ADVERTISEMENT

ಶ್ರೀ ಕೃಷ್ಣ ಜನ್ಮಾಷ್ಟಮಿ: ಪ್ರಧಾನಿ ಮೋದಿ, ಸಿಎಂ ಬೊಮ್ಮಾಯಿ ಸೇರಿ ಹಲವರ ಶುಭಾಶಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಆಗಸ್ಟ್ 2022, 8:31 IST
Last Updated 19 ಆಗಸ್ಟ್ 2022, 8:31 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶದ ಹಲವು ನಾಯಕರು ಶ್ರೀಕೃಷ್ಣನ ಜನ್ಮಾಷ್ಟಮಿಗೆ ಶುಕ್ರವಾರ ಶುಭಾಶಯ ಕೋರಿದ್ದಾರೆ.

‘ಭಕ್ತಿ ಮತ್ತು ಸಂಭ್ರಮದ ಈ ಹಬ್ಬವು ಎಲ್ಲರಿಗೂ ಸಂತೋಷ, ಸಮೃದ್ಧಿ ಮತ್ತು ಅದೃಷ್ಟ ತರಲಿ’ ಎಂದು ಮೋದಿ ಟ್ವೀಟ್‌ ಮಾಡಿ ಹೇಳಿದ್ದಾರೆ.

ನಿಸ್ವಾರ್ಥ ಸೇವೆ ತಿಳಿಸುವ ಶ್ರೀಕೃಷ್ಣನ ಬದುಕು: ರಾಷ್ಟ್ರಪತಿ

ADVERTISEMENT

ನಾಡಿನ ಸಮಸ್ತ ನಾಗರಿಕರಿಗೆ ಜನ್ಮಾಷ್ಟಮಿಯ ಶುಭ ಸಂದರ್ಭದಲ್ಲಿ ಹೃತ್ಪೂರ್ವಕ ಶುಭಾಶಯಗಳು. ಜನರ ಕಲ್ಯಾಣಕ್ಕಾಗಿ ನಿಸ್ವಾರ್ಥ ಕಾರ್ಯಗಳನ್ನು ಮಾಡಲು ಶ್ರೀಕೃಷ್ಣನ ಬದುಕು ನಮಗೆ ಕಲಿಸುತ್ತದೆ. ಈ ಪವಿತ್ರ ಹಬ್ಬವು ನಮ್ಮೆಲ್ಲರಿಗೂ ಸ್ಫೂರ್ತಿ ನೀಡಲಿ ಎಂದು ನಾನು ಬಯಸುತ್ತೇನೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂದೇಶ ಹಂಚಿಕೊಂಡಿದ್ದಾರೆ.

ಬೊಮ್ಮಾಯಿ ಶುಭಾಶಯ

ಸಕಲ ಮಾನವ ಸಂಕುಲವನ್ನು ಉದ್ಧರಿಸಲೆಂದು ಶ್ರೀ ಕೃಷ್ಣ ಭೂಮಿಯ ಮೇಲೆ ಜನ್ಮ ತಾಳಿದ ಶುಭ ದಿನ ಇಂದು. ನಾಡಿನ ಸಮಸ್ತ ಜನತೆಗೆ ಶ್ರೀ ಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಭ ಕೋರಿದ್ದಾರೆ.

ನನ್ನಿಷ್ಟದ ಪಾತ್ರ ಶ್ರೀಕೃಷ್ಣ: ಸಿದ್ದರಾಮಯ್ಯ

ಪುರಾಣದ ಪಾತ್ರಗಳಲ್ಲಿ ನನ್ನಿಷ್ಟದ ಪಾತ್ರ ಶ್ರೀಕೃಷ್ಣನದ್ದು, ರಾಮಮನೋಹರ ಲೋಹಿಯಾ ಬಣ್ಣಿಸಿದಂತೆ ಕೃಷ್ಣನದ್ದು ‘ಸಮುದ್ರ ಸಮನಾದ ಸಮೃದ್ಧ ವ್ಯಕ್ತಿತ್ವ”. ಈತ ನಿಜವಾದ ದೇವತಾ ಮನುಷ್ಯ. ಶ್ರೀಕೃಷ್ಣನ ಬದುಕು ಮತ್ತು ಸಾಧನೆ, ಸುಖ, ಶಾಂತಿ, ಸಮೃದ್ಧಿಯ ನಾಡನ್ನು ಕಟ್ಟಲು ನಮ್ಮೆಲ್ಲರಿಗೂ ಪ್ರೇರಣೆಯಾಗಲಿ ಎಂದು ಕರ್ನಾಟಕ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಆಶಿಸಿದ್ದಾರೆ.

ದುಷ್ಟರನ್ನು ಶಿಕ್ಷಿಸಿ, ಶಿಷ್ಟರನ್ನು ರಕ್ಷಿಸಿದ ಜಗದೋದ್ಧಾರಕ ಕೃಷ್ಣ: ಕುಮಾರಸ್ವಾಮಿ

ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಶ್ರದ್ಧೆಭಕ್ತಿಯಿಂದ ಆಚರಿಸೋಣ. ದುಷ್ಟರನ್ನು ಶಿಕ್ಷಿಸಿ, ಶಿಷ್ಟರನ್ನು ರಕ್ಷಿಸಿದ ಜಗದೋದ್ಧಾರಕನನ್ನು ಪೂಜಿಸಿ ಪಾವನರಾಗೋಣ. ನಾಡಿನ ಸಮಸ್ತ ಜನರಿಗೂ ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ ಕುಮಾರಸ್ವಾಮಿ ಟ್ವಿಟರ್‌ನಲ್ಲಿ ಶುಭಾಶಯ ತಿಳಿಸಿದ್ದಾರೆ.

ಯಡಿಯೂರಪ್ಪ ಶುಭಕಾಮನೆ

ನಾಡಿನ ಸಮಸ್ತ ಜನತೆಗೆ ಶ್ರೀಕೃಷ್ಣ ಜನ್ಮಾಷ್ಟಮಿಯ ಭಕ್ತಿಪೂರ್ವಕ ಶುಭಕಾಮನೆಗಳು. ನಾಡಿನ ಮೇಲೆ ಶ್ರೀಕೃಷ್ಣನ ಶ್ರೀರಕ್ಷೆ, ಅನುಗ್ರಹ ನಿರಂತರವಾಗಿರಲಿ, ಎಲ್ಲರಿಗೂ ದೇವರು ಮಂಗಳವನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಶಾಸಕ ಬಿ.ಎಸ್‌ ಯಡಿಯೂರಪ್ಪ ತಿಳಿಸಿದ್ದಾರೆ.

ಹಿಂದೂ ಪಂಚಾಂಗದ ಪ್ರಕಾರ ಶ್ರೀಕೃಷ್ಣ ಈ ದಿನ ಜನಿಸಿದನೆಂದು ನಂಬಿಕೆ. ಈ ಹಿನ್ನೆಲೆಯಲ್ಲಿ ಜನ್ಮಾಷ್ಟಮಿಯನ್ನು ಆಚರಿಸಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.