ಅಗರ್ತಲಾ: ರೋಗಿಯೊಬ್ಬರ ಶಸ್ತ್ರಚಿಕಿತ್ಸೆ ನಡೆಸುತ್ತಿದ್ದ ಮೂಳೆ ವಿಭಾಗದ ಇಬ್ಬರು ಶಸ್ತ್ರಚಿಕಿತ್ಸಕರಿಗೆ ಉಪಕರಣ ಪೂರೈಕೆದಾರರೊಬ್ಬರು ಆನ್‌ಲೈನ್ ಮೂಲಕ ಮಾರ್ಗದರ್ಶನ ಮಾಡುತ್ತಿದ್ದ ವಿಡಿಯೊ ಹರಿದಾಡುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ತ್ರಿಪುರಾ ಸರ್ಕಾರದ ಆರೋಗ್ಯ ಇಲಾಖೆ, ತನಿಖೆಗೆ ಆದೇಶಿಸಿದೆ.
ರಾಜ್ಯ ಸರ್ಕಾರ ನಡೆಸುತ್ತಿರುವ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಒಂದಾಗಿರುವ ಇಂದಿರಾ ಗಾಂಧಿ ಸ್ಮಾರಕ ಆಸ್ಪತ್ರೆಯಲ್ಲಿ ಜ. 19ರಂದು ಈ ಘಟನೆ ನಡೆದಿದೆ. ವೈದ್ಯರಿಗೆ ಮಾರ್ಗದರ್ಶನ ಮಾಡಿದ ವ್ಯಕ್ತಿಯನ್ನು ಜಂತು ದೇವನಾಥ್ ಎಂದು ಗುರುತಿಸಲಾಗಿದೆ. ಇವರು ಮೂಳೆ ಸಂಬಂಧಿತ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಅಳವಡಿಸುವ ಇಂಪ್ಲಾಂಟ್ ಉಪಕರಣಗಳ ಪೂರೈಕೆದಾರ ಎಂದೆನ್ನಲಾಗಿದೆ.
‘ಘಟನೆ ಕುರಿತಂತೆ ಆರೋಗ್ಯ ಇಲಾಖೆಯ ಜಂಟಿ ನಿರ್ದೇಶಕ ಡಾ. ಸೌವಿಕ್ ದೇಬರ್ಮಾ ಅವರ ನೇತೃತ್ವದ ನಾಲ್ಕು ಸದಸ್ಯರ ಸಮಿತಿಯು ತನಿಖೆ ನಡೆಸಲಿದೆ. ವಾರದೊಳಗಾಗಿ ವರದಿ ನೀಡಲು ಸೂಚಿಸಲಾಗಿದೆ’ ಎಂದು ಆರೋಗ್ಯ ಇಲಾಖೆಯ ನಿರ್ದೇಶಕಿ ಡಾ. ಸುಪ್ರಿಯಾ ಮಲ್ಲಿಕ್ ತಿಳಿಸಿದ್ದಾರೆ.
‘ಯಾವುದೇ ವ್ಯವಹಾರದ ವ್ಯಕ್ತಿಯು ಸರ್ಕಾರಿ ಆಸ್ಪತ್ರೆಯಲ್ಲಿ ನಡೆಯುವ ಶಸ್ತ್ರಚಿಕಿತ್ಸೆಯಲ್ಲಿ ಭಾಗಿಯಾಗುವಂತಿಲ್ಲ. ವಿಡಿಯೊ ದೃಶ್ಯಾವಳಿಯಲ್ಲಿ ಕಂಡುಬಂದಿದ್ದು ನಿಜವೇ ಆದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು’ ಎಂದಿದ್ದಾರೆ.
ಘಟನೆ ಕುರಿತು ಮಾಹಿತಿ ನೀಡಿದ ಇಂದಿರಾಗಾಂಧಿ ಸ್ಮಾರಕ ಆಸ್ಪತ್ರೆಯ ವೈದ್ಯಕೀಯ ಸೂಪರಿಂಟೆಂಡೆಂಟ್ ಡಾ. ದೇವಶ್ರೀ ದೇಬರ್ಮಾ ಅವರು, ‘ಜಂತು ದೇವನಾಥ್ ಅವರು ಶಸ್ತ್ರಚಿಕಿತ್ಸೆ ವೇಳೆ ಇರಲಿಲ್ಲ. ಜತೆಗೆ ಯಾವುದೇ ಶಸ್ತ್ರಚಿಕಿತ್ಸೆಗೆ ಅವರು ನೆರವಾಗಿಲ್ಲ. ಆಸ್ಪತ್ರೆಯ ಕಾರ್ಯಕಲಾಪಗಳಲ್ಲಿ ಹೊರಗಿನವರು ಭಾಗಿಯಾಗುವುದನ್ನು ಬೆಂಬಲಿಸುವುದಿಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.