ಯವತ್ಮಾಲ:ಪುಲ್ವಾಮದಲ್ಲಿ ಹುತಾತ್ಮರಾದ ಯೋಧರಿಗೆ ನಮನ ಸಲ್ಲಿಸುತ್ತೇನೆ. ಯೋಧರ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ. ಉಗ್ರರಿಗೆ ತಕ್ಕ ಶಾಸ್ತಿ ಮಾಡುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತೆ ಎಚ್ಚರಿಕೆ ಸಂದೇಶ ರವಾನಿಸಿದರು.
ಮಹಾರಾಷ್ಟ್ರದ ಯವತ್ಮಾಲದಲ್ಲಿ ಶನಿವಾರ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಪುಲ್ವಾಮದಲ್ಲಿ ಯೋಧರು ಹುತಾತ್ಮರಾಗಿರುವುದಕ್ಕೆ ಎಲ್ಲರೂ ಎಷ್ಟು ನೋವು ಅನುಭವಿಸಿದ್ದೀರಿ ಹಾಗೂ ನಿಮ್ಮ ನೋವು, ಆಕ್ರೋಶ, ಅಸಮಾಧಾನ ಏನೆಂಬುದು ನಮಗೆ ಅರ್ಥವಾಗಿದೆ ಎಂದು ಹೇಳಿದರು.
ಘಟನೆಯಲ್ಲಿ ಮಹಾರಾಷ್ಟ್ರದ ಇಬ್ಬರು ಯೋಧರು ಪುಲ್ವಾಮ ದಾಳಿಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಅವರ ತ್ಯಾಗ ವ್ಯರ್ಥವಾಗಲು ಬಿಡುವುದಿಲ್ಲ. ಯೋಧರ ಕುಟುಂಬದ ಜತೆಗೆ ನಾವಿದ್ದೇವೆ ಎಂದರು.
ಭಯೋತ್ಪಾದಕರು ಘೋರ ಅಪರಾದ ಎಸಗಿದ್ದಾರೆ. ಭಯೋತ್ಪಾದಕರು ಮತ್ತವರ ಸಂಘಟನೆಗಳನ್ನು ರಕ್ಷಿಸುತ್ತಿರುವವರನ್ನೂ ಶಿಕ್ಷಿಸುತ್ತೇವೆ. ಭದ್ರತಾ ಪಡೆಗೆ ಪೂರ್ಣ ಸ್ವಾತಂತ್ರ್ಯ ನೀಡಿದ್ದೇವೆ ಎಂದರು.
ದೇಶದ ಭದ್ರತೆಯ ಜೊತೆಗೆ ನಮ್ಮ ಸರ್ಕಾರವು ದೇಶದ ಸಮೃದ್ಧಿಗೆ ಸಂಪೂರ್ಣವಾಗಿ ಬದ್ಧವಾಗಿದೆ. ಅದಕ್ಕಾಗಿಯೇ ಅಭಿವೃದ್ಧಿಯ ಪಂಚ ಮಂತ್ರಗಳಾದ ಮಕ್ಕಳ ಶಿಕ್ಷಣ, ಯುವ ಜನರ ಆದಾಯ, ವೃದ್ಧರಿಗೆ ಔಷಧಿಗಳು, ರೈತ ಮತ್ತು ನೀರಾವರಿ ಯೋಜನೆಗಳಿಗೆ ಒತ್ತು ನೀಡಿದ್ದೇವೆ ಎಂದರು.
* ಇವನ್ನೂ ಓದಿ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.