ADVERTISEMENT

Independence Day: ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ ಸ್ಮರಿಸಿದ ಮೋದಿ

ಪಿಟಿಐ
Published 15 ಆಗಸ್ಟ್ 2024, 2:36 IST
Last Updated 15 ಆಗಸ್ಟ್ 2024, 2:36 IST
<div class="paragraphs"><p>ನರೇಂದ್ರ ಮೋದಿ</p></div>

ನರೇಂದ್ರ ಮೋದಿ

   

(ಚಿತ್ರ ಕೃಪೆ: X/ನರೇಂದ್ರ ಮೋದಿ)

ನವದೆಹಲಿ: ದೇಶದೆಲ್ಲೆಡೆ ಸಂಭ್ರಮದ 78ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಗುತ್ತಿದ್ದು, ರಾಜಧಾನಿಯಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸಿದ್ದಾರೆ.

ADVERTISEMENT

ಬಳಿಕ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶದ ಜನತೆಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ಕೋರಿದರು.

'ಸ್ವಾತಂತ್ರ್ಯ ಹೋರಾಟಗಾರರಿಗೆ ದೇಶ ಎಂದು ಚಿರಋಣಿಯಾಗಿದ್ದು, ಅವರ ತ್ಯಾಗ, ಬಲಿದಾನವನ್ನು ಸ್ಮರಿಸುವ ದಿನ ಇದಾಗಿದೆ' ಎಂದು ಹೇಳಿದ್ದಾರೆ.

'ವಯನಾಡ್ ಸೇರಿದಂತೆ ನೈಸರ್ಗಿಕ ವಿಕೋಪಗಳ ಕುರಿತು ಉಲ್ಲೇಖ ಮಾಡಿರುವ ಪ್ರಧಾನಿ ಮೋದಿ, ಸಂತ್ರಸ್ತರ ಕುಟುಂಬಗಳಿಗೆ ನನ್ನ ಸಂತಾಪಗಳನ್ನು ವ್ಯಕ್ತಪಡಿಸುತ್ತೇನೆ' ಎಂದು ಹೇಳಿದ್ದಾರೆ.

'2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ದೇಶವನ್ನಾಗಿ ಮಾಡುವ ನಮ್ಮ ಸಂಕಲ್ಪಕ್ಕೆ ಬದ್ಧರಾಗಿದ್ದೇವೆ' ಎಂದು ಅವರು ತಿಳಿಸಿದ್ದಾರೆ.

'ವಿಕಸಿತ ಭಾರತ ಕೇವಲ ಒಂದು ಪದವಲ್ಲ. 140 ಕೋಟಿ ಭಾರತೀಯರ ಸಂಕಲ್ಪ ಮತ್ತು ಕನಸುಗಳ ಪ್ರತಿಬಿಂಬವಾಗಿದೆ' ಎಂದು ಅವರು ತಿಳಿಸಿದ್ದಾರೆ.

'ಜಲ ಜೀವನ್ ಮಿಷನ್ 15 ಕೋಟಿ ಫಲಾನುಭವಿಗಳನ್ನು ತಲುಪಿದೆ' ಎಂದು ಅವರು ಮಾಹಿತಿ ನೀಡಿದರು.

'ಸುಮಾರು 10 ಕೋಟಿ ಮಹಿಳೆಯರು ಸ್ವಸಹಾಯ ಸಂಘಗಳಿಗೆ ಸೇರ್ಪಡೆಯಾಗಿದ್ದಾರೆ. ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗುತ್ತಿರುವುದನ್ನು ನೋಡಿ ನಾವು ಹೆಮ್ಮೆಪಡುತ್ತೇವೆ' ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

'ವಿದೇಶದಲ್ಲಿ ವೈದ್ಯಕೀಯ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳು ಲಕ್ಷ-ಕೋಟಿ ಖರ್ಚು ಮಾಡುತ್ತಿದ್ದಾರೆ. ಮುಂದಿನ ಐದು ವರ್ಷಗಳಲ್ಲಿ ನಾವು 75,000 ಹೊಸ ವೈದ್ಯಕೀಯ ಸೀಟುಗಳನ್ನು ಸೃಷ್ಟಿಸುತ್ತೇವೆ' ಎಂದು ಪ್ರಧಾನಿ ಮೋದಿ ಭರವಸೆ ನೀಡಿದ್ದಾರೆ.

'ವಿದ್ಯಾರ್ಥಿಗಳು ಅಧ್ಯಯನಕ್ಕಾಗಿ ವಿದೇಶಕ್ಕೆ ಹೋಗಬಾರದಂತಹ ಶಿಕ್ಷಣ ವ್ಯವಸ್ಥೆಯನ್ನು ದೇಶದಲ್ಲಿ ರಚಿಸಲು ಬಯಸುತ್ತೇವೆ' ಎಂದು ಹೇಳಿದ್ದಾರೆ.

'ನಾವು ಬಾಹ್ಯಾಕಾಶ ಕ್ಷೇತ್ರದಲ್ಲಿ ಅನೇಕ ಸುಧಾರಣೆಗಳನ್ನು ಮಾಡಿದ್ದೇವೆ. ಹಿಂದಿನ ಹಲವು ನಿರ್ಬಂಧಗಳನ್ನು ತೆರವುಗೊಳಿಸಿದ್ದೇವೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ನೂರಾರು ಸ್ಟಾರ್ಟ್‌ಅಪ‌್‌ಗಳು ಬಂದಿವೆ. ಇದು ಭಾರತವನ್ನು ಬಲಿಷ್ಠ ರಾಷ್ಟ್ರವನ್ನಾಗಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ' ಎಂದು ಹೇಳಿದ್ದಾರೆ.

'ಚಂದ್ರಯಾನ ಅಭಿಯಾನವು ಯುವಜನತೆಯಲ್ಲಿ ವೈಜ್ಞಾನಿಕ ಮನೋಭಾವನೆಯನ್ನು ಮೂಡಿಸಿದೆ. ಶಿಕ್ಷಣ ಸಂಸ್ಥೆಗಳು ಅದನ್ನು ಇನ್ನಷ್ಟು ಬೆಳೆಸಬೇಕು' ಎಂದು ಹೇಳಿದ್ದಾರೆ.

'ಕಳೆದ ಹತ್ತು ವರ್ಷಗಳಲ್ಲಿ ದೇಶದಲ್ಲಿ ಮೂಲಸೌಕರ್ಯಗಳನ್ನು ಹೆಚ್ಚಿಸಿಲು ನಾವು ಮಹತ್ತರ ಕ್ರಮ ಕೈಗೊಂಡಿದ್ದೇವೆ' ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

'2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲು ನಾಗರಿಕರು ಸಲಹೆಗಳನ್ನು ನೀಡುತ್ತಿದ್ದಾರೆ' ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

'ಮಹಿಳೆಯರ ಮೇಲಿನ ಅಪರಾಧಗಳ ತ್ವರಿತ ತನಿಖೆಯಾಗಬೇಕು. ಇಂತಹ ಹೇಯ ಕೃತ್ಯ ಎಸಗುವವರಿಗೆ ಕಠಿಣ ಶಿಕ್ಷೆಯಾಗಬೇಕು' ಎಂದು ಅವರು ಹೇಳಿದ್ದಾರೆ.

'ಜಿ20 ಪ್ಯಾರಿಸ್ ಒಪ್ಪಂದದ ಅಡಿಯಲ್ಲಿ ನಿಗಿದಿತ ಅವಧಿಗಿಂತಲೂ ಮುಂಚಿತವಾಗಿ ಹವಾಮಾನ ಗುರಿ ಸಾಧಿಸಿದ ಏಕೈಕ ರಾಷ್ಟ್ರ ಭಾರತ ಆಗಿದೆ' ಎಂದು ಪ್ರತಿಪಾದಿಸಿದ್ದಾರೆ.

'ಬಾಂಗ್ಲಾದೇಶದಲ್ಲಿ ಬಿಕ್ಕಟ್ಟು ಎದುರಾಗಿದ್ದು, ಪರಿಸ್ಥಿತಿ ಸುಧಾರಿಸುವ ನಿರೀಕ್ಷೆಯಿದೆ. ಭಾರತ ಯಾವಾಗಲೂ ಬಾಂಗ್ಲಾದ ಅಭಿವೃದ್ಧಿಗೆ ಬೆಂಬಲ ನೀಡುತ್ತದೆ' ಎಂದು ಹೇಳಿದ್ದಾರೆ.

ಪದೇ ಪದೇ ನಡೆಯುತ್ತಿರುವ ಚುನಾವಣೆಗಳು ದೇಶದ ಪ್ರಗತಿಗೆ ಅಡತೆಗಳನ್ನು ಸೃಷ್ಟಿಸುತ್ತಿವೆ. ಎಲ್ಲಾದರೂ ಒಂದು ಕಡೆ ಮೂರರಿಂದ ಆರು ತಿಂಗಳಿಗೊಮ್ಮೆಚುನಾವಣೆ ನಡೆಯುತ್ತಿರುತ್ತವೆ. 'ಒಂದು ದೇಶ, ಒಂದು ಚುನಾವಣೆ' ನನಸಾಗಿಸಲು ನಾವೆಲ್ಲರೂ ಮುಂದೆ ಬರಬೇಕಿದೆ ಎಂದು ಪ್ರತಿಪಾದಿಸಿದ್ದಾರೆ.

ನಾವು ಕಳೆದ 75 ವರ್ಷಗಳಿಂದ ಕೋಮು ನಾಗರಿಕ ಸಂಹಿತೆಯಿಂದ ಬದುಕಿದ್ದೇವೆ. ಈಗ ದೇಶವು 'ಜಾತ್ಯತೀತ ನಾಗರಿಕ ಸಂಹಿತೆ'ಯನ್ನು ಹೊಂದುವುದು ಅಗತ್ಯವಾಗಿದೆ. ಆಗ ಮಾತ್ರ ಧರ್ಮ ಆಧಾರಿತ ತಾರತಮ್ಯ ಕೊನೆಗೊಳ್ಳುತ್ತದೆ ಎಂದು ಅವರು ಹೇಳಿದ್ದಾರೆ.

ಕೆಂಪುಕೋಟೆಗೆ ತೆರಳುವ ಮುನ್ನ ರಾಷ್ಟ್ರಪಿತ ಮಹಾತ್ಮಗಾಂಧಿ ಸ್ಮಾರಕಕ್ಕೆ ಪ್ರಧಾನಿ ಮೋದಿ ಅವರು ಗೌರವ ನಮನ ಸಲ್ಲಿಸಿದರು.

ಸತತ 11ನೇ ಸಲ ಧ್ವಜಾರೋಹಣ...

ಪ್ರಧಾನಿ ನರೇಂದ್ರ ಮೋದಿ ಅವರು ಸತತ 11ನೇ ಬಾರಿಗೆ ಈ ಗೌರವಕ್ಕೆ ಪಾತ್ರರಾಗಿದ್ದಾರೆ. ಈ ಹಿಂದೆ ಮನಮೋಹನ್‌ ಸಿಂಗ್ ಅವರು ಸತತ 10 ಬಾರಿ ರಾಷ್ಟ್ರಧ್ವಜಾರೋಹಣ ಮಾಡಿದ್ದರು. ದೇಶದ ಪ್ರಥಮ ಪ್ರಧಾನಿ ಜವಾಹರಲಾಲ್‌ ನೆಹರೂ ಅವರು 17 ಬಾರಿ ಹಾಗೂ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರು 16 ಬಾರಿ ರಾಷ್ಟ್ರಧ್ವಜಾರೋಹಣ ನೆರವೇರಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.