ಉಜ್ಜಯಿನಿ: ಕೆಲವು ದಿನಗಳ ಹಿಂದೆ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ರಾಷ್ಟ್ರೀಯ ಭದ್ರತಾ ಕಾಯ್ದೆ ಅಡಿಯಲ್ಲಿ (ಎನ್‌ಎಸ್‌ಎ) ಕೆಲವರ ವಿರುದ್ಧ ಪ್ರಕರಣ ದಾಖಲಿಸಿರುವುದನ್ನು ಖಂಡಿಸಿರುವ ಕಾಂಗ್ರೆಸ್‌ನ ಹಿರಿಯ ಮುಖಂಡ ದಿಗ್ವಿಜಯ್ ಸಿಂಗ್, 'ಖಾಜಿ ಸಾಹಬ್ ಜಿಂದಾಬಾದ್' ಘೋಷಣೆಯನ್ನು 'ಪಾಕಿಸ್ತಾನ ಜಿಂದಾಬಾದ್' ಎಂದು ತಿರುಚಲಾಗಿದೆ ಎಂದು ಹೇಳಿದ್ದಾರೆ.
ನಕಲಿ ಸುದ್ದಿಗಳ ಆಧಾರದಲ್ಲಿ ಘೋಷಣೆಯನ್ನು ತಿರುಚಲಾಗಿದೆ. ಈ ವಿಷಯವನ್ನು ಪರಿಶೀಲಿಸಿದ ಬಳಿಕ ಮಧ್ಯಪ್ರದೇಶದ ಪೊಲೀಸರು ಕ್ರಮ ಕೈಗೊಳ್ಳಬೇಕಿತ್ತು. ಈ ಪ್ರಕರಣದಲ್ಲಿ ಯಾರನ್ನಾದರೂ ಬಂಧಿಸಿದ್ದರೆ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ಇದಕ್ಕೆ ತಿರುಗೇಟು ನೀಡಿರುವ ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ, ದಿಗ್ವಿಜಯ್ ಸಿಂಗ್ ಅವರು ದೇಶವಿರೋಧಿ ಶಕ್ತಿಗಳನ್ನು ಬೆಂಬಲಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಘೋಷಣೆಗಳನ್ನು ಕೂಗಿರುವುದಕ್ಕೆ ಸಂಬಂಧಿಸಿದಂತೆ 16 ಮಂದಿಯನ್ನು ಗುರುತಿಸಲಾಗಿದೆ. ಉಳಿದವರನ್ನು ಪತ್ತೆಹಚ್ಚುವ ಪ್ರಯತ್ನ ನಡೆಯುತ್ತಿದೆ ಎಂದು ಉಜ್ಜಯಿನಿ ಪೊಲೀಸ್ ವರಿಷ್ಠಾಧಿಕಾರಿ ಸತ್ಯೇಂದ್ರ ಶುಕ್ಲಾ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.