ವಯನಾಡ್(ಕೇರಳ): ವಯನಾಡ್ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಪ್ರಿಯಾಂಕಾ ಗಾಂಧಿ ವಾದ್ರಾ ನಾಮಪತ್ರ ಸಲ್ಲಿಸಿದರು. ಭರ್ಜರಿ ರೋಡ್ ಶೋ ಮೂಲಕ ಆಗಮಿಸಿದ ಅವರು ಚುನಾವಣಾ ರಾಜಕೀಯಕ್ಕೆ ಅಡಿಇಟ್ಟರು.
ಮಂಗಳವಾರ ರಾತ್ರಿಯೇ ಕಾಲಪೆಟ್ಟಾಗೆ ಆಗಮಿಸಿದ ಪ್ರಿಯಾಂಕಾಗೆ ಸಾವಿರಾರು ಕಾರ್ಯಕರ್ತರು ಮತ್ತು ಯುಡಿಎಫ್ ಸದಸ್ಯರು ಭರ್ಜರಿ ಸ್ವಾಗತ ನೀಡಿದರು. ಇಂದು ಪಕ್ಷದ ಮಾಜಿ ಅಧ್ಯಕ್ಷೆ, ತಾಯಿ ಸೋನಿಯಾ ಗಾಂಧಿ ಮತ್ತು ಸಹೋದರ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಜೊತೆ ತೆರೆದ ವಾಹನದಲ್ಲಿ ಭರ್ಜರಿ ರೋಡ್ ಶೊ ನಡೆಸಿದರು.
ಪ್ರಿಯಾಂಕಾ ಪತಿ ರಾಬರ್ಟ್ ವಾದ್ರಾ ವಾಹನದಲ್ಲಿ ಕಂಡುಬಂದರು. ಪಕ್ಷದ ಹಿರಿಯ ನಾಯಕರು, ಐಯುಎಂಎಲ್ ನಾಯಕರೂ ಈ ಸಂದರ್ಭ ಉಪಸ್ಥಿತರಿದ್ದರು. ಅಮೇಠಿ ಸಂಸದ ಕಿಶೋರ್ ಲಾಲ್ ಶರ್ಮಾ ಸಹ ಪ್ರಿಯಾಂಕಾಗೆ ಸಾಥ್ ನೀಡಿದ್ದರು.
ಸೇರಿದ್ದ ಜನರತ್ತ ಕೈಬಿಸಿ ಸಾಗಿದ ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ, ಯುಡಿಎಫ್ ಬೆಂಬಲಿಸುವ ಹೆಡ್‌ಬ್ಯಾಂಡ್ ಧರಿಸಿದ್ದ ಬಾಲಕಿಯನ್ನು ಕರೆದು ವಾಹನಕ್ಕೆ ಹತ್ತಿಸಿಕೊಂಡರು.
ಪಕ್ಷದ ಧ್ವಜಗಳನ್ನು ಹಿಡಿದಿದ್ದ ಕಾರ್ಯಕರ್ತರು ಪಕ್ಷದ ಬಾವುಟದ ಬಣ್ಣವಿದ್ದ ಬಲೂನುಗಳನ್ನು ಹಾರಿಸಿ, ಡೋಲು ಬಾರಿಸಿ ಸಂಭ್ರಮಿಸಿದರು.
ಪ್ರಿಯಾಂಕಾ ಮತ್ತು ಸೋನಿಯಾ ಮಂಗಳವಾರ ರಾತ್ರಿಯೇ ವಯನಾಡ್‌ಗೆ ಆಗಮಿಸಿದ್ದರೆ, ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಹೆಲಿಕಾಪ್ಟರ್ ಮೂಲಕ ಇಂದು ಆಗಮಿಸಿದರು.
ಎಲ್‌ಡಿಎಫ್‌ನ ಸತ್ಯನ್ ಮೊಕೇರಿ ಮತ್ತು ಬಿಜೆಪಿಯ ನವ್ಯಾ ಹರಿದಾಸ್ ಪ್ರಿಯಾಂಕಾ ವಿರುದ್ಧ ಸ್ಪರ್ಧಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.