ಮೀರಠ್ (ಪಿಟಿಐ): ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಆಪ್ತ ಸಹಾಯಕ ಸಂದೀಪ್ ಸಿಂಗ್ ವಿರುದ್ಧ ಬೆದರಿಕೆ ಹಾಕಿದ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಪಕ್ಷದ ಸದಸ್ಯೆ, ನಟಿ ಅರ್ಚನಾ ಗೌತಮ್ ಅವರ ತಂದೆ ಗೌತಮ್ ಬುದ್ಧ ಅವರು ಸಂದೀಪ್ ವಿರುದ್ಧ ದೂರು ನೀಡಿದ್ದಾರೆ. ದೂರಿನ ಆಧಾರದಲ್ಲಿ ಸಂದೀಪ್ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 504 (ಉದ್ದೇಶಪೂರ್ವಕ ಅವಮಾನ), 506 (ಕ್ರಿಮಿನಲ್ ಬೆದರಿಕೆ) ಮತ್ತು 509 (ಮಹಿಳೆಯ ಘನತೆಗೆ ಧಕ್ಕೆ ತರುವಂತ ಪದಗಳ ಬಳಕೆ, ಹಾವಭಾವ ಅಥವಾ ಕ್ರಿಯೆ) ಅಡಿ ದೂರು ದಾಖಲಿಸಲಾಗಿದೆ ಎಂದು ಮೀರಠ್‌ನ ಹಿರಿಯ ಎಸ್‌ಪಿ ರೋಹಿತ್ ಸಿಂಗ್ ಸಜ್ವಾನ್ ಅವರು ತಿಳಿಸಿದ್ದಾರೆ.
ಸಂದೀಪ್ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ (ದೌರ್ಜನ್ಯ ತಡೆ) ಕಾಯ್ದೆ ಅಡಿಯೂ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣಗಳನ್ನು ಪರ್ತಾಪುರ್ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಕಳೆದ ತಿಂಗಳು ಛತ್ತೀಸಗಢದ ರಾಯಪುರದಲ್ಲಿ ನಡೆದಿದ್ದ ಪಕ್ಷದ ಮಹಾಧಿವೇಶನ ವೇಳೆ ಸಂದೀಪ್ ತಮ್ಮ ಮಗಳಿಗೆ ಕರೆಮಾಡಿ ಪ್ರಿಯಾಂಕಾ ಅವರ ಭೇಟಿಗಾಗಿ ರಾಯಪುರಕ್ಕೆ ಬರುವಂತೆ ಹೇಳಿದ್ದನು. ಮಗಳು ಅಲ್ಲಿಗೆ ಹೋಗಾಗ ಆಕೆಯ ಜೊತೆ ಅನುಚಿತವಾಗಿ ವರ್ತಿಸಿ, ಕೊಲೆ ಬೆದರಿಕೆ ಒಡ್ಡಿದ್ದನು. ಇದೇವೇಳೆ, ಆಕೆ ವಿರುದ್ಧ ಜಾತಿನಿಂದಕ ಪದಗಳನ್ನೂ ಬಳಿಸಿದ್ದನು ಎಂದು ಅರ್ಚನಾ ತಂದೆ ದೂರಿನಲ್ಲಿ ಹೇಳಿದ್ದಾರೆ.
2022ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಅರ್ಚನಾ ಅವರು ಹಸ್ತಿನಾಪುರ ಮೀಸಲು ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್‌ನಲ್ಲಿ ಸ್ಪರ್ಧಿಸಿ ಸೋತಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.