ತೆಲಂಗಾಣ:‘ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುತ್ತೇವೆ ಎಂಬ ಅತಿಯಾದ ಆತ್ಮವಿಶ್ವಾಸದಲ್ಲಿ ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಸರ್ಕಾರ ಸುಮಾರು ₹66 ಕೋಟಿ ಖರ್ಚು ಮಾಡಿ 22 ಟೊಯೊಟಾ ಲ್ಯಾಂಡ್ ಕ್ರೂಸರ್ ಕಾರುಗಳನ್ನು ಖರೀದಿಸಿತ್ತು’ ಎಂದು ಮುಖ್ಯಮಂತ್ರಿ ರೇವಂತ್ ರೆಡ್ಡಿ ಆರೋಪಿಸಿದ್ದಾರೆ.
ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೇವಂತ್, ಹಿಂದಿನ ಸರ್ಕಾರದ ದುಂದು ವೆಚ್ಚದಿಂದ ಜನರು ಸಮಸ್ಯೆ ಎದುರಿಸಬೇಕಾಯಿತು ಎಂದರು.
‘ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ನನಗಾಗಿ ಹೊಸ ವಾಹನಗಳನ್ನು ಖರೀದಿಸದಂತೆ ಅಧಿಕಾರಿಗಳಿಗೆ ತಿಳಿಸಿದ್ದೆ. ಹಳೆ ಕಾರುಗಳನ್ನೇ ರಿಪೇರಿ ಮಾಡಿ ಬಳಸುವಂತೆ ಸೂಚಿಸಿದ್ದೆ. ಈ ವೇಳೆ ಅಧಿಕಾರಿಗಳು ಹೊಸ ಕಾರುಗಳನ್ನು ಈಗಾಗಲೇ ಖರೀದಿಸಿರುವ ಬಗ್ಗೆ ನನಗೆ ಮಾಹಿತಿ ನೀಡಿದರು’ ಎಂದು ಹೇಳಿದ್ದಾರೆ.
‘ಹಿಂದಿನ ಸರ್ಕಾರ 22 ಲ್ಯಾಂಡ್ ಕ್ರೂಸರ್ ವಾಹನಗಳನ್ನು ಖರೀದಿಸಿತ್ತು. ಅವೆಲ್ಲವೂ ವಿಜಯವಾಡದಲ್ಲಿವೆ. ನೂತನ ಮುಖ್ಯಮಂತ್ರಿ(ಕೆಸಿಆರ್) ಪ್ರಮಾಣ ವಚನ ಸ್ವೀಕರಿಸಿದ ಮೇಲೆ ಅವುಗಳನ್ನು ತರಲು ಆಲೋಚಿಸಿದ್ದೆವು ಎಂದು ಅಧಿಕಾರಿಗಳು ತಿಳಿಸಿದ್ದಾರೆ’ ಎಂದರು.
‘ಇವುಗಳೆಲ್ಲವೂ ಬುಲೆಟ್ ಪ್ರೂಫ್ ಕಾರುಗಳಾಗಿದ್ದು, ಒಂದು ಕಾರಿನ ಬೆಲೆ ಸುಮಾರು ₹3 ಕೋಟಿ. ಈ ರೀತಿಯಲ್ಲಿ ಕೆಸಿಆರ್ ಸರ್ಕಾರ ರಾಜ್ಯದ ಸಂಪತ್ತನ್ನು ಕೊಳ್ಳೆ ಹೊಡೆಯಲು ಹೊರಟಿತ್ತು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.