ADVERTISEMENT

ನಕಲಿ ಎನ್‌ಸಿಸಿ ಶಿಬಿರ ಪ್ರಕರಣ: ಪ್ರಮುಖ ಆರೋಪಿ ಆತ್ಮಹತ್ಯೆ

ಅಪಘಾತದಲ್ಲಿ ತಂದೆ ಮೃತಪಟ್ಟ ಬೆನ್ನಲ್ಲೇ ಶಿವರಾಮನ್‌ ಸಾವು

ಪಿಟಿಐ
Published 23 ಆಗಸ್ಟ್ 2024, 14:16 IST
Last Updated 23 ಆಗಸ್ಟ್ 2024, 14:16 IST
<div class="paragraphs"><p>ಸಾವು</p></div>

ಸಾವು

   

(ಪ್ರಾತಿನಿಧಿಕ ಚಿತ್ರ)

ಕೃಷ್ಣಗಿರಿ : ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ನಕಲಿ ‘ಎನ್‌ಸಿಸಿ’ ಶಿಬಿರ ನಡೆಸಿ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣದ ಪ್ರಮುಖ ಆರೋಪಿ ಶಿವರಾಮನ್‌, ಆಸ್ಪತ್ರೆಯಲ್ಲಿ ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ADVERTISEMENT

ಮದ್ಯಪಾನ ಮಾಡಿ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ವೇಳೆ ಶಿವರಾಮನ್‌ ತಂದೆ ಅಶೋಕ್‌ ಕುಮಾರ್‌ ಅವರು  ಗುರುವಾರ ರಾತ್ರಿ ರಸ್ತೆ ಅಪಘಾತದಲ್ಲಿ ಮೃತ‍ಪಟ್ಟರು. ಬಳಿಕ ಶುಕ್ರವಾರ ಇಲಿ ಪಾಷಾಣ ಸೇವಿಸಿ ಶಿವರಾಮನ್‌ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. 

ಕೇಂದ್ರ ಮೀಸಲು ಪೊಲೀಸ್‌ ಪಡೆಯ (ಸಿಆರ್‌ಪಿಎಫ್‌) ಮಾಜಿ ಸಿಬ್ಬಂದಿಯೊಬ್ಬರ ನೆರವು ಪಡೆದು ಎನ್‌ಸಿಸಿ ಸಂಯೋಜಕ ಎಂದು ಬಿಂಬಿಸಿಕೊಂಡಿದ್ದ ಶಿವರಾಮನ್‌, ಕೃಷ್ಣಗಿರಿಯ ಖಾಸಗಿ ಶಾಲೆಯಲ್ಲಿ ನಾಲ್ಕು ದಿನಗಳವರೆಗೆ ‘ನಕಲಿ ಎನ್‌ಸಿಸಿ ಶಿಬಿರ’ ನಡೆಸಿ, 13 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಲ್ಲದೆ, ಇತರ 12 ಬಾಲಕಿಯರನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದಾನೆ ಎಂದು ಆರೋಪಿಸಲಾಗಿತ್ತು. 

ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವರಾಮನ್‌, ಶಾಲೆಯ ಪ್ರತಿನಿಧಿ ಸ್ಯಾಮ್ಸನ್‌ ವೆಸ್ಲಿ, ಪ್ರಾಚಾರ್ಯ ಸತೀಶ್‌ ಕುಮಾರ್‌, ಇಬ್ಬರು ಶಿಕ್ಷಕರು, ಸಿಆರ್‌ಪಿಎಫ್‌ ಮಾಜಿ ಸಿಬ್ಬಂದಿ ವಿ. ಸುಬ್ರಮಣಿ ಸೇರಿದಂತೆ 11 ಮಂದಿಯನ್ನು ಪೊಲೀಸರು ಬಂಧಿಸಿದ್ದರು.

ಪೊಲೀಸರ ಬಂಧನಕ್ಕೊಳಗಾಗುವುದನ್ನು ತಪ್ಪಿಸಿಕೊಳ್ಳಲು ಶಿವರಾಮನ್‌ ಯತ್ನಿಸಿದ್ದ ವೇಳೆ ಆತನ ಕಾಲಿಗೆ ತೀವ್ರ ಪೆಟ್ಟಾಗಿತ್ತು. ಚಿಕಿತ್ಸೆಗಾಗಿ ಅವನನ್ನು ಸೇಲಂನ ಸರ್ಕಾರಿ ವೈದ್ಯಕೀಯ ಕಾಲೇಜಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಮಿಳು ರಾಷ್ಟ್ರೀಯವಾದಿ ಸಂಘಟನೆ ‘ನಾಮ್‌ ತಮಿಳರ್‌ ಕಚ್ಚಿ’ಯ (ಎನ್‌ಟಿಕೆ) ಪದಾಧಿಕಾರಿಯಾಗಿದ್ದ ಶಿವರಾಮನ್‌ ಆಯೋಜಿಸಿದ್ದ ನಕಲಿ ಎನ್‌ಸಿಸಿ ಶಿಬಿರದಲ್ಲಿ 17 ಬಾಲಕಿಯರು ಸೇರಿದಂತೆ ಒಟ್ಟು 41 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಈತ ಎನ್‌ಸಿಸಿಯ ಭಾಗವಾಗಿದ್ದಾನೋ ಇಲ್ಲವೋ ಎಂಬುದನ್ನು ಪರಿಶೀಲಿಸದೆ ಶಾಲೆಯವರು ಶಿಬಿರ ನಡೆಸಲು ಅನುಮತಿ ನೀಡಿದ್ದರು ಎಂದು ತಿಳಿದುಬಂದಿದೆ. ಶಿಬಿರದ ಕೊನೆಯ ದಿನ ಶಿವರಾಮನ್‌, ಎಂಟನೇ ತರಗತಿ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕೃಷ್ಣಗಿರಿ ಜಿಲ್ಲೆಯ ಬರ್ಗೂರ್‌ನಲ್ಲಿ ಆಗಸ್ಟ್‌ 5ರಿಂದ ಆಗಸ್ಟ್‌ 9ರ ನಡುವೆ ಈ ಘಟನೆ ನಡೆದಿದೆ.

ಘಟನೆಯ ತನಿಖೆ ನಡೆಸಲು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್‌ ಅವರು ಎಸ್‌ಐಟಿ (ವಿಶೇಷ ತನಿಖಾ ತಂಡ) ರಚಿಸಿ ಆದೇಶಿಸಿದ್ದರು. ಅದರ ಬೆನ್ನಲ್ಲೇ ಆರೋಪಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 

ಎಡಪ್ಪಾಡಿ ಪಳನಿಸ್ವಾಮಿ

ನಿಜವಾದ ಅಪರಾಧಿ ರಕ್ಷಿಸುವ ಪ್ರಯತ್ನ? 

ನಕಲಿ ಎನ್‌ಸಿಸಿ ಶಿಬಿರ ಪ್ರಕರಣದ ಪ್ರಮುಖ ಆರೋಪಿ ಶಿವರಾಮನ್‌ ತಂದೆ ಅತ್ತ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಇತ್ತ ಆತನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ರಕರಣದ ನಿಜವಾದ ಆರೋಪಿಯನ್ನು ರಕ್ಷಿಸುವ ಪ್ರಯತ್ನಗಳಾಗುತ್ತಿವೆಯೇ ಎಂದು ವಿಪಕ್ಷಗಳಾದ ಎಐಎಡಿಎಂಕೆ ಹಾಗೂ ಬಿಜೆಪಿ ಶಂಕೆ ವ್ಯಕ್ತಪಡಿಸಿವೆ.  ಎಸ್‌ಐಟಿ ತನಿಖೆ ಪ್ರಾರಂಭವಾಗುವ ಮುನ್ನವೇ ಶಿವರಾಮನ್‌ ಮತ್ತು ಅವರ ತಂದೆ ಮೃತಪಟ್ಟಿದ್ದಾರೆ ಇವರ ಸಾವಿನ ಸಮಯವು ಅನುಮಾನವನ್ನು ಹುಟ್ಟುಹಾಕುತ್ತಿದೆ ಎಂದು ಎಐಎಡಿಎಂಕೆ ‍ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಪಳನಿಸ್ವಾಮಿ ಹೇಳಿದ್ದಾರೆ.

Cut-off box - null

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.