ತಿರುವನಂತಪುರ: ವಯನಾಡ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಗಾಂಧಿ ಅವರು ಕಳೆದ ಹಣಕಾಸು ವರ್ಷದಲ್ಲಿ ₹46.39 ಲಕ್ಷ ಆದಾಯ ಗಳಿಸಿದ್ದಾರೆ. ಇದು ಅವರ ಪತಿ ರಾಬರ್ಟ್ ವಾದ್ರಾ ಅವರ ಆದಾಯಕ್ಕಿಂತ ಮೂರು ಪಟ್ಟು ಹೆಚ್ಚು. ಪ್ರಿಯಾಂಕಾ ಅವರು ₹11.99 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ.
ಉದ್ಯಮಿ ಆಗಿರುವ ರಾಬರ್ಟ್ ವಾದ್ರಾ ಅವರ ಆದಾಯ ಕಳೆದ ಹಣಕಾಸು ವರ್ಷ ₹15.09 ಲಕ್ಷ ಇತ್ತು.
ಲೋಕಸಭಾ ಉಪಚುನಾವಣೆಗೆ ಪ್ರಿಯಾಂಕಾ ಗಾಂಧಿ ಅವರು ನಾಮಪತ್ರ ಸಲ್ಲಿಸಿದ್ದು, ಈ ವೇಳೆ ಸಲ್ಲಿಸಿರುವ ಆದಾಯ ತೆರಿಗೆ ರಿಟರ್ನ್ಸ್‌ನಲ್ಲಿ ಅವರು ಈ ಮಾಹಿತಿ ನೀಡಿದ್ದಾರೆ.
ರಾಬರ್ಟ್ ಅವರ ಆದಾಯದಲ್ಲಿ ಕುಸಿತ ಕಂಡುಬಂದಿದೆ. 2019–20ನೇ ಹಣಕಾಸು ವರ್ಷದಲ್ಲಿ ಅವರ ಆದಾಯ ₹55.58 ಲಕ್ಷ ಇತ್ತು. ಆದರೆ, 2023–24ನೇ ಹಣಕಾಸು ವರ್ಷದಲ್ಲಿ ಆದಾಯವು ₹15.09 ಲಕ್ಷಕ್ಕೆ ಇಳಿದಿದೆ.
ಕಳೆದ ಹಣಕಾಸು ವರ್ಷದಲ್ಲಿ ಪತಿಯ ಆದಾಯಕ್ಕಿಂತ ಪ್ರಿಯಾಂಕಾ ಅವರ ಆದಾಯದಲ್ಲಿ ಹೆಚ್ಚಳ ಕಂಡುಬಂದಿದ್ದರೂ, ಅದರ ಹಿಂದಿನ ವಿತ್ತೀಯ ವರ್ಷಗಳಿಗೆ ಹೋಲಿಸಿದಲ್ಲಿ ಆದಾಯದಲ್ಲಿ ಕುಸಿತ ಕಂಡುಬಂದಿದೆ.
2019–20ರಲ್ಲಿ ಪ್ರಿಯಾಂಕಾ ಅವರ ಆದಾಯ ₹69.3 ಲಕ್ಷ ಇದ್ದಿದ್ದರೆ, 2020–21ರಲ್ಲಿ ಅದು ₹19.89 ಲಕ್ಷಕ್ಕೆ ಇಳಿದಿತ್ತು. ಆದಾಯದಲ್ಲಿ ಕುಸಿತಕ್ಕೆ ಕೋವಿಡ್–19 ಪಿಡುಗು ಕಾರಣ ಎನ್ನಲಾಗಿದೆ. ಆದರೆ, ನಂತರದ ವರ್ಷಗಳಲ್ಲಿ ಆದಾಯದಲ್ಲಿ ಏರಿಕೆ ಕಂಡುಬಂದಿದೆ ಎಂಬುದು ಅವರು ಸಲ್ಲಿಸಿರುವ ದಾಖಲೆಗಳಿಂದ ತಿಳಿದುಬರುತ್ತದೆ.
ಬಾಡಿಗೆ, ಬ್ಯಾಂಕುಗಳಿಂದ ಸಿಗುವ ಬಡ್ಡಿ ಹಾಗೂ ಹೂಡಿಕೆಗಳಿಂದ ಸಿಗುವ ಲಾಭಗಳೇ ಪ್ರಿಯಾಂಕಾ ಅವರ ಆದಾಯದ ಮೂಲ ಎಂದು ಉಲ್ಲೇಖಿಸಲಾಗಿದೆ.
ಪ್ರಿಯಾಂಕಾ ಗಾಂಧಿ ₹11.99 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದರೆ, ಪತಿ ರಾಬರ್ಟ್ ಅವರ ಆಸ್ತಿ ಮೌಲ್ಯ ₹75.61 ಕೋಟಿ. ಪ್ರಿಯಾಂಕಾ ಅವರು ₹15.75 ಲಕ್ಷ ಸಾಲ ಹೊಂದಿದ್ದರೆ, ಅವರ ಪತಿ ಹೊಂದಿರುವ ಸಾಲದ ಪ್ರಮಾಣ ₹10.03 ಕೋಟಿ
ಪ್ರಿಯಾಂಕಾ ಅವರು ಸುಲ್ತಾನಪುರದಲ್ಲಿ ಕೃಷಿ ಭೂಮಿ ಹಾಗೂ ಫಾರ್ಮ್‌ಹೌಸ್ ಹೊಂದಿದ್ದಾರೆ. ಇವು, ಅವರು ಹಾಗೂ ಅಣ್ಣ ರಾಹುಲ್ ಗಾಂಧಿ ಜಂಟಿ ಮಾಲೀಕತ್ವ ಹೊಂದಿವೆ. ಶಿಮ್ಲಾದಲ್ಲಿ ₹5.63 ಕೋಟಿ ಮೌಲ್ಯದ ಮನೆ, ₹1.15 ಕೋಟಿ ಮೌಲ್ಯದ ಚಿನ್ನದ ಒಡತಿಯೂ ಆಗಿದ್ದಾರೆ.
ಪ್ರಿಯಾಂಕಾ ವಿರುದ್ಧ ಮೂರು ಪ್ರಕರಣಗಳು ಇವೆ. ಬ್ರಿಟನ್‌ನ ಸಂಡರ್‌ಲ್ಯಾಂಡ್ ವಿಶ್ವವಿದ್ಯಾಲಯದಿಂದ 2010ರಲ್ಲಿ ಬೌದ್ಧ ಅಧ್ಯಯನದಲ್ಲಿ ಪಿಜಿ ಡಿಪ್ಲೊಮಾ ಪಡೆದಿದ್ದು, ಇದು ಅವರು ಹೊಂದಿರುವ ಗರಿಷ್ಠ ವಿದ್ಯಾರ್ಹತೆ ಎಂದೂ ಉಲ್ಲೇಖಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.