ನವದೆಹಲಿ: ರೈತರಿಗೆ ಅನುಕೂಲವಾಗುವ ದೃಷ್ಟಿಯಿಂದ ಈ ಮೂರೂ ಕೃಷಿ ಕಾಯ್ದೆಗಳನ್ನು ಜಾರಿಗೆ ತರಲಾಗಿತ್ತು. ಆದರೆ, ಒಂದು ವರ್ಗದ ರೈತರ ಮನವೊಲಿಸಲು ಸಾಧ್ಯವಾಗಲಿಲ್ಲ. ಹೀಗಾಗಿ, ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ನಿರ್ಧಾರ ಕೈಗೊಳ್ಳಬೇಕಾಯಿತು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ದೇಶವನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಮೂರೂ ಕೃಷಿ ಕಾಯ್ದೆಗಳ ಉದ್ದೇಶ ರೈತರನ್ನು ಸಬಲೀಕರಣಗೊಳಿಸುವುದೇ ಆಗಿತ್ತು. ಅದರಲ್ಲೂ ಸಣ್ಣ ರೈತರಿಗೆ ಅನುಕೂಲಮಾಡಿಕೊಡುವುದು ನಮ್ಮ ಉದ್ದೇಶವಾಗಿತ್ತು. ‘ನಮ್ಮ ಅವಿರತ ಪ್ರಯತ್ನದ ಹೊರತಾಗಿಯೂ ಒಂದು ವರ್ಗದ ರೈತರ ಮನವೊಲಿಸಲು ಸಾಧ್ಯವಾಗಲಿಲ್ಲ’ಎಂದು ಮೋದಿ ಹೇಳಿದ್ದಾರೆ.
‘ನಮ್ಮ ರೈತ ಮಿತ್ರರಿಗೆ ಕೃಷಿ ಕಾಯ್ದೆಗಳ ಅನುಕೂಲದ ಬಗ್ಗೆ ವಿವರಿಸುವಲ್ಲಿ ನಮ್ಮ ಪ್ರಯತ್ನ ಸಾಕಾಗಲಿಲ್ಲವೇನೋ ಅನಿಸುತ್ತಿದೆ’ಎಂದಿದ್ದಾರೆ.
‘ಮೂರೂ ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ನಿರ್ಧಾರ ಘೋಷಣೆಗಾಗಿ ನಾನು ಬಂದಿದ್ದೇನೆ. ಈ ತಿಂಗಳಾಂತ್ಯಕ್ಕೆ ಆರಂಭವಾಗಲಿರುವ ಸಂಸತ್ತಿನ ಅಧಿವೇಶನದಲ್ಲಿ ಕಾಯ್ದೆಗಳನ್ನು ಹಿಂಪಡೆಯಲು ಬೇಕಾದ ಸಾಂವಿಧಾನಿಕ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುತ್ತೇವೆ’ಎಂದು ತಿಳಿಸಿದರು.
‘ಗುರು ಪುರಬ್‌ನ ಈ ಶುಭದಿನದಂದು ಪ್ರತಿಭಟನೆ ಕೈಬಿಟ್ಟು ತಮ್ಮ ಮನೆಗಳಿಗೆ ತೆರಳಿ ಕೃಷಿ ಚಟುವಟಿಕೆಗಳನ್ನು ಮುಂದುವರಿಸಿ. ಹೊಸ ದಿನವನ್ನು ಆರಂಭಿಸಿ ಎಂದು ನನ್ನ ರೈತ ಮಿತ್ರರಿಗೆ ಮನವಿ ಮಾಡುತ್ತೇನೆ’ ಎಂದು ಮೋದಿ ಹೇಳಿದರು.
ಇದೇವೇಳೆ, ಕೃಷಿ ಬಜೆಟ್ ಅನ್ನು ಐದು ಪಟ್ಟು ಹೆಚ್ಚಳ ಮಾಡಿ ₹ 1.25 ಲಕ್ಷ ಕೋಟಿಗೆ ಏರಿಸಿರುವ ಕ್ರಮ ಸೇರಿ ರೈತರ ಕಲ್ಯಾಣಕ್ಕಾಗಿ ಘೋಷಿಸಲಾದ ಯೋಜನೆಗಳನ್ನು ಮೋದಿ ವಿವರಿಸಿದರು.
ತಮ್ಮ ಐದು ದಶಕಗಳ ಸಾರ್ವಜನಿಕ ಜೀವನದಲ್ಲಿ ರೈತರು ಎದುರಿಸುತ್ತಿರುವ ಸವಾಲುಗಳನ್ನು ತೀರಾ ಹತ್ತಿರದಿಂದ ಕಂಡಿದ್ದೇನೆ. 2014ರಲ್ಲಿ ‘ಪ್ರಧಾನ ಸೇವಕ’ನಾಗಿ ಸೇವೆ ಸಲ್ಲಿಸಲು ದೇಶದ ಜನರು ಅವಕಾಶ ಕೊಟ್ಟ ಬಳಿಕ ಕೃಷಿ ಅಭಿವೃದ್ಧಿ ಮತ್ತು ರೈತರ ಕಲ್ಯಾಣಕ್ಕೆ ಪ್ರಥಮ ಆದ್ಯತೆ ನೀಡಿದ್ದಾಗಿ ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.