ADVERTISEMENT

ಹಿಂದಿನ ಸರ್ಕಾರಗಳಿಂದ ಈಶಾನ್ಯ ಭಾರತ ನಿರ್ಲಕ್ಷ್ಯ: ಪ್ರಧಾನಿ ನರೇಂದ್ರ ಮೋದಿ ಟೀಕೆ

ಮಣಿಪುರ: ₹ 4,815 ಕೋಟಿ ವೆಚ್ಚದ 22 ಯೋಜನೆಗಳಿಗೆ ಶಿಲಾನ್ಯಾಸ

ಪಿಟಿಐ
Published 4 ಜನವರಿ 2022, 11:09 IST
Last Updated 4 ಜನವರಿ 2022, 11:09 IST
ಮಣಿಪುರ ರಾಜ್ಯಧಾನಿ ಇಂಫಾಲದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು –ಪಿಟಿಐ ಚಿತ್ರ
ಮಣಿಪುರ ರಾಜ್ಯಧಾನಿ ಇಂಫಾಲದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು –ಪಿಟಿಐ ಚಿತ್ರ   

ಇಂಫಾಲ್: ಕೇಂದ್ರದಲ್ಲಿ ಈ ಹಿಂದೆ ಆಡಳಿತ ನಡೆಸಿದ ಸರ್ಕಾರಗಳು ಈಶಾನ್ಯ ಭಾರತವನ್ನು ನಿರ್ಲಕ್ಷಿಸಿದ್ದವು. ಈ ಭಾಗದ ಅಭಿವೃದ್ಧಿ ವಿಷಯದಲ್ಲಿ ತಾರತಮ್ಯ ನೀತಿ ಅನುಸರಿಸಿದವು ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದರು.

ಮಣಿಪುರದಲ್ಲಿ ₹ 4,815 ಕೋಟಿ ವೆಚ್ಚದ 22 ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಿ, ಕೆಲವು ಯೋಜನೆಗಳನ್ನು ಲೋಕಾರ್ಪಣೆಗೊಳಿಸಿದ ನಂತರ ನಡೆದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.

ಮಣಿಪುರ ವಿಧಾನಸಭೆಗೆ ಕೆಲವೇ ತಿಂಗಳಲ್ಲಿ ಚುನಾವಣೆ ನಡೆಯಲಿದ್ದು, ಅವರು ಪಕ್ಷದ ಚುನಾವಣಾ ಪ್ರಚಾರ ಕಾರ್ಯಕ್ಕೆ ಈ ಕಾರ್ಯಕ್ರಮಗಳ ಮೂಲಕ ಚಾಲನೆ ನೀಡಿದ್ದಾರೆ.

ADVERTISEMENT

‘ಕೇಂದ್ರದಲ್ಲಿ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಅಸ್ತಿತ್ವಕ್ಕೆ ಬಂದ ಬಿಜೆಪಿ ನೇತೃತ್ವದ ಸರ್ಕಾರಗಳು ಈ ಭಾಗದಲ್ಲಿ ಅಭಿವೃದ್ದಿಗೆ ಚಾಲನೆ ನೀಡಿದವಲ್ಲದೇ, ಇಲ್ಲಿ ಶಾಂತಿ ನೆಲೆಸಲು ಶ್ರಮಿಸುತ್ತಿವೆ’ ಎಂದು ಮೋದಿ ಹೇಳಿದರು.

‘ಈಶಾನ್ಯ ರಾಜ್ಯಗಳು ದೇಶದ ಪ್ರಗತಿಗೆ ಚಾಲನಾಶಕ್ತಿಯಾಗಲಿವೆ. ಈ ಹಿಂದಿನ ಸರ್ಕಾರಗಳು ಮಣಿಪುರ ಸೇರಿದಂತೆ ಇಡೀ ಈಶಾನ್ಯ ಪ್ರದೇಶವನ್ನೇ ನಿರ್ಲಕ್ಷಿಸಿದವು. ಬೆಟ್ಟಗಳಿಂದ ಕೂಡಿದ ಪ್ರದೇಶ, ಕಣಿವೆ ನಡುವೆ ಭೇದ ಸೃಷ್ಟಿಸಲು ಪಿತೂರಿ ನಡೆಸಿದವು. ಈಗ ಇಲ್ಲಿ ಉಗ್ರವಾದ, ಹಿಂಸಾಚಾರ ಕೊನೆಗೊಂಡಿದೆ. ಶಾಂತಿ–ಅಭಿವೃದ್ಧಿಗೆ ನಾವು ಕ್ರಮ ಕೈಗೊಂಡಿದ್ದೇವೆ’ ಎಂದರು.

ಇದಕ್ಕೂ ಮುನ್ನ ಅವರು, ಇಂಫಾಲ್ ಸ್ಮಾರ್ಟ್‌ ಸಿಟಿ ಮಿಷನ್‌ಗೆ ಸಂಬಂಧಿಸಿ ನಿಯಂತ್ರಣ ಕೇಂದ್ರ, ಐಟಿಐ ಕಾಲೇಜು ಹಾಗೂ 200 ಹಾಸಿಗೆಗಳ ಸಾಮರ್ಥ್ಯದ ಕೋವಿಡ್‌ ಆಸ್ಪತ್ರೆಯನ್ನು ಉದ್ಘಾಟಿಸಿದರು.

ಐದು ರಾಷ್ಟ್ರೀಯ ಹೆದ್ದಾರಿಗಳ ಯೋಜನೆಗೆ, ಮಣಿಪುರ ಪ್ರದರ್ಶಕ ಕಲೆಗಳ ಸಂಸ್ಥೆ, ಸಿಐಐಐಟಿ, ಕ್ಯಾನ್ಸರ್‌ ಆಸ್ಪತ್ರೆಗೆ ಶಂಕುಸ್ಥಾಪನೆ ನೆರವೇರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.