ADVERTISEMENT

16ನೇ ಬ್ರಿಕ್ಸ್ ಶೃಂಗಸಭೆ: ರಷ್ಯಾಕ್ಕೆ ತೆರಳಿದ ಪ್ರಧಾನಿ ನರೇಂದ್ರ ಮೋದಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಅಕ್ಟೋಬರ್ 2024, 3:15 IST
Last Updated 22 ಅಕ್ಟೋಬರ್ 2024, 3:15 IST
<div class="paragraphs"><p>ನರೇಂದ್ರ ಮೋದಿ</p></div>

ನರೇಂದ್ರ ಮೋದಿ

   

ನವದೆಹಲಿ: 16ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಮಂಗಳವಾರ) ರಷ್ಯಾಕ್ಕೆ ತೆರಳಿದ್ದಾರೆ.

ರಷ್ಯಾದ ಕಜಾನ ನಗರದಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ನೇತೃತ್ವದಲ್ಲಿ ‘ಬ್ರಿಕ್ಸ್‌’ ಶೃಂಗಸಭೆ ನಡೆಯಲಿದೆ. ಈ ಸಮಾವೇಶದಲ್ಲಿ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌, ಭಾರತದ ಪ್ರಧಾನಿ ನರೇಂದ್ರ ಮೋದಿ, ಟರ್ಕಿಯ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೋಗನ್, ಇರಾನ್‌ನ ಅಧ್ಯಕ್ಷ ಡಾ.ಮಸೂದ್‌ ಪೆಜೆಶ್ಕಿಯಾನ್‌ ಸೇರಿದಂತೆ ಪ್ರಮುಖರು ಭಾಗವಹಿಸಲಿದ್ದಾರೆ.

ADVERTISEMENT

'ನಾನು ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲು ರಷ್ಯಾದ ಕಜಾನಗೆ ಹೊರಟಿದ್ದೇನೆ. ಭಾರತವು ‘ಬ್ರಿಕ್ಸ್‌’ಗೆ ಅಪಾರ ಪ್ರಾಮುಖ್ಯತೆಯನ್ನು ನೀಡುತ್ತದೆ. ನಾನು ಪ್ರಮುಖ ವಿಷಯಗಳ ಕುರಿತು ವ್ಯಾಪಕವಾದ ಚರ್ಚೆಗಳನ್ನು ಎದುರು ನೋಡುತ್ತಿದ್ದೇನೆ. ಜತೆಗೆ, ವಿವಿಧ ದೇಶಗಳ ನಾಯಕರನ್ನು ಭೇಟಿ ಮಾಡಲು ಬಯಸಿದ್ದೇನೆ’ ಎಂದು ಮೋದಿ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ.

‘ಭಾರತವು ಜಾಗತಿಕ ಅಭಿವೃದ್ಧಿ ಕಾರ್ಯಸೂಚಿ, ಸುಧಾರಿತ ಬಹುಪಕ್ಷೀಯತೆ, ಹವಾಮಾನ ಬದಲಾವಣೆ, ಆರ್ಥಿಕ ಸಹಕಾರ ವಿಷಯಗಳ ಕುರಿತು ಸಂವಾದ ಮತ್ತು ಚರ್ಚೆಗೆ ಪ್ರಮುಖ ವೇದಿಕೆಯಾಗಿ ಹೊರಹೊಮ್ಮಿರುವ 'ಬ್ರಿಕ್ಸ್‌’ನೊಳಗಿನ ನಿಕಟ ಸಹಕಾರವನ್ನು ಗೌರವಿಸುತ್ತದೆ’ ಎಂದು ಮೋದಿ ಹೇಳಿದ್ದಾರೆ.

‘ಕಳೆದ ವರ್ಷ ಹೊಸ ಸದಸ್ಯರ ಸೇರ್ಪಡೆಯೊಂದಿಗೆ ‘ಬ್ರಿಕ್ಸ್‌’ನ ವಿಸ್ತರಣೆಯು ಜಾಗತಿಕ ಒಳಿತಿಗಾಗಿ ಅದರ ಒಳಗೊಳ್ಳುವಿಕೆ ಮತ್ತು ಕಾರ್ಯಸೂಚಿಯನ್ನು ಹೆಚ್ಚಿಸಿದೆ. ಇದೀಗ ‘ಬ್ರಿಕ್ಸ್‌’ ಶೃಂಗಸಭೆಯು ವಿಶೇಷ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲಿದೆ’ ಎಂದು ತಿಳಿಸಿದ್ದಾರೆ.

ಉಕ್ರೇನ್‌ ಯುದ್ಧಕ್ಕೆ ಸಂಬಂಧಿಸಿದಂತೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ವಿರುದ್ಧ ಅಂತರರಾಷ್ಟ್ರೀಯ ಬಂಧನ ವಾರಂಟ್‌ ಜಾರಿಯಾಗಿದೆ. ಈ ಸಂದರ್ಭದಲ್ಲಿ ತಮ್ಮ ಬೆಂಬಲ ಹೆಚ್ಚಿಸಿಕೊಳ್ಳಲು ಪುಟಿನ್ ಶೃಂಗಸಭೆ ಆಯೋಜಿಸಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.

ಪಾಶ್ಚಿಮಾತ್ಯ ರಾಷ್ಟ್ರಗಳ ಒಕ್ಕೂಟಕ್ಕೆ ಪರ್ಯಾಯವಾಗಿ ಈ ಮಿತ್ರಕೂಟ ರಚನೆಯಾಗಿದೆ ಎಂದು ಹೇಳಲಾಗಿದೆ. ಆರಂಭದಲ್ಲಿ ಬ್ರೆಜಿಲ್‌, ರಷ್ಯಾ, ಭಾರತ, ಚೀನಾ ಹಾಗೂ ದಕ್ಷಿಣ ಆಫ್ರಿಕಾ ರಾಷ್ಟ್ರಗಳು ಮಾತ್ರ ಸದಸ್ಯತ್ವ ಹೊಂದಿದ್ದವು. ಈ ವರ್ಷ ಇರಾನ್‌, ಈಜಿಪ್ಟ್‌, ಇಥಿಯೋಪಿಯಾ, ಯುನೈಟೆಡ್‌ ಅರಬ್‌ ಎಮಿರೇಟ್ಸ್‌, ಸೌದಿ ಅರೇಬಿಯಾ ರಾಷ್ಟ್ರಗಳು ಸೇರ್ಪ‍ಡೆಯಾದವು. ಟರ್ಕಿ, ಅಜರ್‌ಬೈಜಾನ್‌, ಮಲೇಷ್ಯಾ ಕೂಡ ಔಪಚಾರಿಕವಾಗಿ ಸೇರ್ಪಡೆಗೆ ಅರ್ಜಿ ಸಲ್ಲಿಸಿದ್ದು, ಇನ್ನಷ್ಟು ರಾಷ್ಟ್ರಗಳು ಸೇರ್ಪಡೆಯಾಗಲು ಒಪ್ಪಿಗೆ ಸೂಚಿಸಿವೆ.

‘ಶೃಂಗಸಭೆಯಲ್ಲಿ 32 ರಾಷ್ಟ್ರಗಳು ಭಾಗವಹಿಸುವುದಾಗಿ ತಿಳಿಸಿವೆ. 20 ರಾಷ್ಟ್ರಗಳ ಮುಖ್ಯಸ್ಥರೇ ಭಾಗವಹಿಸಲಿದ್ದಾರೆ. ಪುಟಿನ್‌ ಅವರ ವಿದೇಶಾಂಗ ನೀತಿಗೆ ಸಿಕ್ಕ ಅತಿ ದೊಡ್ಡ ಯಶಸ್ಸು ಇದು’ ಎಂದು ರಷ್ಯಾದ ವಿದೇಶಾಂಗ ನೀತಿಯ ಅಧಿಕಾರಿ ಯುರಿ ಉಶಾಕೋವ್‌ ತಿಳಿಸಿದ್ದಾರೆ. ಮಿತ್ರರಾಷ್ಟ್ರಗಳ ಮುಖ್ಯಸ್ಥರ ಜತೆ ಪುಟಿನ್‌ ಅವರು 20 ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ. ಹಲವು ಒಪ್ಪಂದಗಳಿಗೆ ಸಹಿ ಹಾಕಲಿದ್ದಾರೆ.

‘ಜಾಗತಿಕ ಅಭಿವೃದ್ಧಿ ಮತ್ತು ಭದ್ರತೆಗಾಗಿ ಬಹುಪಕ್ಷೀಯತೆಯನ್ನು ಬಲಪಡಿಸುವುದು’ ಈ ಬಾರಿಯ ‘ಬ್ರಿಕ್ಸ್‌’ ಶೃಂಗಸಭೆಯ ಪ್ರಮುಖ ಧ್ಯೇಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.