ನವದೆಹಲಿ: ಕೇಂದ್ರ ಸರ್ಕಾರದ ‘ಪಿಎಂ ವಾಣಿ ಯೋಜನೆ’ಗೆ (ಪಿಎಂ ವೈಫೈ ಆಕ್ಸೆಸ್ ನೆಟ್‌ವರ್ಕ್ ಇಂಟರ್‌ಫೇಸ್) ದೂರ
ಸಂಪರ್ಕ ಇಲಾಖೆಯು ಸೋಮವಾರ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಸಣ್ಣ ಅಂಗಡಿಗಳು ಕೂಡ ಸಾರ್ವಜನಿಕ ವೈಫೈ ಸೇವೆ ಒದಗಿಸಬಹುದು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ರೆಸ್ಟೋರೆಂಟ್, ಟೀ ಅಂಗಡಿ, ಹೋಟೆಲ್, ಕಿರಾಣಿ ಅಂಗಡಿಗಳು ಮೊದಲಾದ ಸ್ಥಳಗಳು ವೈಫೈ ಸೌಲಭ್ಯ ನೀಡುವ ಕೇಂದ್ರಗಳಾಗಬಹುದು (ಪಿಡಿಒ). ಇದಕ್ಕೆ ಇಲಾಖೆಯಿಂದ ನೋಂದಣಿ ಅಗತ್ಯವಿಲ್ಲ. ಸೇವಾದಾತ ಸಂಸ್ಥೆಯಿಂದ ಬ್ಯಾಂಡ್‌ವಿಡ್ತ್ ಪಡೆದುಕೊಂಡು ಸಾರ್ವಜನಿಕ ವೈಫೈ ಇಂಟರ್‌ನೆಟ್ ಸೌಲಭ್ಯ ಕಲ್ಪಿಸಬಹುದು ಎಂದು ನಿಯಮಾವಳಿ ತಿಳಿಸಿದೆ.
ದೇಶದ ಎಲ್ಲೆಡೆ ಬ್ರಾಡ್‌ಬ್ಯಾಂಡ್ ಇಂಟರ್‌ನೆಟ್ ಸೌಲಭ್ಯ ಕಲ್ಪಿಸುವ ಉದ್ದೇಶದ ‘ಪಿಎಂ ವಾಣಿ’ ಯೋಜನೆಗೆ ಕಳೆದ ವಾರ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿತ್ತು. ಪಬ್ಲಿಕ್ ಡೇಟಾ ಆಫೀಸ್ (ಪಿಡಿಒ), ಪಬ್ಲಿಕ್ ಡೇಟಾ ಆಫೀಸ್ ಅಗ್ರಿಗೇಟರ್ಸ್ (ಪಿಡಿಒಎ),ಅಪ್ಲಿಕೇಶನ್ ಡೆವಲಪರ್ ಕಾರ್ಯಾರಂಭಕ್ಕೆ ಅನುಮತಿ ದೊರೆತಿತ್ತು.
ಪಿಡಿಒಗಳನ್ನು ದೃಢೀಕರಿಸುವ ಪಿಡಿಒಎಗಳು 2013ರ ಕಂಪನಿ ಕಾಯ್ದೆಯಡಿ ನೋಂದಣಿ ಮಾಡಿಕೊಳ್ಳಬೇಕು. ಇದಕ್ಕೆ ಶುಲ್ಕ ಇರುವುದಿಲ್ಲ. ಅರ್ಜಿ ಸಲ್ಲಿಸಿದ ಏಳು ದಿನಗಳ ಒಳಗೆ ನೋಂದಣಿಯಾಗುತ್ತದೆ. ಅಪ್ಲಿಕೇಶನ್ ಡೆವಲಪರ್ ನೋಂದಣಿ ಪ್ರಕ್ರಿಯೆಯೂ ಇದೇ ರೀತಿ ಇರುತ್ತದೆ. ವೈಫೈ ಬಳಕೆದಾರರನ್ನು ನೋಂದಾಯಿಸಲು ಮತ್ತು ಆಯಾ ಪ್ರದೇಶದ ಪಿಎಂ ವಾಣಿ ವೈ-ಫೈ ಹಾಟ್‌ಸ್ಪಾಟ್‌ಗಳನ್ನು ಗುರುತಿಸಲು ಅಪ್ಲಿಕೇಶನ್ ಡೆವಲಪರ್‌ಗಳು ಒಂದು ವೇದಿಕೆ ಕಲ್ಪಿಸುತ್ತಾರೆ ಎಂದು ಮಾರ್ಗಸೂಚಿ ಮಾಹಿತಿ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.