ನವದೆಹಲಿ: ಸಂವಿಧಾನವನ್ನು ವಿರೋಧಿಸುವ ಮತ್ತು ಅದನ್ನು ನಾಶಗೊಳಿಸಲು ಕರೆ ನೀಡುವವರು ‘ಸಂವಿಧಾನ ಹತ್ಯಾ ದಿವಸ್’ ಆಚರಿಸುವ ಮೂಲಕ ನಕಾರಾತ್ಮಕ ರಾಜಕಾರಣದಲ್ಲಿ ತೊಡುಗುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
1975ರ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಅಧಿಕಾರದ ದುರುಪಯೋಗದ ವಿರುದ್ಧ ಹೋರಾಡಿದವರಿಗೆ ಗೌರವ ಸಲ್ಲಿಸಲು ಜೂನ್ 25 ಅನ್ನು ‘ಸಂವಿಧಾನ ಹತ್ಯಾ ದಿವಸ್’ ಎಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಶುಕ್ರವಾರ ಘೋಷಣೆ ಮಾಡಿದೆ.
ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಪ್ರಿಯಾಂಕಾ, ‘ದೇಶದ ಮಹಾನ್ ವ್ಯಕ್ತಿಗಳು ತಮ್ಮ ಐತಿಹಾಸಿಕ ಹೋರಾಟದ ಮೂಲಕ ಸ್ವಾತಂತ್ರ್ಯವನ್ನು ತಂದು ಕೊಟ್ಟಿದ್ದಾರೆ ಮತ್ತು ಸಂವಿಧಾನ ರಚಿಸಿದ್ದಾರೆ. ಸಂವಿಧಾನ ರಚಿಸಿದವರು ಮತ್ತು ಅದರಲ್ಲಿ ನಂಬಿಕೆ ಹೊಂದಿರುವವರು ಮಾತ್ರ ಸಂವಿಧಾನವನ್ನು ರಕ್ಷಿಸುತ್ತಾರೆ’ ಎಂದು ಬರೆದುಕೊಂಡಿದ್ದಾರೆ.
‘ಸಂವಿಧಾನದ ಅನುಷ್ಠಾನವನ್ನು ವಿರೋಧಿಸುವವರು, ಸಂವಿಧಾನದ ಪರಿಶೀಲನೆಗೆ ಆಯೋಗ ರಚಿಸುವವರು ಮತ್ತು ಅದನ್ನು ನಾಶಗೊಳಿಸಲು ಕರೆ ನೀಡುವವರು, ತಮ್ಮ ನಿರ್ಧಾರಗಳು ಮತ್ತು ಕಾರ್ಯಗಳ ಮೂಲಕ ಪದೇ ಪದೇ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಆತ್ಮದ ಮೇಲೆ ದಾಳಿ ನಡೆಸುವವರು ‘ಸಂವಿಧಾನ ಹತ್ಯಾ ದಿವಸ್’ ಆಚರಿಸುವ ಮೂಲಕ ನಕಾರಾತ್ಮಕ ರಾಜಕಾರಣದಲ್ಲಿ ತೊಡಗಿದ್ದಾರೆ. ಇದರಲ್ಲಿ ಆಶ್ಚರ್ಯವೇನಿದೆ?’ ಎಂದು ಪ್ರಿಯಾಂಕಾ ಹೇಳಿದ್ದಾರೆ.
‘ಸಂವಿಧಾನ ಹತ್ಯಾ ದಿವಸ್’ ಘೋಷಣೆಯನ್ನು ಕಟುವಾಗಿ ಟೀಕಿಸಿರುವ ಕಾಂಗ್ರೆಸ್, ಜೂನ್ 4ನ್ನು 'ಮೋದಿ ಮುಕ್ತಿ ದಿವಸ್' ಎಂದು ಆಚರಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.