ನವದೆಹಲಿ: ಹರಿದ್ವಾರದಲ್ಲಿ ಇತ್ತೀಚೆಗೆ ನಡೆದ 'ಧರ್ಮ ಸಂಸತ್' ಕಾರ್ಯಕ್ರಮದಲ್ಲಿ ದ್ವೇಷಪೂರಿತ ಹಾಗೂ ಪ್ರಚೋದನಕಾರಿ ಭಾಷಣವನ್ನು ತೀವ್ರವಾಗಿ ಖಂಡಿಸಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿವಾದ್ರಾ, ಹಿಂಸಾಚಾರವನ್ನು ಪ್ರಚೋದಿಸುವವರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಇಂತಹ ಕೃತ್ಯಗಳು ಸಂವಿಧಾನ ಮತ್ತು ಕಾನೂನನ್ನು ಉಲ್ಲಂಘಿಸುತ್ತವೆ ಎಂದು ಹೇಳಿದ್ದಾರೆ. ಮಾಜಿ ಪ್ರಧಾನಿಯ ಹತ್ಯೆ ಹಾಗೂ ವಿವಿಧ ಸಮುದಾಯಗಳ ನಡುವೆ ದ್ವೇಷ ಹಾಗೂ ಹಿಂಸಾಚಾರವನ್ನು ಪ್ರಚೋದಿಸುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳಿಂದ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಹ ಕಠಿಣ ಕ್ರಮಕ್ಕೆ ಒತ್ತಾಯಿಸಿದೆ.
ಟಿಎಂಸಿ ರಾಷ್ಟ್ರೀಯ ವಕ್ತಾರ ಸಾಕೇತ್ ಗೋಖಲೆ, ಹರಿದ್ವಾರ ಜಿಲ್ಲೆಯ ಜ್ವಾಲಾಪುರ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ನೀಡಿದ್ದಾರೆ.
ಹರಿದ್ವಾರದ ವೇದ ನಿಕೇತನ್ ಧಾಮ್‌ನಲ್ಲಿ ಡಿಸೆಂಬರ್ 17ರಿಂದ 20ರ ವರೆಗೆ ನಡೆದ ಧರ್ಮ ಸಂಸದ ಕಾರ್ಯಕ್ರಮವನ್ನು ಜುನಾ ಅಖಾಡಾದ ಯತಿ ನರಸಿಂಹಾನಂದ ಗಿರಿ ಆಯೋಜಿಸಿದ್ದರು. ಮುಸ್ಲಿಂ ವಿರೋಧಿ ಹಾಗೂ ಹಿಂಸಾಚಾರಕ್ಕೆ ಪ್ರಚೋದನೆ ನೀಡುವ ಭಾಷಣ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೊಗಳು ಹರಿದಾಡುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.