ವಾರಾಣಸಿ/ಲಖನೌ: ಭೂವಿವಾದದ ಹಿನ್ನೆಲೆಯಲ್ಲಿ ಬುಡಕಟ್ಟು ಸಮುದಾಯದ 10 ಜನರನ್ನು ಗುಂಡಿಟ್ಟು ಕೊಂದಿದ್ದ ಘಟನೆಗೆ ಸಂಬಂಧಿಸಿ ಇಲ್ಲಿನ ಸೋನ್‌ಭದ್ರಾ ಗ್ರಾಮಕ್ಕೆ ಭೇಟಿ ನೀಡಲು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಮಂಗಳವಾರ ತೆರಳಿದರು.
ಒಂದು ತಿಂಗಳ ಹಿಂದೆ ಗ್ರಾಮಕ್ಕೆ ತೆರಳದಂತೆ ಉತ್ತರ ಪ್ರದೇಶ ಆಡಳಿತಮಿರ್ಜಾಪುರದಲ್ಲಿಯೇ ಅವರಿಗೆ ತಡೆಯೊಡ್ಡಿತ್ತು. ವಾರಾಣಸಿ ತಲುಪಿದ ಕೂಡಲೇ ತಮ್ಮ ಭೇಟಿ ಕುರಿತಂತೆ ‘ನನ್ನ ಸೋದರ, ಸೋದರಿಯರು, ಮಕ್ಕಳನ್ನು ಭೇಟಿ ಮಾಡಲು, ಆರೋಗ್ಯ ವಿಚಾರಿಸಲು ಗ್ರಾಮಕ್ಕೆ ತೆರಳುತ್ತಿದ್ದೇನೆ’ ಎಂದು ಪ್ರಿಯಾಂಕಾ ಟ್ವೀಟ್ ಮಾಡಿದರು.
ಚುನಾರ್ ಕೋಟೆಗೆ ಬಂದು ನನ್ನನ್ನು ಭೇಟಿ ಮಾಡಿದ್ದ ಗ್ರಾಮದ ಸಂತ್ರಸ್ತ ಕುಟುಂಬಗಳ ಸದಸ್ಯರಿಗೆ ಗ್ರಾಮಕ್ಕೆ ಭೇಟಿ ನೀಡುವುದಾಗಿ ನಾನು ಭರವಸೆ ನೀಡಿದ್ದೆ ಎಂದು ಹೇಳಿದರು.
ಜುಲೈ 17ರಂದು ಬುಡಕಟ್ಟು ಸಮುದಾಯದ 10 ಜನರಿಗೆ ಗ್ರಾಮದ ಮಾಜಿ ಪ್ರಧಾನ ಗುಂಡಿಟ್ಟು ಹತ್ಯೆ ಮಾಡಿದ್ದರು. ಎರಡು ದಿನಗಳ ನಂತರ ಪ್ರಿಯಾಂಕಾ ಗ್ರಾಮಸ್ಥರ ಭೇಟಿಗೆ ಮುಂದಾಗಿದ್ದರು. ಉದ್ವಿಗ್ನ ಸ್ಥಿತಿಯಿಂದಾಗಿ 144ನೇ ಸೆಕ್ಷನ್ ಜಾರಿ ಮಾಡಿದ್ದ ಉತ್ತರ ಪ್ರದೇಶ ಆಡಳಿತ ಭೇಟಿಗೆ ಅವಕಾಶ ನೀಡದೇ ಮಿರ್ಜಾಪುರದಲ್ಲಿಯೇ ತಡೆಯೊಡ್ಡಿತ್ತು.
ಜಿಲ್ಲಾಡಳಿತ ವಶಕ್ಕೆ ಪಡೆದ ನಂತರ ಚುನಾರ್ ಕೋಟೆಯಲ್ಲಿಯೇ ಪ್ರಿಯಾಂಕಾ ಇಡೀ ರಾತ್ರಿ ಕಳೆದಿದ್ದರು. ವಶಕ್ಕೆ ತೆಗೆದುಕೊಂಡಿದ್ದ ಕ್ರಮವನ್ನು ವಿರೋಧಪಕ್ಷಗಳು ಪ್ರಜಾಪ್ರಭುತ್ವ ವಿರೋಧಿ ಮತ್ತು ಅಸಾಂವಿಧಾನಿಕ ಕ್ರಮ ಎಂದು ಟೀಕಿಸಿದ್ದವು.
ವಾರಾಣಸಿ ವಿಮಾನನಿಲ್ದಾಣಕ್ಕೆ ಮಂಗಳವಾರ ಬಂದಿಳಿದ ಪ್ರಿಯಾಂಕಾ ಅವರನ್ನು ಕಾಂಗ್ರೆಸ್ ಮುಖಂಡರು ಬರಮಾಡಿಕೊಂಡರು. ‘ಗ್ರಾಮಸ್ಥರ ಜೊತೆಗೆ ಚರ್ಚಿಸಿ, ಘಟನೆಯ ಬಗ್ಗೆ ಪ್ರಥಮ ಹಂತದ ಮಾಹಿತಿ ಪಡೆಯುತ್ತೇನೆ. ಗ್ರಾಮಸ್ಥರ ರಕ್ಷಣೆಗಾಗಿ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆಯೂ ಮಾಹಿತಿ ಪಡೆಯುತ್ತೇನೆ’ ಎಂದರು.
ಸಂತ್ರಸ್ತ ಕುಟುಂಬಗಳಿಗೆ ಆರ್ಥಿಕ ನೆರವು ನೀಡುವ ಭರವಸೆಯನ್ನು ಮುಖಂಡರು ನೀಡಿದ್ದರು. ಅದರ ಪ್ರಕಾರ, ಮುಖಂಡರ ನಿಯೋಗವೊಂದು ಉಂಭಾ ಗ್ರಾಮಕ್ಕೆ ತೆರಳಿ ಆರ್ಥಿಕ ನೆರವನ್ನು ಹಸ್ತಾಂತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.