ನವದೆಹಲಿ: 2021-22ರ ಆರ್ಥಿಕ ವರ್ಷದಲ್ಲಿ ಗೆಜೆಟೆಡ್ ಅಲ್ಲದ ಅರ್ಹ ರೈಲ್ವೆ ಉದ್ಯೋಗಿಗಳಿಗೆ 78 ದಿನಗಳ ವೇತನಕ್ಕೆ ಸರಿಸಮನಾದ ಉತ್ಪಾದಕತೆ ಸಂಬಂಧಿತ ಬೋನಸ್ (ಪ್ರೊಡಕ್ಟಿವಿಟಿ ಲಿಂಕ್ಡ್ ಬೋನಸ್– ಪಿಎಲ್‌ಬಿ) ನೀಡಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.
ಈ ನಿರ್ಧಾರದಿಂದ ಸುಮಾರು 11.27 ಲಕ್ಷ ನಾನ್ ಗೆಜೆಟೆಡ್ ರೈಲ್ವೆ ಉದ್ಯೋಗಿಗಳಿಗೆ ಪ್ರಯೋಜನ ಸಿಗುವ ಸಾಧ್ಯತೆಯಿದೆ. ಆದರೆ, ಈ ಸೌಲಭ್ಯ ಆರ್‌ಪಿಎಫ್, ಆರ್‌ಪಿಎಸ್‌ಎಫ್ ಸಿಬ್ಬಂದಿಗೆ ಅನ್ವಯಿಸದು ಎಂದು ರೈಲ್ವೆಯ ಹೇಳಿಕೆ ತಿಳಿಸಿದೆ.
ರೈಲ್ವೆ ಉದ್ಯೋಗಿಗಳಿಗೆ 78 ದಿನಗಳ ಪಿಎಲ್‌ಬಿ ಪಾವತಿಸಲು ₹1,832.09 ಕೋಟಿ ಬೇಕಾಗಲಿದ್ದು, ಇದನ್ನು ಹಣಕಾಸು ಇಲಾಖೆ ಒಪ್ಪಿಗೆ ಸಿಕ್ಕಿದೆ. ನಿಗದಿಪಡಿಸಿದ ವೇತನ ಲೆಕ್ಕಾಚಾರದ ಮಿತಿಯಂತೆ ಕನಿಷ್ಠ ₹7,000ದಿಂದ ಗರಿಷ್ಠ ₹17,951ಪಿಎಲ್‌ಬಿ ಪಾವತಿಸಬೇಕಾಗುತ್ತದೆ. ದಸರೆ/ ಆಯುಧ ಪೂಜೆಗೂ ಮುನ್ನವೇ ಪಿಎಲ್‌ಬಿ ಉದ್ಯೋಗಿಗೆ ಪಾವತಿಯಾಗಲಿದೆ.
‘78 ದಿನಗಳ ಉತ್ಪಾದಕತೆ ಸಂಬಂಧಿತ ಬೋನಸ್ ಮಂಜೂರು ಮಾಡಿರುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆಇಡೀ ರೈಲ್ವೆ ಪರಿವಾರದ ಪರವಾಗಿ ಧನ್ಯವಾದಗಳು’ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಟ್ವೀಟ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.