ADVERTISEMENT

ರಾಷ್ಟ್ರೀಯ ಪ್ರಶಸ್ತಿ ಆಯ್ಕೆ ಸಾರ್ವಜನಿಕ ಪರಿಶೀಲನೆಗೆ ಒಳಪಡಬೇಕು: ಸಿಐಸಿ ತೀರ್ಪು

ಪಿಟಿಐ
Published 11 ಜುಲೈ 2018, 15:39 IST
Last Updated 11 ಜುಲೈ 2018, 15:39 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಅತ್ಯುತ್ತಮ ಸೇವೆಗಾಗಿ ಕೊಡುವ ರಾಷ್ಟ್ರೀಯ ಪ್ರಶಸ್ತಿಗಳಿಗೆ ಅರ್ಹರನ್ನು ಆಯ್ಕೆ ಮಾಡುವ ಪ್ರಕ್ರಿಯೆಗಳನ್ನು ಸಾರ್ವಜನಿಕ ಪರಿಶೀಲನೆಯಿಂದ ದೂರವಿಡಬಾರದು ಎಂದು ಕೇಂದ್ರ ಮಾಹಿತಿ ಆಯೋಗ (ಸಿಐಸಿ) ತೀರ್ಪು ನೀಡಿದೆ.

ವೈದ್ಯರಿಗೆ ನೀಡುವ ಡಾ.ಬಿ.ಸಿ.ರಾಯ್‌ ರಾಷ್ಟ್ರೀಯ ಪ್ರಶಸ್ತಿ ಆಯ್ಕೆ ಸಂಬಂಧ ಮಾಹಿತಿ ಹಕ್ಕು ಅರ್ಜಿದಾರರೊಬ್ಬರು ಸಲ್ಲಿಸಿದ್ದ ದೂರು ಅರ್ಜಿ ವಿಚಾರಣೆ ನಡೆಸಿದ ಆಯೋಗ ಈ ತೀರ್ಪು ಕೊಟ್ಟಿದೆ.

ಮೂರು ವಾರಗಳೊಳಗೆ ಅರ್ಜಿದಾರರಿಗೆ ಮಾಹಿತಿ ನೀಡುವಂತೆಯೂ ಭಾರತೀಯ ವೈದ್ಯಕೀಯ ಮಂಡಳಿಗೆ (ಎಂಸಿಐ) ಮಾಹಿತಿ ಆಯುಕ್ತ ಯಶೋವರ್ಧನ್‌ ಆಜಾದ್‌ ಅವರು ಗಡುವು ನೀಡಿದರು.

ADVERTISEMENT

ಡಾ.ಬಿ.ಸಿ.ರಾಯ್‌ ಪ್ರಶಸ್ತಿ ಪುರಸ್ಕೃತರು ಮತ್ತು 2008, 2009 ಹಾಗೂ 2010ರ ಸಾಲಿನ ಪ್ರಶಸ್ತಿ ಸ್ವೀಕರಿಸುವ ಸಂಭಾವ್ಯ ಅಭ್ಯರ್ಥಿಗಳ ಆಯ್ಕೆ ಮಾನದಂಡದ ಬಗ್ಗೆ ದಾಖಲೆ ನೀಡುವಂತೆ ಅರ್ಜಿದಾರ ಆರ್.ನಟರಾಜನ್‌, ಆರ್‌ಟಿಐ ಅಡಿ ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಸಚಿವಾಲಯ ಇವರ ಅರ್ಜಿಯನ್ನು, ವೈದ್ಯಕೀಯ ಶಿಕ್ಷಣ ಮತ್ತು ವೃತ್ತಿ ನಿಯಂತ್ರಿಸುವ ಎಂಸಿಐಗೆ ವರ್ಗಾಯಿಸಿತ್ತು. ಆದರೆ, ಎಂಸಿಐ ಈ ಅರ್ಜಿಗೆ ತೃಪ್ತಿಕರ ರೀತಿ ಸ್ಪಂದಿಸಿರಲಿಲ್ಲ. ಅರ್ಜಿದಾರರು ಎಂಸಿಐ ವಿರುದ್ಧ ಕೇಂದ್ರ ಮಾಹಿತಿ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ಡಾ.ಬಿ.ಸಿ.ರಾಯ್‌ ಪ್ರಶಸ್ತಿಯು ವೈದ್ಯಕೀಯ ವೃತ್ತಿಯಲ್ಲಿರುವವರಿಗೆ ಅತ್ಯುತ್ತಮ ಸೇವೆಗೆ ನೀಡುವ ಅತ್ಯುನ್ನತ ಪ್ರಶಸ್ತಿ ಎನಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.