ಗುವಾಹಟಿ: ಅಸ್ಸಾಂನ ನಲ್‌ಬಾರಿ ಜಿಲ್ಲೆಯಲ್ಲಿ ನಡೆದ ಗ್ರೂಪ್ ‘ಸಿ’ ಹುದ್ದೆಗಳ ಪರೀಕ್ಷೆ ವೇಳೆ ಕೇಂದ್ರದೊಳಗೆ ಪ್ರವೇಶಿಸುವ ಮುನ್ನ ಮಹಿಳಾ ಕಾನ್‌ಸ್ಟೆಬಲ್‌ವೊಬ್ಬರು ನನ್ನ ಖಾಸಗಿ ಅಂಗಗಳನ್ನು ತಪಾಸಣೆ ನಡೆಸಿದರು ಎಂದು ವಿದ್ಯಾರ್ಥಿನಿಯೊಬ್ಬರು ಆರೋಪಿಸಿದ್ದಾರೆ. ಇದರ ಬೆನ್ನಲ್ಲೇ, ರಾಜ್ಯ ಸರ್ಕಾರವು ತನಿಖೆಗೆ ಆದೇಶಿಸಿದೆ.
ನಲ್‌ಬಾರಿ ಜಿಲ್ಲೆಯಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸುವಂತೆ ಡಿಜಿಪಿ ಜಿ.ಪಿ.ಸಿಂಗ್ ಅವರಿಗೆ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಆದೇಶಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುವಂತೆ ಮಹಿಳಾ ಡಿಐಜಿಗೆ ಸಿಂಗ್ ಅವರು ಸೂಚನೆ ನೀಡಿದ್ದಾರೆ.
‘ನನಗೆ ನಮ್ಮ ತಾಯಂದಿರು ಮತ್ತು ಸಹೋದರಿಯರ ಘನತೆ ಮತ್ತು ಗೌರವವು ಅತ್ಯಂತ ಮಹತ್ವದ್ದಾಗಿದೆ. ಹಾಗೆಯೇ ಅಸ್ಸಾಂ ನೇರ ನೇಮಕಾತಿ ಪರೀಕ್ಷೆಯನ್ನು ಅತ್ಯಂತ ಪಾರದರ್ಶಕವಾಗಿ ನಡೆಸಲು ನಮ್ಮ ಸರ್ಕಾರ ಬದ್ಧವಾಗಿದೆ. ಉತ್ತರ ಲಖೀಂಪುರ ಜಿಲ್ಲೆಯಲ್ಲಿ ವಿದ್ಯಾರ್ಥಿನಿಯೊಬ್ಬರ ಒಳ ಉಡುಪಿನಿಂದ ಚೀಟಿಯೊಂದನ್ನು ವಶಕ್ಕೆ ಪಡೆಯಲಾಗಿದೆ ಎಂದು ಡಿಐಜಿ ಅವರು ನನ್ನ ಗಮನಕ್ಕೆ ತಂದಿದ್ದಾರೆ’ ಎಂದು ಶರ್ಮಾ ತಿಳಿಸಿದ್ದಾರೆ.
ರಾಜ್ಯದಾದ್ಯಂತ ಭಾನುವಾರ ಬೆಳಿಗ್ಗೆ 10ರಿಂದ ಮಧ್ಯಾಹ್ನ 1.30ರ ವರೆಗೆ ನಡೆದ ಗ್ರೂಪ್–ಸಿ ಹುದ್ದೆಯ ಪರೀಕ್ಷೆ ವೇಳೆ ವೈ–ಫೈ ಹಾಗೂ ಇಂಟರ್‌ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. 2,305 ಕೇಂದ್ರಗಳಲ್ಲಿ ನಡೆದ ಪರೀಕ್ಷೆಗೆ ಒಟ್ಟು 11,23,204 ಅಭ್ಯರ್ಥಿಗಳು ಹಾಜರಾಗಿದ್ದರು.
ಸರ್ಕಾರಿ ಹುದ್ದೆಗಳಿಗೆ ಈ ಹಿಂದೆ ನಡೆಸಿದ್ದ ಪರೀಕ್ಷೆ ವೇಳೆ ಪ್ರಶ್ನೆಪತ್ರಿಕೆ ಸೋರಿಕೆ ಸೇರಿದಂತೆ ವ್ಯಾಪಕ ಅಕ್ರಮಗಳು ನಡೆದಿದ್ದವು. ಹೀಗಾಗಿ ಭಾನುವಾರ ನಡೆದ ಪರೀಕ್ಷೆ ವೇಳೆ ಇಂಟರ್‌ನೆಟ್ ಸೇವೆ ಕಡಿತಗೊಳಿಸಿದ್ದಕ್ಕೆ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳಿಂದ ತೀವ್ರ ಟೀಕೆ ವ್ಯಕ್ತವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.