ವಯನಾಡ್(ಕೇರಳ): ವಯನಾಡ್ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಪ್ರಿಯಾಂಕಾ ಗಾಂಧಿ, 2ನೇ ಹಂತದ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ. ಇದೇವೇಳೆ, ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಕೇಂದ್ರದ ಬಿಜೆಪಿ ಆಡಳಿತದಲ್ಲಿ ಸಾಂವಿಧಾನಿಕ ಮೌಲ್ಯಗಳು ನಿರಂತರವಾಗಿ ಬುಡಮೇಲಾಗುತ್ತಿವೆ ಎಂದು ಆರೋಪಿಸಿದ್ದಾರೆ.
ಮೀನಂಗಡಿಯಲ್ಲಿ ಏರ್ಪಡಿಸಲಾಗಿದ್ದ ಪ್ರಚಾರ ಸಭೆಯಲ್ಲಿ ಮಣಿಪುರದಲ್ಲಿನ ಹಿಂಸಾಚಾರವನ್ನು ಪ್ರಸ್ತಾಪಿಸಿದ ಅವರು, ದೇಶದಲ್ಲಿ ಅಲ್ಪಸಂಖ್ಯಾತರ ಮೇಲೆ ಯೋಜಿತ ದಾಳಿ ನಡೆಯುತ್ತಿವೆ ಎಂದು ದೂರಿದ್ದಾರೆ.
‘ಕೇಂದ್ರದ ಬಿಜೆಪಿ ಸರ್ಕಾರವು ಭಯ, ಸಿಟ್ಟು ಮತ್ತು ದ್ವೇಷವನ್ನು ಸಮುದಾಯಗಳಲ್ಲಿ ಹರಡುತ್ತಿದೆ. ಅಲ್ಪಸಂಖ್ಯಾತರ ಮೇಲಿನ ದಾಳಿಗಳನ್ನು ನೋಡಿದ್ದೀರಿ. ಮಣಿಪುರದಲ್ಲಿ ನಡೆದ ಹಿಂಸಾಚಾರಗಳನ್ನು ಕಂಡಿದ್ದೀರಿ. ಜನರಲ್ಲಿ ಆಗಿಂದ್ದಾಗ್ಗೆ ಸಿಟ್ಟು,ದ್ವೇಷದ ಹರಡುವಿಕೆ ಮತ್ತು ಭಯವು ಯೋಜಿತ ರೀತಿಯಲ್ಲಿ ಉಂಟಾಗುತ್ತಿರುವುದನ್ನು ಪದೇ ಪದೇ ನೋಡುತ್ತಿದ್ದೀರಿ’ ಎಂದು ಹೇಳಿದರು.
ಮೋದಿ ತನ್ನ ಸ್ನೇಹಿತರಿಗೆ ಅನುಕೂಲ ಆಗುವಂತಹ ನೀತಿಗಳನ್ನು ಒಂದರ ಹಿಂದೊಂದರಂತೆ ಜಾರಿಗೆ ತರುತ್ತಿದ್ದಾರೆ. ಸಾಮಾನ್ಯ ಜನರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
'ಹಗಲಿರುಳು ದುಡಿಯುತ್ತಿರುವ ರೈತರ ಬಗ್ಗೆ ಕೊಂಚವೂ ಸಹಾನುಭೂತಿ ಇಲ್ಲ. ಆದಿವಾಸಿಗಳ ಧ್ವನಿ ಆಲಿಸುವವರಿಲ್ಲ. ಅವರ ಭೂಮಿಯನ್ನು ಧನಿಕರು ಲಪಟಾಯಿಸುತ್ತಿದ್ದಾರೆ’ಎಂದು ಕಿಡಿಕಾರಿದರು.
ಅತ್ಯಂತ ಭಾರದ ಹೃದಯದಿಂದ ರಾಹುಲ್ ಗಾಂಧಿ ಈ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದಾರೆ ಎಂದು ಪ್ರಿಯಾಂಕಾ ಹೇಳಿದ್ದಾರೆ.
‘ನನ್ನ ಅಣ್ಣನ ಮೇಲಿನ ಪ್ರೀತಿಯಿಂದಲೂ ನೀವು ಇಲ್ಲಿಗೆ ಬಂದಿದ್ದೀರಿ ಎಂಬುದು ನನಗೆ ತಿಳಿದಿದೆ. ನಿಮ್ಮೊಂದಿಗೆ ಅವರಿಗೆ ಗಾಢ ಸಂಬಂಧವಿತ್ತು. ನೀವೆಲ್ಲ ಅವರ ಕುಟುಂಬದಂತೆ’ಎಂದು ಪ್ರಿಯಂಕಾ ಹೇಳಿದ್ದಾರೆ.
ಇಂದು ನಾವು ಬಹುದೊಡ್ಡ ಯುದ್ಧ ಮಾಡುತ್ತಿದ್ದೇವೆ. ರಾಹುಲ್ ಅದರ ನೇತೃತ್ವ ವಹಿಸಿದ್ದಾರೆ. ದೇಶ ನಿರ್ಮಾಣಕ್ಕೆ ಆಧಾರವಾಗಿದ್ದ ಮೌಲ್ಯಗಳಿಗಾಗಿ ನಾವು ಹೋರಾಡುತ್ತಿದ್ದೇವೆ. ನಮ್ಮ ಸಾಂವಿಧಾನಿಕ ಮೌಲ್ಯಗಳಿಗಾಗಿ ನಾವು ಹೋರಾಡುತ್ತಿದ್ದೇವೆ. ಪ್ರಜಾಪ್ರಭುತ್ವ, ಸಮಾನತೆಗಾಗಿ ಹೋರಾಡುತ್ತಿದ್ದೇವೆ. ಈ ಹೋರಾಟದಲ್ಲಿ ನೀವೆಲ್ಲರೂ ಪ್ರಮುಖ ಯೋಧರಾಗಿದ್ದೀರಿ’ಎಂದು ಪ್ರಿಯಾಂಕಾ ಹೇಳಿದ್ದಾರೆ.
ವಯನಾಡ್ ಕ್ಷೇತ್ರದಿಂದ ಆಯ್ಕೆಯಾದರೆ ಶಕ್ತಿ ಮೀರಿ ಜನರಿಗಾಗಿ ಶ್ರಮಿಸುತ್ತೇನೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.