ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅನಿಲ್ ಅಂಬಾನಿಯ ಮಧ್ಯವರ್ತಿಯಂತೆ ವರ್ತಿಸಿ ದೇಶದ್ರೋಹವೆಸಗಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರಾಹುಲ್ ರಫೇಲ್ ಹಗರಣದ ಬಗ್ಗೆ ಹೊಸ ಸಾಕ್ಷ್ಯವೊಂದನ್ನು ಬಹಿರಂಗ ಪಡಿಸಿದ್ದಾರೆ.
ಪ್ರಧಾನಿ ಮೋದಿ 36- ಜೆಟ್ ಒಪ್ಪಂದ ಘೋಷಿಸುವುದಕ್ಕೆ 15 ದಿನಗಳ ಹಿಂದೆ ಉದ್ಯಮಿ ಅನಿಲ್ ಅಂಬಾನಿ ಫ್ರಾನ್ಸ್ ನ ರಕ್ಷಣಾ ಸಚಿವರನ್ನು ಭೇಟಿ ಮಾಡಿರುವುದರ ಬಗ್ಗೆ ಇಮೇಲ್ ದಾಖಲೆಯೊಂದನ್ನು ರಾಹುಲ್ ಸುದ್ದಿಗೋಷ್ಠಿಯಲ್ಲಿ ಬಿಡುಗಡೆ ಮಾಡಿದ್ದಾರೆ. ದೇಶದ ರಕ್ಷಣಾ ಸಚಿವರು ಮತ್ತು ವಿದೇಶಾಂಗ ಕಾರ್ಯದರ್ಶಿಗೆ ಈ ಒಪ್ಪಂದದ ಬಗ್ಗೆ ಗೊತ್ತಾಗುವ ಮುನ್ನವೇ ಅನಿಲ್ ಅಂಬಾನಿಗೆ ಈ ವಿಷಯ ತಿಳಿದಿತ್ತು.
ದೇಶದ ಭದ್ರತೆ ವಿಷಯದೊಂದಿಗೆ ಪ್ರಧಾನಿ ರಾಜಿ ಮಾಡಿಕೊಂಡಿದ್ದಾರೆ.ಬೇಹುಗಾರರು ಮಾಡುವ ಕೆಲಸವನ್ನು ಅವರು ಮಾಡಿದ್ದಾರೆ ಎಂದು ರಾಹುಲ್ ಆರೋಪಿಸಿದ್ದಾರೆ.
ಏರ್ ಬಸ್ ಉದ್ಯೋಗಿಯೊಬ್ಬರು ಕಳಿಸಿರುವಇಮೇಲ್ ಪ್ರತಿ ಇದಾಗಿದ್ದು ಅಂಬಾನಿ ಮತ್ತು ಫ್ರಾನ್ಸ್ ರಕ್ಷಣಾ ಸಚಿವರ ನಡುವಿನ ಸಭೆಯ ಮಾಹಿತಿ ಇದರಲ್ಲಿದೆ.
ಭಾರತದ ಪ್ರಧಾನಿ ಫ್ರಾನ್ಸ್ ಗೆ ಭೇಟಿ ನೀಡಿದ ನಂತರ ಒಪ್ಪಂದವೊಂದಕ್ಕೆ ಸಹಿ ಹಾಕುವುದನ್ನು ಎದುರು ನೋಡುತ್ತಿರುವುದಾಗಿ ಫ್ರಾನ್ಸ್ ರಕ್ಷಣಾ ಸಚಿವರನ್ನು ಭೇಟಿ ಮಾಡಿದ ಅನಿಲ್ ಅಂಬಾನಿ ಮೊದಲಿಗೆ ತಾನು ಕಮರ್ಷಿಯಲ್ ಹೆಲಿಕಾಪ್ಟರ್‌ಗಳನ್ನು ತಯಾರಿಸಲು ಉದ್ದೇಶಿಸಿರುವುದಾಗಿ ಹೇಳಿದ್ದಾರೆ.
ಅಧಿಕೃತ ರಹಸ್ಯಗಳ ಕಾಯ್ದೆಯ ಉಲ್ಲಂಘನೆಯಾಗಿದೆ.ಪ್ರಧಾನಿಯೊಬ್ಬರಿಗೆ ಮಾತ್ರ ಈ ವಿಷಯ ಗೊತ್ತಿದೆ. ಈ ಸಭೆಯ ನಂತರ ಅನಿಲ್ ಅಂಬಾನಿ ತಮ್ಮ ಕಂಪನಿ ಆರಂಭಿಸಿದರು.ಪ್ರಧಾನಿಯವರು ಅನಿಲ್ ಅಂಬಾನಿಯ ಮಧ್ಯವರ್ತಿಯಂತೆ ವರ್ತಿಸಿದ್ದಾರೆ. ಈ ಇಮೇಲ್ ಓದಿದರೆ ಎಲ್ಲವೂ ತಿಳಿಯುತ್ತದೆ ಎಂದಿದ್ದಾರೆ ರಾಹುಲ್.
2015ರಲ್ಲಿ ಅನಿಲ್ ಅಂಬಾನಿ ಫ್ರಾನ್ಸ್ ನ ರಕ್ಷಣಾ ಸಚಿವ ಜೀನ್- ವೈಸ್ ಲೆ ಡ್ರಿಯಾನ್ ಅವರನ್ನು ಪ್ಯಾರಿಸ್‍ನಲ್ಲಿರುವ ಕಚೇರಿಯಲ್ಲಿ ಭೇಟಿ ಮಾಡಿ ಅವರ ಹಿರಿಯ ಸಲಹೆಗಾರರೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ್ದರು ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿತ್ತು.
ಅಂಬಾನಿಯವರ ಸಭೆ ರಹಸ್ಯವಾಗಿದ್ದು, ಪೂರ್ವಯೋಜಿತವಾಗಿತ್ತು ಎಂದು ಫ್ರಾನ್ಸ್ ಅಧ್ಯಕ್ಷರ ಉದ್ಯಮ ಸಲಹೆಗಾರ ಕ್ರಿಸ್ಟೋಫಿ ಸಲೋಮೋನ್, ಯುರೋಪಿನ ರಕ್ಷಣಾ ಕಂಪನಿಯ ಹಿರಿಯ ಅಧಿಕಾರಿಯೊಬ್ಬರಿಗೆ ಹೇಳಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ತಿಳುವಳಿಕೆ ಒಪ್ಪಂದ ಪತ್ರವೊಂದು ಸಿದ್ಧವಾಗುತ್ತಿದ್ದು, ಪ್ರಧಾನಿ ಭೇಟಿ ನಂತರ ಅದಕ್ಕೆ ಸಹಿ ಹಾಕುವ ಉದ್ದೇಶವಿದೆ ಎಂದು ಅನಿಲ್ ಅಂಬಾನಿ ಹೇಳಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ಪ್ರಧಾನಿ ದೇಶದ ರಕ್ಷಣಾ ವ್ಯವಸ್ಥೆ ಜತೆ ರಾಜಿ ಮಾಡಿಕೊಂಡಿದ್ದಾರೆ. ಅವರೊಬ್ಬ ಬೇಹುಗಾರರಂತೆ ವರ್ತಿಸಿದ್ದಾರೆ.ಇವರು ಈ ದೇಶದ ಜನರಿಗೆ ಉತ್ತರ ಕೊಡಬೇಕು ಎಂದು ಒತ್ತಾಯಿಸಿದ ರಾಹುಲ್, ರಫೇಲ್ ಒಪ್ಪಂದದ ಬಗ್ಗೆ ಸಿಎಜಿವರದಿಯನ್ನು ತಳ್ಳಿದ್ದಾರೆ.
ಸಿಎಜಿ (ಮಹಾಲೇಖಪಾಲರ ವರದಿ)ಎಂಬುದು ಚೌಕೀದಾರ್ ಆಡಿಟರ್ ಜನರಲ್ ರಿಪೋರ್ಟ್ ಆಗಿದ್ದು ಅದನ್ನು ಚೌಕೀದಾರ್ ಬರೆದಿದ್ದುಚೌಕೀದಾರೇ ಆಡಿಟ್ ಮಾಡಿದ್ದಾರೆ ಎಂದು ರಾಹುಲ್ ಮೋದಿ ವಿರುದ್ಧ ಗುಡುಗಿದ್ದಾರೆ.
ಅನಿಲ್ ಅಂಬಾನಿಗೆ ಲಾಭ ಮಾಡುವ ಉದ್ದೇಶದಿಂದ ಸರ್ಕಾರ ಬಹುಮೊತ್ತದ ರಫೇಲ್ ಜೆಟ್ ಖರೀದಿಸಿದೆ.ರಫೇಲ್ ವಿಮಾನ ನಿರ್ಮಾಣ ಮಾಡುತ್ತಿರುವ ಡಸಾಲ್ಟ್ ಜತೆ ರಿಲಾಯನ್ಸ್ ಡಿಫೆನ್ಸ್ ಗೆ ಪಾಲುದಾರಿಕೆ ಹೊಂದಿದೆ.ಈ ಒಪ್ಪಂದದಿಂದಾಗಿ ಪಾಲುದಾರರಿಗೆ ಸಿಕ್ಕಿದ್ದು ₹30,000 ಕೋಟಿ ಎಂದಿದ್ದಾರೆ ರಾಹುಲ್.
ಡಸಾಲ್ಟ್ ಮತ್ತು ಅನಿಲ್ ಅಂಬಾನಿ ಕಾಂಗ್ರೆಸ್‍ನ ಈ ಆರೋಪವನ್ನು ತಳ್ಳಿ ಹಾಕಿದ್ದಾರೆ.
ರಾಹುಲ್ ಗಾಂಧಿಯ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ನೇತಾರ ವಿಜಯ್ ಖೈರಾ, ಈ ಬಗ್ಗೆ ಸರ್ಕಾರ ಉತ್ತರಿಸುತ್ತದೆ.ರಾಹುಲ್ ಅಮ್ಮ ಜಾಮೀನು ಪಡೆದು ಹೊರಬಂದಿದ್ದಾರೆ ಮತ್ತು ಆತನ ಭಾವ ವಿಚಾರಣೆಗೊಳಪಟ್ಟಿದ್ದಾರೆ. ಇದರಿಂದ ತೀವ್ರ ಹತಾಶೆಗೊಳಗಾಗ ರಾಹುಲ್ ಈ ರೀತಿ ವರ್ತಿಸುತ್ತಿದ್ದಾರೆ.ಇಲ್ಲಿವರೆಗೆ ಅವರು ಮಾಡಿದ ಆರೋಪಗಳೆಲ್ಲವೂ ಸುಳ್ಳು ಎಂದು ಸಾಬೀತಾಗಿದೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.