ನವದೆಹಲಿ: ದೇಶದಾದ್ಯಂತ ರೈತರ ಹೋರಾಟ, ಪ್ರತಿಭಟನೆಗಳನ್ನು ಎದುರಿಸಿರುವ ಕೇಂದ್ರ ಸರ್ಕಾರದ ಮೂರೂ ಕೃಷಿ ಕಾಯ್ದೆಗಳನ್ನು ರದ್ದುಪಡಿಸಲು ನಿರ್ಧರಿಸಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಇಂದು ಘೋಷಿಸಿದರು. ಸುಮಾರು ಒಂದು ವರ್ಷದಿಂದ ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ದೆಹಲಿಯ ಗಡಿ ಭಾಗಗಳಲ್ಲಿ ಹೋರಾಟ ನಡೆಸುತ್ತಿದ್ದಾರೆ.
ದೇಶವನ್ನು ಉದ್ದೇಶಿಸಿ ಮಾತನಾಡಿದಪ್ರಧಾನಿ ನರೇಂದ್ರ ಮೋದಿ, 2 ಹೆಕ್ಟೇರ್‌ಗಿಂತ ಅಧಿಕ ಭೂಮಿ ಇಲ್ಲದ ಸಣ್ಣ ರೈತರ ಒಳಿತಿಗಾಗಿ ಸರ್ಕಾರ ಶ್ರಮಿಸಿದೆ ಎಂದು ಹೇಳಿದರು.
‘ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯಲು ನಿರ್ಧರಿಸಿರುವುದಾಗಿ ನಾನು ಎಲ್ಲರಿಗೂ ಹೇಳಲು ಬಯಸುತ್ತೇನೆ. ಎರಡು ಹೆಕ್ಟೇರ್‌ಗಿಂತಲೂ ಹೆಚ್ಚು ಭೂಮಿ ಇಲ್ಲದ ಸಣ್ಣ ರೈತರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಸರ್ಕಾರ ಶ್ರಮಿಸಿತ್ತು’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಕಠಿಣ ಸಂದರ್ಭಗಳಲ್ಲಿ ರೈತರಿಗೆ ಸೂಕ್ತ ಪ್ರಮಾಣದ ಪರಿಹಾರ ಸಿಗುವಂತೆ ಮಾಡಲು ಹಳೆಯ ನಿಯಮಗಳಲ್ಲಿ ಬದಲಾವಣೆ ಮಾಡಿದ್ದೆವು. ಸಣ್ಣ ರೈತರಿಗೆ ₹ 1 ಲಕ್ಷ ಕೋಟಿಗೂ ಅಧಿಕ ಪರಿಹಾರ ವಿತರಣೆ ಮಾಡಿದ್ದೇವೆ. ಅವರಿಗೆ ಆರೋಗ್ಯ ಮತ್ತು ವಿಮೆ ಸೌಲಭ್ಯ ಒದಗಿಸಿದ್ದೇವೆ. ₹ 1.62 ಲಕ್ಷ ಕೋಟಿ ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗಳಿಗೆ ಹಾಕಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಧಾನಿ ಮೋದಿ ಭಾಷಣದ ವಿಡಿಯೊ:
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.