣಿನಲ್ಲಿ ಎಸೆದರೆ ಅದರಲ್ಲಿರುವ ಬೀಜಗಳು ಗಿಡವಾಗಿ ಹುಟ್ಟುತ್ತವೆ. ಈ ಮೂಲಕ ವೈಯಕ್ತಿವಾಗಿ ಪ್ರತಿಯೊಬ್ಬರೂ ಪರಿಸರಕ್ಕೆ ಕೊಡುಗೆ ನೀಡಬಹುದು’ ಎಂದು ರಾಷ್ಟ್ರಪತಿಗಳ ಉಪ ಪತ್ರಿಕಾ ಕಾರ್ಯದರ್ಶಿ ನಾವಿಕಾ ಗುಪ್ತಾ ತಿಳಿಸಿದ್ದಾರೆ
ಉದ್ಯಾನದಲ್ಲಿ ಕಲ್ಲುಗಳಿಂದ ನಿರ್ಮಿಸಲಾದ ಅಬಾಕಸ್, ಬಗೆ ಬಗೆಯ ಧ್ವನಿ ಹೊರಹೊಮ್ಮಿಸುವ ಕೊಳವೆಗಳು, ಸ್ವರ ಮೂಡಿಸುವ ಗೋಡೆಗಳು ಈ ಬಾರಿಯ ವಿಶೇಷತೆಯಾಗಿದೆ. ಇವು ಮಕ್ಕಳನ್ನು ಆಕರ್ಷಿಸಲಿದೆ ಎಂದು ನಾವಿಕಾ ಮಾಹಿತಿ ನೀಡಿದ್ದಾರೆ.
ರಾಷ್ಟ್ರಪತಿ ಭವನದ ಸುತ್ತಲೂ 15 ಎಕೆರೆಯಲ್ಲಿ ಈ ಉದ್ಯಾನವನ್ನು ನಿರ್ಮಿಸಲಾಗಿದ್ದು, 120 ಕ್ಕೂ ಹೆಚ್ಚು ವಿವಿಧ ರೀತಿಯ ಗುಲಾಬಿ ಮತ್ತು 70 ಕ್ಕೂ ಹೆಚ್ಚು ವಿವಿಧ ಋತುಮಾನದ ಹೂವುಗಳನ್ನು ಕಾಣಬಹುದಾಗಿದೆ.
ಉದ್ಯಾನಕ್ಕೆ ಉಚಿತವಾಗಿ ಭೇಟಿ ನೀಡಬಹುದು. ಭೇಟಿಯ ಸಮಯವನ್ನು ಆನ್‌ಲೈನ್ ಮೂಲಕ ಕೂಡ ಕಾಯ್ದಿರಿಸಬಹುದು. ಪ್ರತಿ ಸೋಮವಾರ ಉದ್ಯಾನಕ್ಕೆ ಪ್ರವೇಶವಿರುವುದಿಲ್ಲ ಎಂದೂ ರಾಷ್ಟ್ರಪತಿ ಭವನ ತಿಳಿಸಿದೆ.
2023–24ರಲ್ಲಿ ಆಯೋಜಿಸಿದ್ದ ಉದ್ಯಾನ ಉತ್ಸವದಲ್ಲಿ 23 ಲಕ್ಷ ಜನ ಈ ಅಮೃತ ಉದ್ಯಾನಕ್ಕೆ ಭೇಟಿ ನೀಡಿದ್ದರು ಎಂದು ಭವನ ಮಾಹಿತಿ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.