ನವದೆಹಲಿ: ಸ್ವಾತಂತ್ರ್ಯಕ್ಕಾಗಿ ದುಡಿದ ಸರ್ದಾರ್ ವಲ್ಲಭಾಯಿ ಪಟೇಲ್, ಡಾ. ಬಿ.ಆರ್.ಅಂಬೇಡ್ಕರ್, ನೇತಾಜಿ ಸುಭಾಷ್ ಚಂದ್ರ ಬೋಸ್ ಸೇರಿದಂತೆ ಅನೇಕ ಮಹನೀಯರನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸಿಒಂದು ಕುಟುಂಬವನ್ನು ವೈಭವೀಕರಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ದೇಶಕ್ಕಾಗಿ ತ್ಯಾಗ, ಬಲಿದಾನ ಮಾಡಿದ ಈ ನಾಯಕರ ಇತಿಹಾಸವನ್ನು ಜನರಿಗೆ ತಿಳಿಸುವ ಅಗತ್ಯವಿದೆ ಎಂದ ಮೋದಿ, ನೆಹರೂ ಹಾಗೂ ಗಾಂಧಿ ಕುಟುಂಬದ ಹೆಸರು ಪ್ರಸ್ತಾಪಿಸದೆ ವಾಗ್ದಾಳಿ ನಡೆಸಿದರು.
ಆಜಾದ್ ಹಿಂದ್ ಸರ್ಕಾರದ ಘೋಷಣೆಯ 75ನೇ ವಾರ್ಷಿಕೋತ್ಸವದ ನೆನಪಿಗಾಗಿ ದೆಹಲಿಯ ಕೆಂಪು ಕೋಟೆ ಮೇಲೆ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಆಜಾದ್ ಹಿಂದ್ ಫೌಜ್‌ನ ಟೊಪ್ಪಿಗೆ ಧರಿಸಿ ಬಂದಿದ್ದ ಪ್ರಧಾನಿ ಎಲ್ಲರ ಗಮನ ಸೆಳೆದರು.
ಆಗಸ್ಟ್ 15ರಂದು ಮಾತ್ರ ಪ್ರಧಾನಿ ಕೆಂಪು ಕೋಟೆ ಮೇಲೆ ಧ್ವಜಾರೋಹಣ ಮಾಡುವುದು ನಡೆದುಕೊಂಡು ಬಂದಿರುವ ಸಂಪ್ರದಾಯ.
ಆಜಾದ್ ಹಿಂದ್ ಫೌಜ್ ವಿಚಾರಣೆ ಎದುರಿಸಿದ್ದ ಕೆಂಪು ಕೋಟೆಯ ಬ್ಯಾರಕ್ ಸಂಖ್ಯೆ 3ರ ಸಮೀಪ ಈ ಬಗೆಗಿನ ಮಾಹಿತಿ ಇರುವ ಫಲಕ ಅಳವಡಿಸಲಾಗಿದೆ. ಮ್ಯೂಸಿಯಂ ಸಹ ಇದೇ ಬ್ಯಾರಕ್‌ನಲ್ಲಿದೆ.
ಸ್ವಾತಂತ್ರ್ಯದ ನಂತರ ಭಾರತದ ನೀತಿಗಳು ಬ್ರಿಟಿಷ್ ವ್ಯವಸ್ಥೆಯನ್ನೇ ಅನುಸರಿಸಿ, ‘ಬ್ರಿಟಿಷ್ ಕನ್ನಡಕ’ಗಳ ಮೂಲಕ ನೋಡಲಾಯಿತು. ಇಂಥ ನೀತಿಗಳಿಂದ ಶಿಕ್ಷಣ ಕ್ಷೇತ್ರ ಸಹ ಹಿನ್ನಡೆ ಅನುಭವಿಸಬೇಕಾಯಿತುಎಂದು ಪ್ರಧಾನಿ ಟೀಕಿಸಿದರು.
ಬೋಸ್ ಅವರು ಯಾವಾಗಲೂ ಭಾರತದ ಇತಿಹಾಸ ಮತ್ತು ಶ್ರೀಮಂತ ಮೌಲ್ಯಗಳಲ್ಲಿ ಹೆಮ್ಮೆ ಪಡುತ್ತಿದ್ದರು ಎಂದು ಅವರು ಹೇಳಿದರು.
ಇತಿಹಾಸ ತಿರುಚುವ ಯತ್ನ: ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ಭಾರತದ ಇತಿಹಾಸವನ್ನು ತಿರುಚಿ ಬರೆಯಲು ಹವಣಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಇತಿಹಾಸ ತಿರುಚುವ ಯತ್ನ: ಕಾಂಗ್ರೆಸ್ ಆರೋಪ
ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ಭಾರತದ ಇತಿಹಾಸವನ್ನು ತಿರುಚಿ ಬರೆಯಲು ಹವಣಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಧರ್ಮಾಂಧತೆ ಮತ್ತು ಕೋಮುಭಾವನೆ ಆರ್‌ಎಸ್‌ಎಸ್ ಮತ್ತು ಹಿಂದೂ ಮಹಾಸಭಾದ ಸಿದ್ಧಾಂತಗಳನ್ನು ನೇತಾಜಿ ಸುಭಾಸಚಂದ್ರ ಬೋಸ್ ಮತ್ತು ಸರ್ದಾರ್ ಪಟೇಲ್ ಎಂದಿಗೂ ಒಪ್ಪಿರಲಿಲ್ಲ ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ.
ಉಗ್ರವಾದ ಮತ್ತು ವಾಮಮಾರ್ಗಗಳಲ್ಲಿಕಾಂಗ್ರೆಸ್ ಎಂದಿಗೂ ನಂಬಿಕೆ ಇಟ್ಟಿಲ್ಲ ಎಂದು ಕಾಂಗ್ರೆಸ್ ವಕ್ತಾರ ಅಭಿಷೇಕ್ ಮನು ಸಿಂಘ್ವಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.