ನವದೆಹಲಿ: ಸುಳ್ಳು ಮಾಹಿತಿ ನೀಡಿದ ಆರೋಪದ ಮೇಲೆ ಐಎಎಸ್ ಪ್ರೊಬೇಷನರಿ ಅಧಿಕಾರಿ ಪೂಜಾ ಖೇಡ್ಕರ್ (32) ಅವರ ನೇಮಕಾತಿ ಆದೇಶವನ್ನು ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಬುಧವಾರ ರದ್ದುಗೊಳಿಸಿದೆ.
ಅದರ ಜತೆಗೆ ಭವಿಷ್ಯದ ಎಲ್ಲ ಪರೀಕ್ಷೆಗಳು ಮತ್ತು ಆಯ್ಕೆಗಳಿಂದ ಅವರನ್ನು ಆಯೋಗ ಡಿಬಾರ್ ಮಾಡಿದೆ.
‘ಲಭ್ಯವಿರುವ ಎಲ್ಲ ದಾಖಲಾತಿಗಳನ್ನು
ಎಚ್ಚರಿಕೆಯಿಂದ ಪರಿಶೀಲಿಸಿದ್ದು, ಅವರು ನಾಗರಿಕ ಸೇವಾ ಪರೀಕ್ಷಾ (ಸಿಎಸ್‌ಇ–2022) ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂಬುದು ಗೊತ್ತಾಗಿದೆ’ ಎಂದು ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ.
‘2023ರ ಬ್ಯಾಚ್‌ನ ಐಎಎಸ್ ಪ್ರೊಬೇಷನರಿ ಅಧಿಕಾರಿಯಾದ (ಸಿಎಸ್‌ಇ–2022) ಪೂಜಾ ಖೇಡ್ಕರ್ ಅವರ ನೇಮಕಾತಿಯನ್ನು ರದ್ದುಗೊಳಿಸಲಾಗಿದೆ ಮತ್ತು ಮುಂದಿನ ಎಲ್ಲ ಪರೀಕ್ಷೆಗಳು ಅಥವಾ ಆಯ್ಕೆಗಳಿಂದ ಅವರನ್ನು ಶಾಶ್ವತವಾಗಿ ಡಿಬಾರ್ ಮಾಡಲಾಗಿದೆ’ ಎಂದು ಯುಪಿಎಸ್‌ಸಿ ಪ್ರಕಟಣೆಯಲ್ಲಿ ಹೇಳಿದೆ.
2009ರಿಂದ 2023ರವರೆಗಿನ 15 ವರ್ಷಗಳ ಅವಧಿಯ ಸಿಎಸ್‌ಇಗೆ ಅಂತಿಮವಾಗಿ ಶಿಫಾರಸು ಮಾಡಲಾದ 15,000 ಅಭ್ಯರ್ಥಿಗಳ ಲಭ್ಯ ದತ್ತಾಂಶಗಳನ್ನು ಪರಿಶೀಲಿಸಲಾಗಿದೆ. ಈ ಅಭ್ಯರ್ಥಿಗಳು ತೆಗೆದುಕೊಂಡ ಪರೀಕ್ಷಾ ಪ್ರಯತ್ನಗಳನ್ನೂ ಪರಿಶೀಲಿಸಲಾಗಿದೆ. ಆದರೆ ಖೇಡ್ಕರ್ ಅವರನ್ನು ಹೊರತುಪಡಿಸಿ ಬೇರೆ ಯಾರೂ ಸಿಎಸ್‌ಇ ನಿಯಮಗಳನ್ನು ಉಲ್ಲಂಘಿಸಿರುವುದು
ಕಂಡುಬಂದಿಲ್ಲ ಎಂದಿದೆ ಆಯೋಗ. .
ಹೆತ್ತವರ ಹೆಸರೂ ಬದಲು:
‘ಖೇಡ್ಕರ್ ಅವರು ತಮ್ಮ ಹೆಸರನ್ನಷ್ಟೇ ಅಲ್ಲದೆ, ತಮ್ಮ ಹೆತ್ತವರ ಹೆಸರನ್ನೂ ಬದಲಿಸಿರುವುದು ಗೊತ್ತಾಗಿದೆ. ಹೀಗಾಗಿ ಅವರು, ನಿಗದಿಪಡಿಸಿರುವ ಪರೀಕ್ಷಾ ಪ್ರಯತ್ನಗಳ ಮಿತಿಯನ್ನು ಮೀರಿದ್ದಾರೆಯೇ ಎಂಬುದನ್ನು ಪತ್ತೆ ಹಚ್ಚಲು ಸಾಧ್ಯವಾಗಲಿಲ್ಲ’ ಎಂದು ಅದು ಹೇಳಿದೆ.
ಇಂತಹ ಪ್ರಕರಣಗಳು ಭವಿಷ್ಯದಲ್ಲಿ ಮರುಳಿಸದಂತೆ ನೋಡಿಕೊಳ್ಳಲು ಪ್ರಮಾಣಿತ ಕಾರ್ಯಾಚರಣೆ ವಿಧಾನ
ವನ್ನು (ಎಸ್‌ಒಪಿ) ಮತ್ತಷ್ಟು ಬಲಪಡಿಸಲಾಗುವುದು ಎಂದು ಅದು ವಿವರಿಸಿದೆ.
ನೋಟಿಸ್‌ಗೆ ಪ್ರತಿಕ್ರಿಯಿಸದ ಪೂಜಾ:
ತನ್ನ ಗುರುತನ್ನು ಮರೆ ಮಾಚುವ ಮೂಲಕ ಪರೀಕ್ಷಾ ನಿಯಮಗಳನ್ನು ಉಲ್ಲಂಘಿಸಿ, ವಂಚಿಸಿದ್ದಕ್ಕಾಗಿ ಯುಪಿಎಸ್‌ಸಿ ಜುಲೈ 18ರಂದು ಪೂಜಾ ಮನೋರಮಾ ದಿಲೀಪ್ ಖೇಡ್ಕರ್ ಅವರಿಗೆ ಶೋಕಾಸ್ ನೋಟಿಸ್ ನೀಡಿತ್ತು. ಅದಕ್ಕೆ ಜುಲೈ 25ರೊಳಗೆ ಪ್ರತಿಕ್ರಿಯಿಸುವಂತೆ ಪೂಜಾ ಅವರಿಗೆ ಸೂಚಿಸಲಾಗಿತ್ತು. ಆದರೆ ಅವರು ಅಗತ್ಯ ದಾಖಲೆಗಳನ್ನು ಸಂಗ್ರಹಿಸಲು ಆಗಸ್ಟ್ 4ರವರೆಗೆ ಸಮಯ ಕೋರಿದ್ದರು. ಕೋರಿಕೆಯನ್ನು ಮಾನ್ಯ ಮಾಡಿದ್ದ ಆಯೋಗವು ಅವರಿಗೆ ಪ್ರತಿಕ್ರಿಯೆ ನೀಡಲು ಜುಲೈ 30ರ ಮಧ್ಯಾಹ್ನ 3.30ರವರೆಗೆ ಅಂತಿಮ ಅವಕಾಶ ನೀಡಿತ್ತು. ಆದರೆ ಈ ನಿಗದಿತ ಅವಧಿಯಲ್ಲಿ ಪೂಜಾ ಅವರು ತಮ್ಮ ವಿವರಣೆ ನೀಡುವಲ್ಲಿ ವಿಫಲರಾಗಿದ್ದಾರೆ ಎಂದು ಆಯೋಗ ಮಾಹಿತಿ ನೀಡಿದೆ.
ಪೂಜಾ ಅವರು ಐಎಎಸ್ ಪ್ರೊಬೇಷನರಿ ಅವಧಿಯಲ್ಲಿ ಪುಣೆಯಲ್ಲಿ ಸೇವೆಗೆ ನಿಯೋಜಿತರಾಗಿದ್ದ ವೇಳೆ ತಮ್ಮ ಕಾರ್ಯವೈಖರಿಯಿಂದ ಚರ್ಚೆಗೆ ಗ್ರಾಸವಾಗಿದ್ದರು. ತಮ್ಮ ಖಾಸಗಿ ಕಾರಿಗೆ ಸರ್ಕಾರಿ ಲಾಂಛನ, ಕೆಂಪು ದೀಪ ಅಳವಡಿಸಿದ್ದು ವಿವಾದಕ್ಕೀಡಾಗಿತ್ತು. ಇದರ ಬೆನ್ನಲ್ಲೇ ನಕಲಿ ದಾಖಲೆ ಸಲ್ಲಿಕೆಗೆ ಸಂಬಂಧಿಸಿದಂತೆ ಆಯೋಗವು ಪೂಜಾ ವಿರುದ್ಧ ಎಫ್‌ಐಆರ್ ದಾಖಲಿಸಿತ್ತು.
ನಿರಿಕ್ಷಣಾ ಜಾಮೀನಿಗೆ ಅರ್ಜಿ: ಇಂದು ಆದೇಶ
ನವದೆಹಲಿ: ನಕಲಿ ದಾಖಲೆಗಳನ್ನು ಸಲ್ಲಿಸಿ, ವಂಚಿಸಿರುವ ಆರೋಪ ಎದುರಿಸುತ್ತಿರುವ ಪ್ರೊಬೇಷನರಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಅವರು ಸಲ್ಲಿಸಿರುವ ನಿರಿಕ್ಷಣಾ ಜಾಮೀನು ಅರ್ಜಿ ಕುರಿತ ಆದೇಶವನ್ನು ಗುರುವಾರ (ಆ.1) ಪ್ರಕಟಿಸುವುದಾಗಿ ದೆಹಲಿ ನ್ಯಾಯಾಲಯ ಹೇಳಿದೆ.
‘ಹಿರಿಯ ಅಧಿಕಾರಿಯೊಬ್ಬರ ವಿರುದ್ಧ ಲೈಂಗಿಕ ಶೋಷಣೆಯ ದೂರು ಸಲ್ಲಿಸಿದ್ದಕ್ಕಾಗಿ ನನ್ನನ್ನು ಗುರಿಯಾಗಿಸಲಾಗಿದೆ. ನನ್ನನ್ನು ಬಂಧಿಸುವ ಬೆದರಿಕೆ ಇದೆ. ಹೀಗಾಗಿ ನಿರಿಕ್ಷಣಾ ಜಾಮೀನು ಮಂಜೂರು ಮಾಡಬೇಕು’ ಎಂದು ಪೂಜಾ ಕೋರಿದರು. ಇದನ್ನು ವಿರೋಧಿಸಿದ ಸರ್ಕಾರಿ ವಕೀಲರು, ‘ಪೂಜಾ ಪರೀಕ್ಷಾ ವ್ಯವಸ್ಥೆಯನ್ನು ವಂಚಿಸಿದ್ದಾರೆ’ ಎಂದರು. ಹೇಳಿದರು. ವಾದ, ಪ್ರತಿವಾದ ಆಲಿಸಿದ ಹೆಚ್ಚುವರಿ ಸೆಷನ್ ನ್ಯಾಯಾಧೀಶ ದೇವೇಂದರ್ ಕುಮಾರ್ ಜಂಗಾಲ ಅವರು, ಆದೇಶವನ್ನು ಕಾಯ್ದಿರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.