ನವದೆಹಲಿ: ಭಾರತೀಯ ಕುಸ್ತಿ ಫೆಡರೇಶನ್ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಕುಸ್ತಿಪಟುಗಳು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ಸೂಚಿಸಿ ಹೊಸ ಸಂಸತ್ ಭವನದ ಮುಂದೆ ನಡೆಸಲು ಉದ್ದೇಶಿಸಿದ್ದ ಮಹಿಳಾ ಮಹಾ ಪಂಚಾಯತ್‌ನಲ್ಲಿ ಭಾಗವಹಿಸದಂತೆ ನಮ್ಮನ್ನು ವ್ಯವಸ್ಥಿತವಾಗಿ ತಡೆಯಲಾಗಿದೆ ಎಂದು ಜೆಎನ್‌ಯು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ವಿಶ್ವವಿದ್ಯಾಲಯದ ಆವರಣದ ಸುತ್ತಮುತ್ತ ಬಿಗಿ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿದ್ದು, ವಿವಿ ಆವರಣದೊಳಗೆ ಅಘೋಷಿತ ನಿಷೇಧಾಜ್ಞೆ ಹೇರಲಾಗಿದೆ ಎಂದು ಅಖಿಲ ಭಾರತ ವಿದ್ಯಾರ್ಥಿ ಸಂಘಟನೆ(ಎಐಎಸ್‌ಎ) ಹೇಳಿದೆ.
‘ಇಂದು ಮಹಿಳಾ ಮಹಾ ಪಂಚಾಯತ್‌ಗೆ ಕರೆ ನೀಡಿದ್ದು, ಪ‍್ರತಿಭಟನೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸದಂತೆ ತಡೆಯಲು ಜವಾಹಾರ್ ಲಾಲ್ ನೆಹರು ವಿಶ್ವವಿದ್ಯಾಲಯದ ಆವರಣದ ಹೊರಗೆ ಮತ್ತು ಒಳಗೆ ಬಿಗಿ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿದೆ. ಒಬ್ಬ ಲೈಂಗಿಕ ದೌರ್ಜನ್ಯ ಆರೋಪಿಯನ್ನು ರಕ್ಷಿಸಲು ಸರ್ಕಾರ ಎಲ್ಲ ರೀತಿಯ ವ್ಯವಸ್ಥೆ ಮಾಡಿದೆ‘ ಎಂದು ಎಐಎಸ್ಎ ಕಾರ್ಯಕರ್ತೆ ಮಧುರಿಮಾ ಕುಂದು ಹೇಳಿದರು.
‘ನಾನು ಹೊರಗೆ ಬಂದು ಪೋಟೋ ತೆಗೆದುಕೊಳ್ಳುತ್ತಿರುವುದನ್ನು ನೋಡಿದ ಮಹಿಳಾ ಪೊಲೀಸ್ ಸಿಬ್ಬಂದಿ ನನ್ನನ್ನು ಹಿಡಿದು ಪೋನ್‌ನಲ್ಲಿರುವ ವಿಡಿಯೊ, ಪೋಟೋವನ್ನು ತೆಗದು ನನಗೆ ಬೆದರಿಕೆ ಹಾಕಿದರು‘ ಎಂದು ಮಧರಿಮಾ ಆರೋಪಿಸಿದ್ದಾರೆ.
ಕ್ಯಾಂಪಸ್ ಒಳಗೆ ಅಘೋಷಿತ ನಿಷೇಧಾಜ್ಞೆ ಹೇರಿರುವುದನ್ನು ವಿರೋಧಿಸಿ ಹಾಗೂ ನ್ಯಾಯಕ್ಕಾಗಿ ಪ್ರತಿಭಟನೆ ನಡೆಸುತ್ತಿರುವ ಮಹಿಳಾ ಕುಸ್ತಿಪಟುಗಳು, ಮಹಿಳಾ ನಾಯಕಿಯರನ್ನು ಬಂಧಿಸಿರುವುದನ್ನು ಖಂಡಿಸಿ ವಿವಿಯ ಗೇಟ್ ಮುಂದೆ ಪ್ರತಿಭಟನೆ ಮಾಡಲಾಯಿತು ಎಂದು ಮಧುರಿಮಾ ಹೇಳಿದರು.
ಲೈಂಗಿಕ ಕಿರುಕುಳ ಆರೋಪಿ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಬಂಧಿಸುವಂತೆ ಒತ್ತಾಯಿಸಿ ಕುಸ್ತಿ ಪಟುಗಳು ಸುಮಾರು 35 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಹೋರಾಟವನ್ನು ಇನ್ನಷ್ಟು ಬಲಗೊಳಿಸಿದ ಕುಸ್ತಿಪಟುಗಳು ಇಂದು ಹೊಸ ಸಂಸತ್ ಭವನದ ಮುಂದೆ ಧರಣಿ ನಡೆಸಲು ನಿರ್ಧರಿಸಿದ್ದರು. ಈ ನಿಟ್ಟಿನಲ್ಲಿ ಮಹಿಳಾ ಮಹಾ ಪಂಚಾಯತ್‌ಗೆ ಕರೆ ನೀಡಿದ್ದರು. ಇದೀಗ ವಿನೇಶಾ ಪೋಗಟ್, ಗೀತಾ ಮಲ್ಲಿಕ್ ಸೇರಿದಂತೆ ಹಲವು ಪ್ರತಿಭಟನಕಾರರನ್ನು ಕಾನೂನು ಸುವ್ಯವಸ್ಥೆ ಉಲ್ಲಂಘನೆ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.