ಪ್ರಯಾಗ್ ರಾಜ್: ಉತ್ತರ ಪ್ರದೇಶ (ಪೂರ್ವ ವಲಯ) ಕಾಂಗ್ರೆಸ್ ಉಸ್ತುವಾರಿ ಪ್ರಿಯಾಂಕಾ ಗಾಂಧಿ ವಾದ್ರಾ ಸೋಮವಾರಗಂಗಾ ಯಾತ್ರೆ ಕೈಗೊಳ್ಳುವ ಮೂಲಕ ಚುನಾವಣಾ ಪ್ರಚಾರಕ್ಕೆಚಾಲನೆ ನೀಡಿದ್ದಾರೆ.
ಪ್ರಯಾಗ್‌ರಾಜ್ ಮತ್ತು ಮಿರ್ಝಾಪುರ್ ಜಿಲ್ಲೆಗಳಲ್ಲಿ ಮೂರು ದಿನಗಳ ಕಾಲ ಸುಮಾರು 140 ಕಿ.ಮೀ. ದೋಣಿಯಾನ ನಡೆಸಿ ಮತ ಯಾಚಿಸಲಿರುವ ಪ್ರಿಯಾಂಕಾ, ನದಿ ದಡಗಳಲ್ಲಿ ವಾಸಿಸುತ್ತಿರುವವರೊಡನೆ ಸಂವಾದ ನಡೆಸಿ ಕಾಂಗ್ರೆಸ್ ಮತ ನೀಡುವಂತೆ ಕೋರಲಿದ್ದಾರೆ.
ಮನೈಯಾ ಘಾಟ್‍ನಿಂದ ಆರಂಭವಾದ ಈ ದೋಣಿಯಾನವಾರಣಾಸಿಯ ಅಸ್ಸಿ ಘಾಟ್‍ನಲ್ಲಿ ಕೊನೆಗೊಳ್ಳಲಿದೆ.
ಗಂಗಾ ಯಾತ್ರೆ ಆರಂಭಿಸುವ ಮುನ್ನ ಪ್ರಿಯಾಂಕಾ ಅವರು ಬಡೇ ಹನುಮಾನ್ ದೇವಾಲಯ ಮತ್ತು ಪ್ರಯಾಗ್ ರಾಜ್ ಸಂಗಮದಲ್ಲಿ ಪೂಜೆ ಸಲ್ಲಿಸಿದ್ದಾರೆ.
ಕಾಂಗ್ರೆಸ್ ಶುಕ್ರವಾರವೇ ಪ್ರಿಯಾಂಕಾ ಅವರ ದೋಣಿ ವೇಳಾಪಟ್ಟಿ ಪ್ರಕಟಿಸಿತ್ತು. ಆದರೆ ದೋಣಿ ಪ್ರಚಾರಕ್ಕೆ ಅನುಮತಿ ದೊರೆತದ್ದು ಮಾತ್ರ ಶನಿವಾರ ರಾತ್ರಿ ಎಂದುಎನ್‌ಡಿಟಿವಿವರದಿ ಮಾಡಿದೆ.ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡ ನಂತರ ಉತ್ತರ ಪ್ರದೇಶಕ್ಕೆ ಇದು ಅವರ ಎರಡನೇ ಭೇಟಿ.
ಚುನಾವಣೆಯಲ್ಲಿ ಕಾಂಗ್ರೆಸ್ ಪರ ಅಲೆ ಎಬ್ಬಿಸಲು ಪ್ರಿಯಾಂಕಾದೋಣಿಯಾತ್ರೆಯನ್ನು ಬಳಸಲಿದ್ದಾರೆ. ಚುನಾವಣಾ ದೃಷ್ಟಿಯಿಂದ ಮುಖ್ಯ ಎನಿಸಿರುವ ಹಲವು ಸಮುದಾಯಗಳು ಉತ್ತರ ಪ್ರದೇಶದಲ್ಲಿ ಗಂಗಾನದಿಯ ಬದಿಯಲ್ಲಿಯೇ ವಾಸಿಸುತ್ತಿವೆ. ಬಹುತೇಕ ಸಮುದಾಯಗಳು ಇತರ ಹಿಂದುಳಿದ ವರ್ಗಗಳು ಅಥವಾ ಪರಿಶಿಷ್ಟ ಜಾತಿಗೆ ಸೇರಿವೆ. ಉತ್ತರ ಪ್ರದೇಶ ಚುನಾವಣೆಯಲ್ಲಿ ಈ ಸಮುದಾಯಗಳು ನಿರ್ಣಾಯಕ ಪಾತ್ರ ನಿರ್ವಹಿಸಲಿವೆ.
ದೋಣಿ ಸಂಚರಿಸುವ ಹಾದಿಯುದ್ದಕ್ಕೂ ಸಿಗುವ ದೇಗುಲಗಳು, ದರ್ಗಾಗಳಿಗೂ ಪ್ರಿಯಾಂಕಾ ಭೇಟಿ ನೀಡಲಿದ್ದಾರೆ. ‘ಗಂಗಾ ನದಿಯನ್ನು ಶುದ್ಧ ಮಾಡಿದ್ದೇವೆ’ ಎನ್ನುವ ಬಿಜೆಪಿ ಸರ್ಕಾರದ ಘೋಷಣೆಯನ್ನು ಅವರು ಈ ಪ್ರಯಾಣದ ಸಂದರ್ಭ ಭೇಟಿ ಮಾಡುವ ಜನರೊಂದಿಗೆ ಪ್ರಸ್ತಾಪಿಸಲಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಮೂಲಗಳ ಹೇಳಿಕೆಯನ್ನು ಎನ್‌ಡಿಟಿವಿ ಉಲ್ಲೇಖಿಸಿದೆ.
ಹೋಳಿ ಹಬ್ಬಕ್ಕೆ ಒಂದು ದಿನ ಮೊದಲು, ನರೇಂದ್ರ ಮೋದಿ ಅವರ ಸ್ವಕ್ಷೇತ್ರ ವಾರಣಾಸಿಯಲ್ಲಿ ಪ್ರಿಯಾಂಕಾರ ದೋಣಿಯಾತ್ರೆ ಮುಕ್ತಾಯವಾಗಲಿದೆ. ದೇಗುಲಗಳ ನಗರಿಯಲ್ಲಿ ಹಲವು ದೇಗುಲಗಳ ಸಂದರ್ಶನವನ್ನೂ ಕಾಂಗ್ರೆಸ್ ಯೋಜಿಸಿದೆ. ಇದರ ಜೊತೆಗೆ ವಾರಣಾಸಿಯ ನೇಕಾರರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿಯೂ ಅವರು ಪಾಲ್ಗೊಳ್ಳಲಿದ್ದಾರೆ. ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಆಯೋಜಿಸಿರುವ‘ಹೋಲಿ ಮಿಲನ್’ನಲ್ಲಿ ಪಾಲ್ಗೊಂಡು ಜನರ ಮನವೊಲಿಸುವ ಕೆಲಸ ಮಾಡಲಿದ್ದಾರೆ.
ಲೋಕಸಭೆಗೆ ಅತಿಹೆಚ್ಚು ಸದಸ್ಯರನ್ನು ಆರಿಸಿ ಕಳಿಸುವ ಉತ್ತರ ಪ್ರದೇಶವನ್ನು ನಿರ್ವಹಿಸುವಲ್ಲಿ ಕಾಂಗ್ರೆಸ್ ವಿಫಲವಾಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿರುವಾಗಲೇ ಕಾಂಗ್ರೆಸ್ ಪ್ರಿಯಾಂಕಾ ಅವರ ಪ್ರವಾಸ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಉತ್ತರ ಪ್ರದೇಶದ ಪೂರ್ವ ಭಾಗದ ಉಸ್ತುವಾರಿಯಾಗಿ ಒಂದು ತಿಂಗಳ ಹಿಂದಷ್ಟೇ ಘೋಷಿಸಲಾಯಿತು. ರಾಜ್ಯಕ್ಕೆ ಇದು ಅವರ ಎರಡನೇ ಭೇಟಿ.
ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷ ಮತ್ತು ಮಾಯಾವತಿ ಅವರ ಬಿಎಸ್‌ಪಿ ಜೊತೆಗೆ ಹೊಂದಾಣಿಕೆ ಸಾಧಿಸುವಲ್ಲಿ ಕಾಂಗ್ರೆಸ್ ವಿಫಲವಾಯಿತು. ದಲಿತ ಮತ್ತು ಅಲ್ಪಸಂಖ್ಯಾತರ ಮತಗಳು ಮೈತ್ರಿಕೂಟ ಮತ್ತು ಕಾಂಗ್ರೆಸ್ ನಡುವೆ ಹಂಚಿಕೆಯಾಗುವುದರಿಂದ ಬಿಜೆಪಿಗೆ ಲಾಭವಾಗಲಿದೆ ಎಂಬ ಲೆಕ್ಕಾಚಾರವು ಚಾಲ್ತಿಯಲ್ಲಿದೆ.
2014ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ 2 ಕ್ಷೇತ್ರಗಳಲ್ಲಿ (ಅಮೇಠಿ ಮತ್ತು ರಾಯಬರೇಲಿ) ಮಾತ್ರ ಜಯಗಳಿಸಿತ್ತು. ರಾಜ್ಯದಲ್ಲಿ ಚಲಾವಣೆಯಾದ ಒಟ್ಟು ಮತಗಳಲ್ಲಿ ಶೇ7ರಷ್ಟು ಕಾಂಗ್ರೆಸ್ ಪಡೆದಿತ್ತು.ಪ್ರಿಯಾಂಕಾ ಗಾಂಧಿ ಅವರು ರಾಜ್ಯದಲ್ಲಿ ಪ್ರಚಾರ ನಡೆಸುವುದರಿಂದ ಬಿಜೆಪಿ ಮೇಲೆ ಆಂಥ ಪರಿಣಾಮ ಉಂಟಾಗುವುದಿಲ್ಲ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈಚೆಗೆ ಹೇಳಿಕೆ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.