ADVERTISEMENT

ಅಂಪನ್ ಚಂಡಮಾರುತ: ಬಂಗಾಳಕ್ಕೆ ಸಾವಿರ, ಒಡಿಶಾಗೆ ₹ 500 ಕೋಟಿ ಪರಿಹಾರ

ಪಿಟಿಐ
Published 22 ಮೇ 2020, 17:30 IST
Last Updated 22 ಮೇ 2020, 17:30 IST
ಒಡಿಶಾದಲ್ಲಿ ಚಂಡಮಾರುತದಿಂದ ಹಾನಿಗೀಡಾಗಿರುವ ಪ್ರದೇಶಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ನವೀನ್‌ ಪಾಟ್ನಾಯಕ್‌ ಅವರೊಂದಿಗೆ ವೈಮಾನಿಕ ಸಮೀಕ್ಷೆ ನಡೆಸಿದರು.
ಒಡಿಶಾದಲ್ಲಿ ಚಂಡಮಾರುತದಿಂದ ಹಾನಿಗೀಡಾಗಿರುವ ಪ್ರದೇಶಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ನವೀನ್‌ ಪಾಟ್ನಾಯಕ್‌ ಅವರೊಂದಿಗೆ ವೈಮಾನಿಕ ಸಮೀಕ್ಷೆ ನಡೆಸಿದರು.    

ಕೋಲ್ಕತ್ತ/ಭುವನೇಶ್ವರ : ಅಂಪನ್ ಚಂಡಮಾರುತದ ಅಬ್ಬರಕ್ಕೆ ತತ್ತರಿಸಿರುವ ಪಶ್ಚಿಮ ಬಂಗಾಳಕ್ಕೆ ₹ 1,000 ಕೋಟಿ ಮತ್ತು ಒಡಿಶಾಗೆ ₹ 500 ಕೋಟಿ ಮೊತ್ತದ ಮುಂಗಡ ಪರಿಹಾರವನ್ನು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.

ಪ್ರಧಾನಿ ಮೋದಿ ಅವರು ಶುಕ್ರವಾರ ಬೆಳಿಗ್ಗೆ ಪಶ್ಚಿಮ ಬಂಗಾಳದಲ್ಲಿ ಚಂಡಮಾರುತ ಪೀಡಿತ ಉತ್ತರ ಮತ್ತು ದಕ್ಷಿಣ 24 ಪರಗಣ ಜಿಲ್ಲೆಗಳು, ಪೂರ್ವ ಮತ್ತು ಪಶ್ಚಿಮ ಮಿಡ್ನಾಪುರ ಜಿಲ್ಲೆ, ಹೌರಾ, ಕೋಲ್ಕತ್ತ ಮತ್ತು ಹೂಗ್ಲಿ ಜಿಲ್ಲೆಗಳ ವೈಮಾನಿಕ ಸಮೀಕ್ಷೆ ನಡೆಸಿದರು. ರಾಜ್ಯದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ರಾಜ್ಯಪಾಲ ಜಗದೀಪ್ ಧನಕರ್ ಸಹ ವೈಮಾನಿಕ ಸಮೀಕ್ಷೆಯಲ್ಲಿ ಭಾಗವಹಿಸಿದ್ದರು.

ಮನೆಗಳು, ಕೃಷಿ ಜಮೀನು, ವಿದ್ಯುತ್ ಮತ್ತು ಇತರ ವಲಯಗಳಲ್ಲಿ ಆಗಿರುವ ಹಾನಿಯ ಬಗ್ಗೆ ವಿವರಣಾತ್ಮಕ ಸಮೀಕ್ಷೆ ನಡೆಸಲಾಗುತ್ತದೆ. ಇದಕ್ಕಾಗಿ ಕೇಂದ್ರವು ರಾಜ್ಯ ಸರ್ಕಾರಕ್ಕೆ ನೆರವು ನೀಡುತ್ತದೆ ಎಂದು ಮೋದಿ ಭರವಸೆ ನೀಡಿದರು.

ADVERTISEMENT

ಪಶ್ಚಿಮ ಬಂಗಾಳದ ನಂತರ ಒಡಿಶಾಗೆ ಭೇಟಿ ನೀಡಿದ ಪ್ರಧಾನಿ ಮೋದಿ, ಚಂಡಮಾರುತ ಪೀಡಿತ ಜಿಲ್ಲೆಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದರು. ಆನಂತರ ಬಿಜು ಪಟ್ನಾಯಕ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಭೆ ನಡೆಸಿದರು. ರಾಜ್ಯದಲ್ಲಿ ಚಂಡಮಾರುತದಿಂದ ಆಗಿರುವ ಹಾನಿಯ ಬಗ್ಗೆ ವಿವರಣಾತ್ಮಕ ಸಮೀಕ್ಷೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.‌

‘ಒಡಿಶಾದಲ್ಲಿ ಚಂಡಮಾರುತ ಪೀಡಿತ ಪ್ರದೇಶಗಳಲ್ಲಿ ಇರುವವರಿಗೆ ಶಾಶ್ವತವಾಗಿ ಬೇರೆಡೆ ವಸತಿ ಕಲ್ಪಿಸಬೇಕಿದೆ. ಇದಕ್ಕಾಗಿ ರಾಜ್ಯ ಸರ್ಕಾರಕ್ಕೆ ಕೇಂದ್ರವು ನೆರವು ನೀಡಲಿದೆ’ ಎಂದು ಭರವಸೆ ನೀಡಿದರು.

₹ 2 ಲಕ್ಷ -ಪಶ್ಚಿಮ ಬಂಗಾಳದಲ್ಲಿ ಅಂಫನ್‌ಗೆ ಬಲಿಯಾದವರಿಗೆ ಕೇಂದ್ರದ ಪರಿಹಾರ

₹ 50,000 -ಪಶ್ಚಿಮ ಬಂಗಾಳದಲ್ಲಿ ಅಂಫನ್‌ ಅಬ್ಬರದಲ್ಲಿ ಗಾಯಗೊಂಡವರಿಗೆ ಕೇಂದ್ರದ ಪರಿಹಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.