ಮಿರ್ಜಾಪುರ (ಉತ್ತರ ಪ್ರದೇಶ): ಗೋಲ್‌ಗಪ್ಪ ತಿಂದನೆಂಬ ಕಾರಣಕ್ಕೆ ಶಾಲೆಯ ಪ್ರಾಂಶುಪಾಲರು ಎರಡನೇ ತರಗತಿಯ ವಿದ್ಯಾರ್ಥಿಯೊಬ್ಬನನ್ನು ಶಾಲೆಯ ಕಟ್ಟಡದ ಮೊದಲ ಮಹಡಿಯಿಂದ ತಲೆಕೆಳಗಾಗಿ ನೇತಾಡಿಸಿದ ಪ್ರಸಂಗ ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ಗುರುವಾರ ನಡೆದಿದೆ.
ವಿದ್ಯಾರ್ಥಿಯನ್ನು ಪ್ರಾಂಶುಪಾಲರು ನೇತಾಡಿಸುತ್ತಿರುವುದನ್ನು ಇತರ ಸಹಪಾಠಿಗಳು ಆತಂಕದಿಂದ ನೋಡುತ್ತಿರುವ ಚಿತ್ರ ಮತ್ತು ವಿಡಿಯೊ ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಘಟನೆಯ ಹಿನ್ನೆಲೆಯಲ್ಲಿ ‘ಸದ್ಭಾವನಾ ಶಿಕ್ಷಣ ಸಂಸ್ಥಾನ ಜೂನಿಯರ್ ಹೈಸ್ಕೂಲ್’ನ ಪ್ರಾಂಶುಪಾಲ ಮನೋಜ್ ವಿಶ್ವಕರ್ಮ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ವಿಶ್ವಕರ್ಮ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅಹ್ರೌರಾ ಠಾಣೆ ಪೊಲೀಸರು ತಿಳಿಸಿದ್ದಾರೆ.
ಶಿಕ್ಷಕರಿಗೆ ತಿಳಿಸದೆ ಶಾಲೆ ಹೊರಗಿನ ಅಂಗಡಿಯಲ್ಲಿ 'ಗೋಲ್ ಗಪ್ಪ' ತಿಂದಿದ್ದಕ್ಕಾಗಿ ಶಾಲೆಯ ಪ್ರಾಂಶುಪಾಲ ಮನೋಜ್ ವಿಶ್ವಕರ್ಮ ಅವರು ಐದು ವರ್ಷದ ಬಾಲಕನಿಗೆ ಈ ರೀತಿಯ ಶಿಕ್ಷೆ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯಿಂದ ಆಘಾತಕ್ಕೊಳಗಾದ ಬಾಲಕ ಮನೆಗೆ ಬಂದು ಪೋಷಕರಿಗೆ ವಿಷಯ ತಿಳಿಸಿದ್ದ. ಮಗುವಿನ ತಂದೆ ರಂಜಿತ್ ಯಾದವ್ ಅವರು ಪೊಲೀಸರಿಗೆ ದೂರು ನೀಡಿದ್ದು, ಗುರುವಾರ ರಾತ್ರಿ ಎಫ್‌ಐಆರ್ ದಾಖಲಿಸಲಾಗಿದೆ.
ಈ ಬಗ್ಗೆ ಮಾಹಿತಿ ಪಡೆದ ಜಿಲ್ಲಾ ಮೂಲ ಶಿಕ್ಷಣಾಧಿಕಾರಿ, ವರದಿ ತರಿಸಿಕೊಂಡು ಶಾಲೆಯ ಪ್ರಾಂಶುಪಾಲರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಪ್ರಾಂಶುಪಾಲ ವಿಶ್ವಕರ್ಮ ಅವರು ಮಗುವಿನ ತಂದೆಯ ಬಳಿ ಕ್ಷಮೆ ಕೋರಿದ್ದಾರಾದರೂ, ಬಾಲನ್ಯಾಯ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.