ಬೆಂಗಳೂರು: ಜನವರಿ 10 ರಂದು ಬಿಡುಗಡೆಗೆ ಸಿದ್ಧವಾಗಿರುವ ಬ್ರಿಟನ್ ರಾಜಕುಮಾರ ‘ಪ್ರಿನ್ಸ್ ಹ್ಯಾರಿ‘ ಅವರ ಆತ್ಮ ಚರಿತ್ರೆ ‘ಸ್ಪೇರ್‘ನಲ್ಲಿರುವ ಮತ್ತಷ್ಟು ಸ್ಫೋಟಕ ಮಾಹಿತಿಗಳು ಹೊರಬಂದಿವೆ.
ತಾಯಿ ಪ್ರಿನ್ಸಸ್ ಡಯಾನಾ ಅವರ ಸಾವಿನಿಂದ ಹಿಡಿದು, ತಂದೆ ಮೂರನೇ ಚಾರ್ಲ್ಸ್ ಅವರ ಎರಡನೇ ವಿವಾಹ, ಅಣ್ಣ ವಿಲಿಯಂ ಜತೆಗಿನ ಸಂಘರ್ಷ, ಅರಮನೆಯೊಳಗಿನ ಗುದ್ದಾಟ ಮುಂತಾದ ಮಾಹಿತಿಗಳು ಸ್ಪೇರ್‌ನಲ್ಲಿ ಉಲ್ಲೇಖ ಮಾಡಿದ್ದಾರೆ.
ಬಿಬಿಸಿ ಸಹಿತ ಪ್ರಮುಖ ಮಾಧ್ಯಮ ಸಂಸ್ಥೆಗಳಿಗೆ ಪುಸ್ತಕದ ಕೆಲ ಭಾಗಗಳು ದೊರೆತಿದ್ದು, ಅವುಗಳಲ್ಲಿ ಹಲವು ವಿಚಾರಗಳು ಇವೆ ಎಂದು ಹೇಳಿವೆ.
‘ಸ್ಪೇರ್‘ನಲ್ಲಿ ಏನೇನಿದೆ?
1. ಕ್ಯಾಮಿಲಾರನ್ನು ವಿವಾಹವಾಗುವುದು ಬೇಡ ಎಂದು ಮನವಿ ಮಾಡಿದ್ದರಂತೆ ವಿಲಿಯಂ ಹಾಗೂ ಹ್ಯಾರಿ
ತಾಯಿ ರಾಜಕುಮಾರಿ ಡಯಾನಾ ಅವರ ಅನುಮಾನಾಸ್ಪದ ಸಾವಿನ ಬಳಿಕ, ಕ್ಯಾಮಿಲಾ ಅವರ ಜತೆ ಸಂಬಂಧ ಇಟ್ಟುಕೊಂಡಿದ್ದಕ್ಕೆ ತಂದೆ ಮೂರನೇ ಚಾರ್ಲ್ಸ್ ವಿರುದ್ಧ ವಿಲಿಯಂ (ಪ್ರಿನ್ಸ್ ಹ್ಯಾರಿಯ ಅಣ್ಣ) ಹಾಗೂ ನಾನು ಅಸಮಾಧಾನ ವ್ಯಕ್ತಪಡಿಸಿದ್ದೆವು. ಆಕೆಯನ್ನು ವಿವಾಹವಾಗುವುದು ಬೇಡ ಎಂದು ನಾವು ತಂದೆಗೆ ಮನವಿ ಮಾಡಿದ್ದೆವು ಎಂದು ಹ್ಯಾರಿ ಬರೆದುಕೊಂಡಿದ್ದಾರೆ.
ಅಲ್ಲದೇ ತಂದೆಯೊಂದಿಗೆ ವಿವಾಹವಾಗುವುದಕ್ಕೂ ಮುನ್ನ ಕ್ಯಾಮಿಲಾ ಅವರ ಜತೆ ನಾನು ಹಾಗೂ ಅಣ್ಣ ಮಾತುಕತೆಯನ್ನೂ ನಡೆಸಿದ್ದೆವು ಎಂದು ಅವರು ಹೇಳಿದ್ದಾರೆ. ಆದರೆ ಕ್ಯಾಮಿಲಾ ಅವರನ್ನು ಇಬ್ಬರು ಎಲ್ಲಿ ಭೇಟಿಯಾಗಿದ್ದರು, ಆ ವೇಳೆ ಹ್ಯಾರಿಯವರ ವಯಸ್ಸು ಎಷ್ಟು ಎನ್ನುವುದರ ಬಗ್ಗೆ ಯಾವುದೇ ಉಲ್ಲೇಖ ಇಲ್ಲ.
ಸದ್ಯ ಕ್ಯಾಮಿಲಾ ಅವರು ಕಾನ್ಸೋರ್ಟ್‌ನ ರಾಣಿಯಾಗಿದ್ದಾರೆ.
2. ತಾಯಿ ಡಯಾನಾ ನೀಡಿದ್ದ ಸಂದೇಶ
ತಾಯಿ ಡಯಾನಾ ಅವರ ಮರಣ, ಅವರು ನೀಡಿದ್ದ ಸಂದೇಶದ ಬಗ್ಗೆಯೂ ಹ್ಯಾರಿ, ‘ಸ್ಪೇರ್‘ನಲ್ಲಿ ಉಲ್ಲೇಖ ಮಾಡಿದ್ದಾರೆ.
ತಾಯಿಯ ಅಕಾಲಿಕ ಮರಣ ನನ್ನನ್ನು ದುಃಖಕ್ಕೆ ತಳ್ಳಿತ್ತು . ನನ್ನ ಹಾಗೂ ತಾಯಿಯ ನಡುವಿನ ಸಂಬಂಧ ಬಹಳ ಕಡಿಮೆ ಅವಧಿಯದ್ದಾಗಿತ್ತು. ‘ ಬಯಸಿದಂತೆ ಬದುಕಲು ನಿಮ್ಮ ತಾಯಿಗೆ ಸಾಧ್ಯವಾಗಿರಲಿಲ್ಲ. ಆದರೆ ಅವರು ಬಯಸಿದಂತೆ ನೀವು ಜೀವನ ನಡೆಸುತ್ತಿದ್ದೀರಿ, ನೀವು ಹೇಗೆ ಬದುಕಬೇಕು ಎಂದು ತಾಯಿ ಅಂದುಕೊಂಡಿದ್ದರೋ ಹಾಗೇ ಜೀವಿಸುತ್ತಿದ್ದೀರಿ‘ ಎಂದು ‘ಅಧಿಕಾರ ಇರುವ ಮಹಿಳೆ‘ಯೊಬ್ಬರು ನನಗೆ ಹೇಳಿದ್ದರು ಎಂದು ಹ್ಯಾರಿ ಬರೆದುಕೊಂಡಿದ್ದಾರೆ.
ಆದರೆ ಆ ‘ಅಧಿಕಾರ ಇರುವ ಮಹಿಳೆ‘ ಯಾರು? ಹ್ಯಾರಿ ಹಾಗೂ ಮಹಿಳೆಯ ಭೇಟಿ ಯಾವಾಗ ನಡೆದಿತ್ತು ಎನ್ನುವುದರ ಬಗ್ಗೆ ಪುಸ್ತಕದಲ್ಲಿ ಉಲ್ಲೇಖಗಳಿಲ್ಲ ಎನ್ನುವುದು ಬಿಬಿಸಿ ಮಾಡಿದ ವರದಿ.
1997 ಆಗಸ್ಟ್ 31 ರಂದು ಪ್ಯಾರೀಸ್‌ನಲ್ಲಿ ನಡೆದ ಅಪಘಾತದಲ್ಲಿ ಡಯಾನಾ ಅವರು ದುರ್ಮಣರಕ್ಕೀಡಾಗಿದ್ದರು. ಅವರ ಸಾವಿನ ಬಗೆಗಿನ ಹಲವು ಅನುಮಾನಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ. ತಾಯಿ ಡಯಾನಾ ಅವರು ಮೃತಪಟ್ಟಾಗ ಹ್ಯಾರಿ ಅವರಿಗೆ ಕೇವಲ 12 ವರ್ಷ.
3. ತಾಯಿ ಸತ್ತಾಗ ತಂದೆ ಸಂತೈಸಲಿಲ್ಲ
ತಾಯಿ ಡಯಾನಾ ಅವರು ಮೃತಪಟ್ಟಾಗ ತಂದೆ ಚಾರ್ಲ್ಸ್ ಅವರು ನನ್ನನ್ನು ಸಂತೈಸಲಿಲ್ಲ ಎನ್ನುವ ತಕರಾರು ಕೂಡ ಹ್ಯಾರಿ ಅವರ ‘ಸ್ಪೇರ್‘ನಲ್ಲಿದೆ. ಕಾರು ಅಪಘಾತದಲ್ಲಿ ತಾಯಿ ನಿಧರಾದ ಸುದ್ದಿಯನ್ನು ನನಗೆ ಹೇಳುವಾಗ ‘ಸಾಮಾನ್ಯ‘ ರೀತಿಯಲ್ಲೇ ಹೇಳಿದರು. ನನ್ನನ್ನು ತಬ್ಬಿಕೊಳ್ಳಲೂ ಇಲ್ಲ ಎಂದು ಹ್ಯಾರಿ ಬೇಸರ ವ್ಯಕ್ತಪಡಿಸಿದ್ದಾರೆ.
4. ಅಣ್ಣ ವಿಲಿಯಂನಿಂದ ಹಲ್ಲೆಗೊಳಗಾದೆ
ಪತ್ನಿ ಮೇಘನ್ ಮಾರ್ಕ್ಲೆ ವಿಚಾರವಾಗಿ ಅಣ್ಣ ವಿಲಿಯಂ ಜತೆ ನಡೆದಿದ್ದ ಜಗಳವನ್ನೂ ಅವರು ಆತ್ಮ ಚರಿತ್ರೆಯಲ್ಲಿ ಉಲ್ಲೇಖಿಸಿದ್ದಾರೆ.
‘ವಿಲಿಯಂ ನನ್ನ ಕಾಲರ್ ಹಿಡಿದು ಎಳೆದಾಡಿದರು. ನನ್ನ ಕತ್ತಲ್ಲಿದ್ದ ಸರ ತುಂಡಾಯಿತು. ನನ್ನನ್ನು ನೆಲಕ್ಕೆ ಕೆಡವಿ ಹಾಕಿದರು. ಅವರು ದೂಡಿದ ರಭಸಕ್ಕೆ ನಾನು ನಾಯಿಯ ಊಟದ ಪಾತ್ರೆ ಮೇಲೆ ಬಿದ್ದೆ. ಪಾತ್ರೆ ಚೂರು ಚೂರಾಯ್ತು. ಆ ವೇಳೆ ನಾನು ದಿಗ್ಭ್ರಮೆಗೆ ಒಳಗಾಗಿದ್ದೆ. ಕ್ಷಣಾರ್ಧದಲ್ಲಿ ಎಲ್ಲವೂ ನಡೆದು ಹೋಯ್ತು. ಆ ಘಟನೆಯಲ್ಲಿ ಗಾಯವಾಗಿ ನನ್ನ ಮೈಮೇಲೆ ಕಪ್ಪು ಕಲೆ ಉಂಟಾಗಿತ್ತು‘ ಎಂದು ಬರೆದುಕೊಂಡಿದ್ದಾರೆ.
ವಿಲಿಯಂ ಅವರು ಮೇಘನ್ ಅವರನ್ನು , ‘ಕಠಿಣ, ಅಸಭ್ಯ ಮತ್ತು ಒರಟು ಬುದ್ಧಿಯವಳು ಎಂದು ನಿಂದಿಸಿದ್ದಾರೆ‘ ಎಂದು ಹ್ಯಾರಿ ಪುಸ್ತಕದಲ್ಲಿ ಹೇಳಿದ್ದಾರೆ.
5. ನನ್ನ ವೇಷಭೂಷಣ ನೋಡಿ ಅಣ್ಣ, ಅತ್ತಿಗೆ ಕುಹಕವಾಡಿದ್ದರು.
ನಾನು ಹಾಕಿದ್ದ ಛದ್ಮವೇಷಕ್ಕೆ ಅಣ್ಣ ವಿಲಿಯಂ ಹಾಗೂ ಅತ್ತಿಗೆ ಕ್ಯಾಥರಿನ್ ತಮಾಷೆ ಮಾಡಿದ್ದರು ಎಂದು ಹ್ಯಾರಿ ಬೇಸರ ವ್ಯಕ್ತಪಡಿಸಿದ್ದಾರೆ. 2005ರಲ್ಲಿ ತಾನು ಛದ್ಮವೇಷ ಸ್ನೇಹಕೂಟಕ್ಕೆ ಧರಿಸಿದ್ದ ನಾಝಿ ವೇಷವನ್ನು ಕಂಡು ವಿಲಿಯಂ ಹಾಗೂ ಕ್ಯಾಥರಿನ್ ಕುಹಕವಾಡಿದ್ದರು ಎಂದಿದ್ದಾರೆ.
6. ದಯಮಾಡಿ ಗಲಾಟೆ ಮಾಡಬೇಡಿ ಎಂದು ತಂದೆ ಭಿನ್ನವಿಸಿಕೊಂಡಿದ್ದರು
ಮೇಘನ್ ವಿಚಾರವಾಗಿ ಅಣ್ಣನ ಜತೆ ಜಗಳ ನಡೆದಾಗ, ದಯಮಾಡಿ ಗಲಾಟೆ ಮಾಡಬೇಡಿ ಎಂದು ತಂದೆ ಚಾರ್ಲ್ಸ್ ನಮ್ಮಲ್ಲಿ ವಿನಂತಿಸಿಕೊಂಡಿದ್ದರು. ನಮ್ಮಿಬ್ಬರ ಮಧ್ಯೆ ನಿಂತು ‘ದಯಾಮಾಡಿ ನನ್ನ ಕೊನೆ ದಿನಗಳನ್ನು ದುಃಖದಾಯಕವಾಗಿ ಮಾಡಬೇಡಿ‘ ಎಂದು ಹೇಳಿದ್ದಾಗಿ ಬರೆದುಕೊಂಡಿದ್ದಾರೆ.
7. ಹಳ್ಳಿಯಲ್ಲಿ ಮದುವೆಯಾಗಿ ಎಂದಿದ್ದ ಅಣ್ಣ
ಮೇಘನ್ ಜತೆ ವಿವಾಹ ಸಿದ್ಧತೆಗಳು ನಡೆಯುತ್ತಿತ್ತು. ಸೈಂಟ್ ಪೌಲ್ ಕ್ಯಾಥೆಡ್ರಲ್ ಅಥವಾ ವೆಸ್ಟ್ ಮಿನಿಸ್ಟರ್ಸ್ ಅಬೆಯಲ್ಲಿ ವಿವಾಹವಾಗುತ್ತೇನೆ ಎಂದು ಅಣ್ಣ ವಿಲಿಯಂ ಜತೆ ಹೇಳಿದೆ. ಆದರೆ ಅದು ತಂದೆ ಹಾಗೂ ತಾನು (ವಿಲಿಯಂ) ವಿವಾಹವಾದ ಸ್ಥಳವಾಗಿದ್ದರಿಂದ ಅಲ್ಲಿ ಬೇಡ ಎಂದು ಹೇಳಿದ್ದ. ವಿಲೇಜ್ ಚಾಪೆಲ್‌ನಲ್ಲಿ ವಿವಾಹವಾಗು ಎಂದು ವಿಲಿಯಂ ಹೇಳಿದ್ದ ಎಂದು ಹ್ಯಾರಿ ಆತ್ಮ ಚರಿತ್ರೆಯಲ್ಲಿ ಬರೆದಿದ್ದಾರೆ.
8. 25 ತಾಲಿಬಾನಿಗಳನ್ನು ಕೊಂದಿದ್ದೆ
2012–13ರಲ್ಲಿ ಅಫ್ಗಾನಿಸ್ತಾನದಲ್ಲಿ ಹೆಲಿಕಾಪ್ಟರ್‌ನಲ್ಲಿ ಪೈಲಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾಗ, 25 ಮಂದಿ ತಾಲಿಬಾನಿಗಳನ್ನು ಕೊಂದಿದ್ದೆ ಎಂದು ಆತ್ಮಚರಿತ್ರೆಯಲ್ಲಿ ಉಲ್ಲೇಖಿಸಿದ್ದಾರೆ.
ಆತ್ಮಚರಿತ್ರೆಯಲ್ಲಿ ಇರುವ ಇನ್ನೂ ಹಲವು ವಿಷಯಗಳು ಹೊರ ಬಂದಿದ್ದು, ಪ್ರಮುಖ ವಿಚಾರಗಳನ್ನು ಮಾತ್ರ ಇಲ್ಲಿ ನೀಡಲಾಗಿದೆ. ಈ ಘಟನೆ ಸಂಬಂಧ ಮಾಹಿತಿ ಬಯಸಿ ಬಕ್ಕಿಂಗ್‌ಹ್ಯಾಮ್ ಅರಮನೆ ಹಾಗೂ ಕೆನ್ಸಿಂಗ್‌ಟನ್ ಅರಮನೆಯನ್ನು ಬಿಬಿಸಿ ಸಂಪರ್ಕಿಸಿದರೂ ಮಾಹಿತಿ ಲಭ್ಯವಾಗಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.