ADVERTISEMENT

ದೇಶದ ಜನರಿಗೀಗ 'ಮೇಡ್‌ ಇನ್‌ ಇಂಡಿಯಾ' ಶಕ್ತಿಯ ಅನುಭವವಾಗಿದೆ: ಪ್ರಧಾನಿ ಮೋದಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಅಕ್ಟೋಬರ್ 2021, 5:41 IST
Last Updated 22 ಅಕ್ಟೋಬರ್ 2021, 5:41 IST
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ   

ನವದೆಹಲಿ: ಭಾರತವು ಗುರುವಾರ 100 ಕೋಟಿ ಕೋವಿಡ್‌–19 ಲಸಿಕೆ ಡೋಸ್‌ಗಳ ದಾಖಲೆಯ ಹಂತವನ್ನು ದಾಟಿದ್ದು, ಅದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದರು.

'ಕಳೆದ ದೀಪಾವಳಿ ವೇಳೆ ಆತಂಕವಿತ್ತು, ಈ ದೀಪಾವಳಿ ವೇಳೆಗೆ ನಮ್ಮೊಂದಿಗೆ 100 ಕೋಟಿ ಕೋವಿಡ್‌–19 ಲಸಿಕೆ ಡೋಸ್‌ಗಳ ವಿಶ್ವಾಸವಿದೆ. ನಾವು ಹಿಂದೆ ವಿದೇಶಗಳ ಉತ್ಪನ್ನಗಳ ಬಗೆಗೆ ಆಕರ್ಷಿತರಾಗುತ್ತಿದ್ದೆವು. ಆದರೆ, ಈಗ ದೇಶೀಯವಾಗಿ ಸಾಕಷ್ಟು ಉತ್ತಮ ತಯಾರಿಕೆ ನಡೆಯುತ್ತಿದೆ. ಎಲ್ಲರೂ ದೇಶೀಯ ವಸ್ತುಗಳನ್ನು ಖರೀದಿಸಿ, ಅದರಿಂದ ಸಣ್ಣ ಸಣ್ಣ ವ್ಯಾಪಾರಿಗಳು, ಉದ್ಯಮಿಗಳಿಗೆ ಸಹಾಯವಾಗುತ್ತದೆ' ಎಂದು ಪ್ರಧಾನಿ ಮೋದಿ ಕರೆ ನೀಡಿದರು.

ಈಗ ಎಲ್ಲ ನಾಗರಿಕರು 'ಮೇಡ್‌ ಇನ್‌ ಇಂಡಿಯಾದ' ಸಾಮರ್ಥ್ಯವನ್ನು ಕಾಣುತ್ತಿದ್ದಾರೆ. ಸ್ವಚ್ಛ ಭಾರತದ ರೀತಿಯಲ್ಲಿ ಮೇಡ್‌ ಇನ್‌ ಇಂಡಿಯಾ ಸಹ ರಾಷ್ಟ್ರೀಯ ಅಭಿಯಾನವಾಗಬೇಕು ಎಂದು ಹೇಳಿದರು.

ADVERTISEMENT

'ಕೊರೊನಾ ವೈರಸ್‌ ಸಾಂಕ್ರಾಮಿಕದ ವಿರುದ್ಧ 100 ಕೋಟಿ ಲಸಿಕೆ ಎಂಬುದು ಕೇವಲ ಲೆಕ್ಕಾಚಾರವಲ್ಲ, ಅದು ಹೊಸ ಭಾರತದ ಹೆಗ್ಗುರುತು. ನಾವು ಅತ್ಯಂತ ಕಠಿಣ ಗುರಿಯನ್ನು ತಲುಪಿದ್ದೇವೆ, ಅದು ಅಸಾಮಾನ್ಯವಾದುದು' ಎಂದರು.

'ಕಳೆದ ವರ್ಷ ಭಾರತೀಯರು ತಟ್ಟೆಗಳನ್ನು ಬಡಿದು ದೀಪಗಳನ್ನು ಹಚ್ಚಿದರ ಬಗ್ಗೆ ಹಲವು ಮಂದಿ ವ್ಯಂಗ್ಯವಾಡಿದರು. ಆದರೆ, ಅದು ಭಾರತದ ಒಗ್ಗಟ್ಟನ್ನು ಸಾರುವ ಸಂದರ್ಭವಾಗಿತ್ತು' ಎಂದು ಸಮರ್ಥಿಸಿಕೊಂಡರು.

ಭಾರತದ ಲಸಿಕೆ ಯೋಜನೆಯು ವಿಜ್ಞಾನ ಮತ್ತು ವೈಜ್ಞಾನಿಕ ಮಾರ್ಗದಲ್ಲಿಯೇ ಮುಂದುವರಿದಿದೆ ಎಂದು ಪ್ರಧಾನಿ ಹೇಳಿದರು.

'ಕೋವಿಡ್‌ ಲಸಿಕೆ ಅಭಿಯಾನಕ್ಕೆ ವಿಐಪಿ ಸಂಸ್ಕೃತಿಯಿಂದ ತೊಡಕು ಆಗುವುದಿಲ್ಲ. ಯಾವುದೇ ಫಲಾನುಭವಿ, ಅವರ ಅಂತಸ್ತು ಮತ್ತು ಸಂಪತ್ತಿನ ಗಣನೆಯಿಲ್ಲದೆ ಭಾರತದ ಎಲ್ಲ ನಾಗರಿಕರಂತೆ ಸಮಾನ ರೀತಿಯಲ್ಲಿ ಲಸಿಕೆ ಹಾಕಿಸಿಕೊಳ್ಳಲು ಅರ್ಹರಾಗಿರುತ್ತಾರೆ' ಎಂದು ಸ್ಪಷ್ಟಪಡಿಸಿದರು.

ನಿನ್ನೆ ಪ್ರಧಾನಿ ರಾಮ ಮನೋಹರ್‌ ಲೋಹಿಯಾ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಯೊಂದಿಗೆ ಸಂವಾದ ನಡೆಸಿದರು. ಜಗತ್ತಿನ ಆರ್ಥಿಕತೆಯು ಮುಗ್ಗರಿಸುವಂತೆ ಮಾಡಿದ ಕೋವಿಡ್‌ ಸಾಂಕ್ರಾಮಿಕದ ವಿರುದ್ಧದ ಹೋರಾಟದಲ್ಲಿ ಆರೋಗ್ಯ ಕಾರ್ಯಕರ್ತರು ವಹಿಸಿದ ಪಾತ್ರ ನಿರ್ಣಾಯಕ ಎಂದು ಮೋದಿ ಕೊಂಡಾಡಿದರು.

ದೇಶದಲ್ಲಿ ಕಳೆದ ಕೆಲವು ದಿನಗಳಿಂದ ಕೋವಿಡ್‌–19 ದೃಢ ಪ್ರಕರಣಗಳ ಸಂಖ್ಯೆ 20,000ಕ್ಕಿಂತಲೂ ಕಡಿಮೆ ದಾಖಲಾಗುತ್ತಿದೆ. ನೂರು ಕೋಟಿ ಲಸಿಕೆ ಡೋಸ್‌ಗಳ ಬಲವಾದ ಸುರಕ್ಷಾ ಕವಚವನ್ನು ಭಾರತವು ಈಗ ಹೊಂದಿದೆ. ಇದು ಭಾರತದ ಪೌರರ ಸಾಧನೆ ಎಂದು ಪ್ರಧಾನಿ ಬಣ್ಣಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.